ಅಧ್ಯಯನ ಮತ್ತು ಕ್ರೀಡೆ ಜೊತೆ ಜೊತೆಯಲ್ಲಿಯೇ ಸಾಗಬೇಕು. ಅವು ಒಂದಕ್ಕೊಂದು ಪೂರಕ. ಕ್ರೀಡೆಯಿಂದ ಶಾರೀರಿಕ ಮಾತ್ರವಲ್ಲದೆ ಮಾನಸಿಕ ಆರೋಗ್ಯವೂ ಕೂಡ ವೃದ್ಧಿಸುತ್ತದೆ. ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಸ್ಪರ್ಧಾತ್ಮಕ ಮನೋಭಾವ ಹೆಚ್ಚಾಗುತ್ತದೆ ಎಂದು ಉಡುಪಿ ಅಜ್ಜರಕಾಡು ವಾರ್ಡ್ ನ ನಗರಸಭಾ ಸದಸ್ಯೆ ರಶ್ಮಿ ಸಿ ಭಟ್ ಹೇಳಿದರು. ಅವರು ಇತ್ತೀಚೆಗೆ ಅಜ್ಜರ ಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ಇವರ ಜಂಟಿ ಸಹಭಾಗಿತ್ವದಲ್ಲಿ ನಡೆದ ಜಿಲ್ಲಾಮಟ್ಟದ ಶೆಟ್ಲ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಬಹುಮಾನ ವಿತರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಉಡುಪಿ ಬ್ಲೂಟೂತ್ ಆಸ್ಪತ್ರೆಯ ಡಾ| ರಾಧಿಕಾ ಸೋಮಯಾಜಿ, ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ಉತ್ತಮ ಅವಕಾಶಗಳು ಕಾಯುತ್ತಿವೆ. 130 ಕೋಟಿ ಜನಸಂಖ್ಯೆಯ ಭಾರತದಲ್ಲಿ ಒಲಂಪಿಕ್ಸ್ ಪದಕ ವಿಜೇತರ ಸಂಖ್ಯೆ ಅತಿ ಕಡಿಮೆ ಇರುವುದು ಖೇದಕರ ಸಂಗತಿ. ಅವಕಾಶವನ್ನು ಬಳಸಿಕೊಂಡು ಸಾಧನೆ ಮಾಡಬೇಕಾಗಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಜಗದೀಶ್ ಕುಮಾರ್ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಗಣಪತಿ ಕೆ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ| ಎಲ್ಲಮ್ಮ, ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಲೂಯಿಸ್ ಲೋಬೋ, ಲೆಸ್ಲಿ ಕರ್ನೇಲಿಯೋ, ಪ್ರಕಾಶ್ ಭಟ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಚಂದ್ರಶೇಖರ್ ಶೆಟ್ಟಿ, ಎಸ್ ಡಿ ಎಂ ಸಿ ಅಧ್ಯಕ್ಷೆ ನವ್ಯ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳಾದ ರವೀಂದ್ರ ನಾಯಕ್, ರವಿಚಂದ್ರ ಕಾರಂತ್, ಸಾಫಲ್ಯ ಟ್ರಸ್ಟ್ ನ ನಿರೂಪಮಪ್ರಸಾದ್ ಶೆಟ್ಟಿ, ನಿವೃತ್ತ ಪ್ರಾಂಶುಪಾಲರಾದ ಹರಿಣ, ಹಂಸವತಿ, ತಾರಾದೇವಿ, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ವಿಶ್ವನಾಥ ಬಾಯರಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವಿಜಯಕುಮಾರ್ ಶೆಟ್ಟಿ, ಚಂದ್ರಶೇಖರ ಸುವರ್ಣ, ಸತೀಶ್ ಸಾಲಿಯಾನ್ ಭಾಗವಹಿಸಿದ್ದರು.
14 ರ ಒಳಗಿನ ಬಾಲಕರ ವಿಭಾಗದಲ್ಲಿ ಅಶ್ವಿನ್ ಎ ಶೆಟ್ಟಿ, ಪ್ರಜನ್ ಶೆಟ್ಟಿ, ಶಮಂತ್, ರಿಪ್ಟನ್ ಲೆನಾರ್ಡ್ ಸೆರಾವೋ ಮತ್ತು ಪ್ರೀತನ್ ಆಳ್ವ 14ರ ಒಳಗಿನ ಬಾಲಕಿಯರ ವಿಭಾಗದಲ್ಲಿ ಖುಷಿ ಆರ್ ಶೆಟ್ಟಿ, ಸನಿಹ, ದಾರಿಣಿ ಉಪಾಧ್ಯ, ವಿಸ್ಮಿತಾ ಮತ್ತು ದೃತಿ ಆರ್ ಸಾಲಿಯಾನ್ 17ರ ಬಾಲಕರ ವಿಭಾಗದಲ್ಲಿ ಗೌರವ್ ಆರ್ ದೇವಾಡಿಗ, ಸಾವನ್ ಎಸ್ ವರ್ಮ, ಪ್ರಥಮ್ ಶೆಟ್ಟಿ, ಸುಶಾಂತ್ ರಾವ್ ಮತ್ತು ಪವನ್ ಕುಮಾರ್ 17ರ ಬಾಲಕಿಯರ ವಿಭಾಗದಲ್ಲಿ ಗಣ್ಯಾ, ಪ್ರಾರ್ಥನಾ, ಅಪೂರ್ವ ಅನಘ ಮತ್ತು ಶ್ರೀನಿಶಾ ವಿಜೇತರಾಗಿ ವಿಭಾಗ ಮಟ್ಟದಲ್ಲಿ ಸ್ಪರ್ಧಿಸಲು ಅರ್ಹತೆಯನ್ನು ಗಳಿಸಿದರು. ಕ್ರೈಸ್ಟ್ ಕಿಂಗ್ ಆಂಗ್ಲ ಮಾಧ್ಯಮ ಶಾಲೆ, ಕಾರ್ಕಳ ಮತ್ತು ಸೈಂಟ್ ಜಾನ್ಸ್ ಶಾಲೆ ಶಂಕರಪುರ ಅನುಕ್ರಮವಾಗಿ ಸಮಗ್ರ ಪ್ರಥಮ ಮತ್ತು ದ್ವಿತೀಯ ಬಹುಮಾನವನ್ನು ಪಡೆದವು.
ಮುಖ್ಯ ಶಿಕ್ಷಕಿ ಇಂದಿರಾ ಸ್ವಾಗತಿಸಿದರು ರಾಮಚಂದ್ರ ಭಟ್ ಕಾರ್ಯಕ್ರಮ ನಿರೂಪಿಸಿ ಶೇಖರ್ ಬೋವಿ ಧನ್ಯವಾದಗೈದರು.