ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [ಮಾಹೆ] ವತಿಯಿಂದ ಮಣಿಪಾಲ್ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸಾಯನ್ಸಸ್ [ಎಂಕಾಪ್ಸ್]ನ ಫಾರ್ಮಾಸ್ಯುಟಿಕ್ಸ್ ವಿಭಾಗದ ವತಿಯಿಂದ ಮಣಿಪಾಲದಲ್ಲಿ ಆಗಸ್ಟ್ 29 ರಿಂದ 31 ರವರೆಗೆ 3 ನೆಯ ರಾಷ್ಟ್ರೀಯ ಮಣಿಪಾಲ್ ಫಾರ್ಮಾಸ್ಯುಟಿಕ್ಸ್ ಸಮಾವೇಶ [ಎಂಪಿಕಾನ್-2024] ಆಯೋಜನೆಗೊಂಡಿತು. ಮಾಹೆಯ ಎಂಕಾಪ್ಸ್ ಆವರಣದಲ್ಲಿ ಔಷಧೀಯ ವಿಜ್ಞಾನದ ತಜ್ಞರು, ಸಂಶೋಧಕರು, ವೃತ್ತಿಪರರನ್ನು ಕಲೆಹಾಕುವಲ್ಲಿ ಮಣಿಪಾಲ್ ಫಾರ್ಮಾಸ್ಯುಟಿಕ್ಸ್ ಸಮಾವೇಶ [ಎಂಪಿಕಾನ್-2024] ಯಶಸ್ವಿಯಾಯಿತು. ‘ಫಾರ್ಮಾಸ್ಯುಟಿಕಲ್ಸ್ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನದ ಒಲವುಗಳು’ ಎಂಬ ವಿಷಯ ಕೇಂದ್ರಿತವಾಗಿ, ಔಷಧ ಉದ್ಯಮವನ್ನು ರೂಪಿಸುತ್ತಿರುವ ಇತ್ತೀಚೆಗಿನ ಸುಧಾರಿತ ತಂತ್ರಜ್ಞಾನದ ಬಗ್ಗೆ ಸಮಗ್ರ ಅವಲೋಕನವನ್ನು ಈ ಸಮಾವೇಶದಲ್ಲಿ ಮಾಡಲಾಯಿತು. ವಿವಿಧ ಔಷಧೀಯ ವಿಜ್ಞಾನ ಸಂಸ್ಥೆಗಳ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಉದ್ಯಮಗಳ ಪ್ರತಿನಿಧಿಗಳು ಸೇರಿದಂತೆ 200 ಮಂದಿ ಪ್ರಮುಖರು ಈ ಸಮಾವೇಶದಲ್ಲಿ ಭಾಗವಹಿಸಿದ್ದರು.
ಸಮಾವೇಶದಲ್ಲಿ ಫಾರ್ಮಾಸ್ಯುಟಿಕಲ್ಸ್ ಉದ್ಯಮದ ತಜ್ಞರು ಔಷಧೀಯ ವಿಜ್ಞಾನದ ಇತ್ತೀಚೆಗಿನ ತಂತ್ರಜ್ಞಾನದ ಬೆಳವಣಿಗೆಗಳು ಮತ್ತು ಅವುಗಳ ಅನ್ವಯಗಳ ಕುರಿತು ಪ್ರಧಾನ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ನಾಲ್ಕು ಫಾರ್ಮಾಸ್ಯುಟಿಕಲ್ಸ್ ವಿಭಾಗಗಳಲ್ಲಿ ಸಂಶೋಧನೆ ಮತ್ತು ಪ್ರಬಂಧಗಳ ಮಂಡನೆ, ಪೋಸ್ಟರ್ ಪ್ರಸ್ತುತಿ, ಮೌಖಿಕ ಸ್ಪರ್ಧೆಗಳು ಜರಗಿದವು. ಆಗಸ್ಟ್ 29 ರಂದು ಸಮಾವೇಶ-ಪೂರ್ವ ಕಾರ್ಯಾಗಾರವನ್ನು ನಡೆಸಲಾಯಿತು.
ಎಂಕಾಪ್ಸ್ನ ಪ್ರಾಂಶುಪಾಲರಾದ ಡಾ. ಶ್ರೀನಿವಾಸ ಮುತಾಲಿಕ್ ಅವರು, ‘ಪ್ರಸ್ತುತ ಸಮಾವೇಶದಲ್ಲಿ ಭಾಗವಹಿಸಿದವರು ಔಷಧ ವಿಜ್ಞಾನ ಕ್ಷೇತ್ರದಲ್ಲಿ ಪ್ರಸ್ತುತ ಕಾಲಘಟ್ಟದ ನಾವೀನ್ಯ ಮತ್ತು ಪರಿವರ್ತನೀಯ ಪ್ರಗತಿಗಳ ಕುರಿತ ಅನುಭವಗಳನ್ನು ಗಳಿಸುತ್ತಾರೆ. ಈ ಸಮಾವೇಶವು ಔಷಧ ಸಂಶೋಧನ ಕ್ಷೇತ್ರದಲ್ಲಿ ಮಹತ್ತ್ವದ ಪರಿಣಾಮ ಬೀರಲಿದೆ’ ಎಂಬ ಆಶಯ ವ್ಯಕ್ತಪಡಿಸಿದರು.
ಮಣಿಪಾಲ್ ಫಾರ್ಮಾಸ್ಯುಟಿಕ್ಸ್ ಸಮಾವೇಶ [ಎಂಪಿಕಾನ್-2024]ನ ಸಂಯೋಜನ ಕಾರ್ಯದರ್ಶಿಯಾಗಿರುವ ಡಾ. ಶೈಲಾ ಲೂಯಿಸ್ ಅವರು ಮಾತನಾಡುತ್ತ, ’ಲ್ಯೂಪಿನ್, ನೊವೋ ನಾರ್ಡಿಸ್ಕ್, ಬಾರ್ಕ್ ಅಮ್ನೀಲ್ ಫಾರ್ಮಾಸ್ಯುಟಿಕಲ್ಸ್, ಬಯೋಪ್ಲಸ್ ಲೆಫ್ ಸಾಯನ್ಸಸ್ ಮತ್ತು ಆರ್ಸಿ2 ಫಾರ್ಮಾ ಸೊಲ್ಯುಶನ್ಸ್ ಪ್ರಮುಖ ಸಂಸ್ಥೆಗಳ ತಜ್ಞರು ಪ್ರಸ್ತುತ ಸಮಾವೇಶದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಉಪಸ್ಥಿತರಿದ್ದು, ಈ ಸಮಾವೇಶವು ಶೈಕ್ಷಣಿಕ-ಔದ್ಯಮಿಕ ಕ್ಷೇತ್ರಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮಹತ್ತ್ವದ ಉಪಕ್ರಮ [ಇನಿಶಿಯೇಟಿವ್] ವಾಗಿ ಆಯೋಜನೆಗೊಂಡಿದೆ. ಫಾರ್ಮಾಸ್ಯುಟಿಕಲ್ಸ್ನ ಹೊಸ ತಂತ್ರಜ್ಞಾನದ ಸಂಶೋಧನೆ-ಅನ್ವಯಗಳಿಗೆ ಸಂಬಂಧಿಸಿ ಸಹಭಾಗಿತ್ವದ ಬೆಳವಣಿಗೆಗಳಿಗೆ ಪೂರಕವಾದ ಸಮಾನವೇದಿಕೆಯನ್ನು ಈ ಸಮಾವೇಶ ಕಲ್ಪಿಸಿಕೊಟ್ಟಿದೆ’ ಎಂದರು.
ಫಾರ್ಮಾಸ್ಯುಟಿಕಲ್ ತಂತ್ರಜ್ಞಾನದ ವ್ಯಾಪಕ ಪ್ರಗತಿಯನ್ನು ಪ್ರತಿಬಿಂಬಿಸುವಲ್ಲಿ ಈ ಸಮಾವೇಶವು ಯಶಸ್ವಿಯಾಯಿತು ಮತ್ತು ಮಾಹೆಯ ಘಟಕವಾಗಿರುವ ಎಂಕಾಪ್ಸ್ ಸಂಸ್ಥೆಯು ಜ್ಞಾನಪ್ರಸರಣ ಮತ್ತು ಸಹಭಾಗಿತ್ವದ ಮೂಲಕ ಔಷಧೀಯ ವಿಜ್ಞಾನ ಕ್ಷೇತ್ರದಲ್ಲಿ ಸುಧಾರಣೆಗಳನ್ನು ತರುವ ಬದ್ಧತೆಯನ್ನು ಹೊಂದಿದ್ದು ಈ ಆಶಯಕ್ಕೆ ಪೂರಕವಾಗಿ ಸಮಾವೇಶ ಸಂಪನ್ನಗೊಂಡಿತು.
ಸಮಾವೇಶದ ಕೊನೆಗೆ ಮೊಸರು ಕುಡಿಕೆ, ಪಿಲಿನಲಿಕೆ, ಧೋಲ್ ತಾಸೆ ಸೇರಿದಂತೆ ’ವ್ಯಾಘ್ರ ಲೀಲಾ’ ಸಾಂಸ್ಕೃತಿಕ ವೈವಿಧ್ಯವನ್ನು ಎಂಕಾಪ್ಸ್ ಪ್ರಸ್ತುತಿಪಡಿಸಿತು,
ಮಾಹೆಯ ಎಂಕಾಪ್ಸ್ ಸಂಸ್ಥೆಯು ಎನ್ಐಆರ್ಎಫ್ನ 2024 ಶ್ರೇಯಾಂಕದಲ್ಲಿ ಭಾರತದ ಅತ್ಯುನ್ನತ ಫಾರ್ಮಸಿ ಸಂಸ್ಥೆಗಳಲ್ಲಿ 8ನೆಯ ಸ್ಥಾನವನ್ನು ಪಡೆದಿರುವುದು ಇಲ್ಲಿ ಉಲ್ಲೇಖಾರ್ಹವಾಗಿದೆ.