Header Ads Widget

ಮಂಗಳೂರು ವಿವಿ - ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಶುಲ್ಕದ ಹೊರೆ!


ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಆರ್ಥಿಕ ಮುಗ್ಗಟ್ಟು ಎಂಬ ಕಾರಣಕ್ಕೆ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಶುಲ್ಕದ ಹೊರೆ ಹೊರಿಸಲಾಗಿದೆ. 2024-25ನೇ ಸಾಲಿನ ಸ್ನಾತಕೋತ್ತರ ಅಧ್ಯಯನಕ್ಕೆ ಪ್ರವೇಶಾತಿ ನಡೆಯುತ್ತಿದ್ದು, ವಿವಿಯ ಶೈಕ್ಷಣಿಕ ಮಾಹಿತಿ ಕೈಪಿಡಿಯಲ್ಲಿ ಅಧ್ಯಯನ ಶುಲ್ಕವನ್ನು ಏಕಾಏಕಿ ಏರಿಸಲಾಗಿದೆ. ಕಲಾ ವಿಭಾಗಕ್ಕೆ ಒಳಪಟ್ಟ ಕನ್ನಡ, ಕೊಡವ, ತುಳು, ಇಂಗ್ಲಿಷ್, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ಎಲ್ಲ ಅಧ್ಯಯನ ವಿಭಾಗಗಳಿಗೂ ಶುಲ್ಕವನ್ನು ಏರಿಸಿದ್ದು, ರಾಜ್ಯ ಸರ್ಕಾರದ ಗ್ಯಾರಂಟಿ ಹೊರೆಯನ್ನು ವಿದ್ಯಾರ್ಥಿಗಳ ತಲೆಗೆ ಹೊರಿಸಿದಂತಾಗಿದೆ.

ಈಗಾಗಲೇ ಮಂಗಳೂರು ವಿವಿಯ ಸಂಧ್ಯಾ ಕಾಲೇಜಿನಲ್ಲಿ ಪದವಿ ವಿಭಾಗಕ್ಕೆ ಈ ಬಾರಿ ಪ್ರವೇಶ ಮಾಡಿಕೊಂಡಿಲ್ಲ. ಕನಿಷ್ಠ 20 ವಿದ್ಯಾರ್ಥಿಗಳು ಇರರಬೇಕೆಂಬ ಕಡ್ಡಾಯ ನಿಯಮದಿಂದಾಗಿ ಬಿಕಾಂ, ಬಿಎ, ಬಿಸಿಎ ಪ್ರವೇಶ ಆಗಿಲ್ಲ. ಆಮೂಲಕ ಅಲ್ಲಿನ ಅತಿಥಿ ಉಪನ್ಯಾಸಕ ಸಿಬಂದಿಯ ಕೆಲಸಕ್ಕೆ ಕತ್ತರಿ ಬಿದ್ದಿದೆ. ಇದೀಗ ಸ್ನಾತಕೋತ್ತರ ಅಧ್ಯಯನಕ್ಕೆ ಅಡ್ಮಿಶನ್ ನಡೆಯುತ್ತಿದ್ದು, ವಿವಿಯ ವೆಬ್ ಸೈಟಿನಲ್ಲಿ ನೀಡಿರುವ ಮಾಹಿತಿ ಪ್ರಕಾರ ಕೆಲವು ವಿಭಾಗದಲ್ಲಿ ಶುಲ್ಕವನ್ನು ದುಪ್ಪಟ್ಟು ಮಾಡಲಾಗಿದೆ. ತುಳು, ಕೊಡವ, ಕೊಂಕಣಿ ಎಂಎ ಅಧ್ಯಯನವನ್ನು ಸ್ಥಳೀಯ ಭಾಷೆಯೆಂಬ ಆಸಕ್ತಿಯಿಂದ ವಿದ್ಯಾರ್ಥಿಗಳು ಕಲಿಯುತ್ತಿದ್ದರು. ಉದ್ಯೋಗದ ಭರವಸೆ ಇಲ್ಲದಿದ್ದರೂ, ಸ್ಥಳೀಯ ಭಾಷೆಯ ಜನಪದ, ಇತಿಹಾಸ ಅಧ್ಯಯನ ಆಗಬೇಕೆಂಬ ಮಹತ್ತರ ಉದ್ದೇಶದಿಂದ ಈ ಅಧ್ಯಯನ ವಿಭಾಗ ತೆರೆಯಲಾಗಿತ್ತು. ಇದೇ ಕಾರಣಕ್ಕೆ ಇದರ ಕಲಿಕೆಗೆ ಶುಲ್ಕವನ್ನು ಕಡಿಮೆ ಇರಿಸಲಾಗಿತ್ತು. ಈ ಹಿಂದಿನ ವಿವಿಯ ಸಿಂಡಿಕೇಟ್ ಸದಸ್ಯರು ನಿಗದಿತ ಶುಲ್ಕದಿಂದಲೂ ನಾಲ್ಕು ಸಾವಿರ ಕಡಿತ ಮಾಡಿದ್ದರು.

ಉಪನ್ಯಾಸಕರು ಹೇಳುವ ಪ್ರಕಾರ, ತುಳು, ಕೊಂಕಣಿ ಎಂಎಗಳಿಗೆ ಕಡಿತದ ಬಳಿಕ 11 ಸಾವಿರದಷ್ಟು ಶುಲ್ಕ ಇತ್ತು. ಆದರೆ, ಇದೀಗ ಕಲಾ ವಿಭಾಗದ ಎಲ್ಲ ಸ್ನಾತಕೋತ್ತರ ಅಧ್ಯಯನಕ್ಕೂ ಒಂದೇ ರೀತಿಯ ಶುಲ್ಕ ವಿಧಿಸಲಾಗಿದ್ದು, ಅದನ್ನು 23 ಸಾವಿರಕ್ಕೆ ಏರಿಸಲಾಗಿದೆ. ಇಕನಾಮಿಕ್ಸ್, ಸೋಶಿಯಲಾಜಿ, ಪೊಲಿಟಿಕಲ್ ಸೈನ್ಸ್, ಹಿಸ್ಟರಿ ಎಂಎಗಳಿಗೆ 16 ಸಾವಿರ ಇದ್ದ ಶುಲ್ಕವನ್ನು 23 ಸಾವಿರಕ್ಕೆ ಏರಿಸಲಾಗಿದೆ. ಇದರಿಂದಾಗಿ ಸರಕಾರಿ ಕಾಲೇಜುಗಳಿಗೆ ಬರುವ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆ ಹೊರಿಸಲಾಗಿದೆ. ಒಂದೆಡೆ ರಾಜ್ಯ ಸರಕಾರ ಗ್ಯಾರಂಟಿ ಯೋಜನೆ ಹೊರೆಯಿಂದಾಗಿ ಯಾವುದಕ್ಕೂ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಇದೇ ಕಾರಣಕ್ಕೆ ಮಂಗಳೂರು ವಿವಿಗೂ ನಿರ್ವಹಣೆ ಶುಲ್ಕವನ್ನೂ ಸರಕಾರ ನೀಡಿಲ್ಲ ಎನ್ನುವ ಮಾಹಿತಿಯಿದೆ. ಇದರಿಂದಾಗಿ ಮೊದಲೇ ಆರ್ಥಿಕ ಮುಗ್ಗಟ್ಟಿನಲ್ಲಿದ್ದ ಮಂಗಳೂರು ವಿವಿಗೆ ಈಗ ಹಣಕಾಸಿನ ಕೊರತೆ ಇದೆ. ಈ ಕೊರತೆಯನ್ನು ನೀಗಿಸುವುದಕ್ಕೋ ಏನೋ ವಿವಿಯ ಎಲ್ಲ ಸ್ನಾತಕೋತ್ತರ ಅಧ್ಯಯನಗಳಿಗೂ ಶುಲ್ಕವನ್ನು ಏರಿಸಿದ್ದು, ಬಡ ವಿದ್ಯಾರ್ಥಿಗಳಿಗೆ ಬರೆ ಎಳೆದಿದ್ದಾರೆ.

ಇದಲ್ಲದೆ, ಇತರ ಅಧ್ಯಯನ ವಿಭಾಗಗಳಾದ ಸೈನ್ಸ್, ಎಂಬಿಎ ವಿಭಾಗಕ್ಕೂ ಹೆಚ್ಚುವರಿ 10-15 ಸಾವಿರದಷ್ಟು ಶುಲ್ಕ ಹೆಚ್ಚಳ ಮಾಡಲಾಗಿದೆ. ಪ್ರತೀ ಸ್ನಾತಕೋತ್ತರ ಅಧ್ಯಯನ ವಿಭಾಗಕ್ಕೂ ಕನಿಷ್ಠ 15 ವಿದ್ಯಾರ್ಥಿಗಳು ಇರಬೇಕೆಂದು ಕಡ್ಡಾಯ ಮಾಡಲಾಗಿದೆ. ಇಲ್ಲದೇ ಇದ್ದರೆ, ಕೋರ್ಸ್ ಮುಂದುವರಿಕೆ ಇಲ್ಲ ಎಂಬ ಮಾಹಿತಿಯನ್ನೂ ಉಪನ್ಯಾಸಕರಿಗೆ ನೀಡಲಾಗಿದೆ. ಇದರಿಂದ ಪರ್ಮನೆಂಟ್ ಇರುವ ಬೋಧಕ ವರ್ಗಕ್ಕೆ ತೊಂದರೆ ಇರುವುದಿಲ್ಲ. ಏನಿಲ್ಲ ಅಂದ್ರೂ ತಿಂಗಳ ಕೊನೆಗೆ ಲಕ್ಷಕ್ಕಿಂತ ಹೆಚ್ಚು ವೇತನ ಬರುತ್ತದೆ. ಆದರೆ ವಾರ್ಷಿಕ ನೆಲೆಯಲ್ಲಿ ನೇಮಕಗೊಳ್ಳುವ ಅತಿಥಿ ಉಪನ್ಯಾಸಕರಿಗೆ ಕೆಲಸ ಇಲ್ಲದಾಗುವ ಸ್ಥಿತಿಯಾಗಿದೆ. ಇದರ ಜೊತೆಗೆ, ಕಡಿಮೆ ಶುಲ್ಕದಲ್ಲಿ ಅಧ್ಯಯನಕ್ಕಾಗಿ ಬರುತ್ತಿದ್ದ ಬಡ ವಿದ್ಯಾರ್ಥಿಗಳಿಗೂ ತೊಂದರೆಯಾಗಿದೆ. ಈ ಬಗ್ಗೆ ವಿದ್ಯಾರ್ಥಿ ಸಂಘಟನೆಗಳಾಗಲೀ, ಅಧ್ಯಾಪಕ ಸಂಘಟನೆಗಳಾಗಲೀ, ಶಾಸಕ ಪ್ರತಿನಿಧಿಗಳಾಗಲೀ ಧ್ವನಿ ಎತ್ತುತ್ತಿಲ್ಲ ಎಂಬ ನೋವನ್ನೂ ಉಪನ್ಯಾಸಕರು ವ್ಯಕ್ತಪಡಿಸಿದ್ದಾರೆ.