ಭಾರತೀಯ ರೈಲ್ವೆಯ ಅಮೃತಕಾಲದ ಪ್ರತಿಷ್ಟಿತ ಅಮೃತ್ ಭಾರತ್ ರೈಲು ನಿಲ್ದಾಣ ಯೋಜನೆಯಡಿಯಲ್ಲಿ ಉಡುಪಿ ನಿಲ್ದಾಣದ ಸೇರ್ಪಡಿಕೆಯ ಕುರಿತು ಇದ್ದ ಗೊಂದಲ ಪರಿಹಾರವಾಗಿದೆ. ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಕೇಳಿದ ಪ್ರಶ್ನೆಗೆ ಸ್ವತಃ ರೈಲ್ವೆ ಸಚಿವರೇ ಉತ್ತರಿಸಿ, ಅಮೃತ್ ಭಾರತ್ ರೈಲು ಯೋಜನೆಯಡಿಯಲ್ಲಿ ಉಡುಪಿಯಲ್ಲಿಯೂ ರೈಲ್ವೆ ನಿಲ್ದಾಣ ಇರುವ ಬಗ್ಗೆ ಸಂಸತ್ತಿಗೆ ಹೇಳಿಕೆ ನೀಡುವ ಮೂಲಕ ಉಡುಪಿ ಜನತೆಯ ಅನುಮಾನಗಳಿಗೆ ತೆರೆ ಎಳೆದಿದ್ದಾರೆ.
ಕರ್ನಾಟಕದ 59 ಅಮೃತ್ ಭಾರತ್ ನಿಲ್ದಾಣದಲ್ಲಿ ಇರುವ ಏಕೈಕ ಕೊಂಕಣ ರೈಲ್ವೆಯ ನಿಲ್ದಾಣ ಉಡುಪಿಯದ್ದಾಗಿದೆ. ಅಮೃತ್ ಭಾರತ್ ಯೋಜನೆಯ ಶೀಘ್ರ ಕಾರ್ಯಾರಂಭಕ್ಕೆ ರೈಲ್ವೆ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕವೂ ಸೇರಿದಂತೆ, ಈ ಯೋಜನೆಗೆ ನೀಡಲಾಗುವ ಹಣಕಾಸಿನ ನೆರವಿನ ಸದುಪಯೋಗಕ್ಕೆ ಶೀಘ್ರವೇ ಕೊಂಕಣ ರೈಲ್ವೆ ಅದಿಕಾರಿಗಳ ಸಭೆಯನ್ನು ಕರೆಯಲಿದ್ದು, ಅಲ್ಲಿ ಅತೀ ಮುಖ್ಯವಾಗಿ ಬೇಕಾಗಿರುವ ಎರಡನೇ ಚಾವಣಿ, ಪಾರ್ಕಿಂಗ್ ಮತ್ತು ಪ್ಲೋರಿಂಗ್ ಕುರಿತು ಅದಿಕಾರಿಗಳಿಗೆ ಸೂಚಿಸಲಿದ್ದಾರೆ.