ಎಲ್ಲರನ್ನೂ ಆಕರ್ಷಿಸುವ ಶ್ರೀ ಕೃಷ್ಣನನ್ನು ಜಗದ ತುಂಬ ಜನರೆಲ್ಲ ಆರಾಧಿಸಿ, ಪೂಜಿಸಿ, ಪ್ರೀತಿಸುವವರೇ . ಶ್ರೀ ಕೃಷ್ಣಾವತಾರದಲ್ಲಿ ಶಿಶು ರೂಪಿ ಭಗವಂತನ ಲೀಲಾ ವಿನೋದಗಳು ಅಸದಳ. ಭುವಿಯಲ್ಲಿ ಅವತಾರ ಎತ್ತಿದ ಕ್ಷಣ, ತನ್ನ ಅಮೋಘ ಕಾಂತಿಯಿಂದ ತಾಯಿ ದೇವಕಿಯನ್ನು ಪರವಶಗೊಳಿಸಿ ಸುತ್ತಲೂ ಆನಂದದ ಪ್ರಭೆಯನ್ನು ಹರಿಸಿ ಸರ್ವರನ್ನು ಅನುಗ್ರಹಿಸಿದವನು ಅಖಿಲಪ್ರದ ಶ್ರೀ ಕೃಷ್ಣ. ಹೆತ್ತ ತಾಯಿ ಮಮತೆಯ ಮಾತೆಗೆ ದೇವಕಿ ಕೃಷ್ಣನಾಗಿ ಆಕೆಗೆ ಬಂಧನದಿಂದ ಮುಕ್ತಿ ನೀಡಿ ತನ್ನ ಅವತಾರದಿಂದ ಮಾತೃ ಹೃದಯಕ್ಕೆ ಆಹ್ಲಾದ ತಂದ ಭಗವಂತ. ನಿತ್ಯ ನಿರಂತರ ದುಷ್ಟ ಶಿಕ್ಷಕ ಶಿಷ್ಟರಕ್ಷಕನಾಗಿ ,ಜಗತ್ ವಂದ್ಯನಾಗಿ ಆ ಬಾಲವೃದ್ಧ ರಾದಿಯಾಗಿ ಎಲ್ಲರಿಂದಲೂ ಪೂಜಿಸಲ್ಪಡುವವನು ಶ್ರೀಕೃಷ್ಣ.
ಮಥುರೆಯಿಂದ ನಂದ ಗೋಕುಲಕ್ಕೆ ಬಂದು ಯಶೋದೆಯ ಮಡಿಲಲ್ಲಿ ಬೆಳೆದ ಶ್ರೀ ಕೃಷ್ಣ ತಾಯಿಯ ವಾತ್ಸಲ್ಯಕ್ಕೊಂದು ಭಾಷ್ಯ ಬರೆದವನು. ಶಿಶುವಾಗಿದ್ದಾಗಲೇ ಆರಂಭವಾದ ಅವನ ಲೀಲಾ ವಿನೋದಗಳು ತಾಯಿ ಯಶೋದೆಗೊಂದು ಕೌತುಕ, ಆಕೆಗೆ ಅದೊಂದು ಸಂಭ್ರಮ, ವರ್ಣಿಸಲಾಗದ ಸಡಗರ, ಊಹೆಗೂ ನಿಲುಕದ ಸಂತಸ. ತಾಯ ಹೃದಯಕ್ಕೆ ಆಹ್ಲಾದ ನೀಡಿದ ಸಂಪ್ರೀತಿ.ಸುತ್ತಲಿದ್ದ ಗೋಪಾಲಕರಲ್ಲಿ, ಗೋಪಿಕಾ ಸ್ತ್ರೀಯರಲ್ಲಿ ,ತಮಗೂ ಅಂತಹ ಮಗನಿದ್ದಿದ್ದರೆ ಎಂಬ ಭಾವ ಸ್ಫುರಿಸುವ ಶಿಶುರೂಪಿನ ಆನಂದ ಈ ಶ್ರೀಕೃಷ್ಣ.
ಭಗವಂತ ಶ್ರೀ ಕೃಷ್ಣಾವತಾರ ಎತ್ತಿದ್ದೇ ತನ್ನ ಲೀಲೆಗಳನ್ನು ಸಾಮಾನ್ಯ ಮನುಜರಿಗೆ ತೋರಿಸಲೋಸುಗ, ಆ ಮೂಲಕ ತಾನು ದುಷ್ಟ ಶಿಕ್ಷಕ,ಶಿಷ್ಟ ರಕ್ಷಕನೆಂದು ಸರ್ವರಿಗೂ ಮನದಟ್ಟು ಮಾಡಲೋಸುಗ. ತನ್ನನ್ನು ಸಾಯಿಸಲು ಬಂದ ರಕ್ಕಸಿ ಪೂತನಿಯ ವಿಷ ತುಂಬಿದ ಎದೆಹಾಲು ಕುಡಿದು, ಆಕೆ ಪಶ್ಚಾತ್ತಾಪ ಪಟ್ಟಾಗ ಮೋಕ್ಷ ಕರುಣಿಸಿ ತಾಯ ಮಮತೆಗೆ ಆಹ್ಲಾದ ಮೆರೆದ ಭಕ್ತ ವತ್ಸಲ ಶ್ರೀ ಕೃಷ್ಣ. ಪಾಂಡು ಪತ್ನಿ, ಪಾಂಡವರೈವರ ತಾಯಿ ಕುಂತೀದೇವಿ ತನ್ನ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಕಷ್ಟದಲ್ಲೂ ಇಷ್ಟದಲ್ಲೂ ಮೊರೆ ಹೋದದ್ದು,ಶರಣಾಗತೆಯಾದದ್ದು ಸರ್ವ ಶಕ್ತನಾದ ಈ ಪಾರ್ಥ ಸಾರಥಿಗೆ. ತುಂಬಿದ ಸಭೆಯಲ್ಲಿ ವಸ್ತ್ರಾಪಹರಣವಾದಾಗ ತನ್ನನ್ನೇ ನಂಬಿ ತನ್ನ ಮಾನ ಕಾಪಾಡಲು ಪಾಂಚಾಲಿ ಮೊರೆ ಇಟ್ಟಾಗ ಆಪತ್ಭಾಂಧವನಾಗಿ ಅಕ್ಷಯಾಂಬರವನಿತ್ತು ಅನುಗ್ರಹಿಸಿದ್ದು ಇದೇ ಭಕ್ತ ವತ್ಸಲ ಭಗವಂತ.
ಶ್ರೀ ಕೃಷ್ಣನ ಲೀಲಾ ವಿನೋದಗಳು ಜಗತ್ತಿನ ಮಾತೆಯರಿಗೆ ಬಲು ಇಷ್ಟ. ಹಾಗೆಂದೇ ಇಂದಿಗೂ ಬಹುತೇಕ ಪುಟ್ಟ ಮಕ್ಕಳ ತಾಯಂದಿರು ತಮ್ಮ ಮುದ್ದು ಮಕ್ಕಳಿಗೆ ಕೃಷ್ಣ ವೇಷವನ್ನು ಹಾಕಿ ತಮ್ಮ ಮಕ್ಕಳಲ್ಲೂ ಬಾಲಕೃಷ್ಣನನ್ನು ನೋಡುವ ಸಂಪ್ರದಾಯ, ಆ ಮೂಲಕ ಸಂಭ್ರಮಿಸುವ ಹಂಬಲ.ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾವಸರದಲ್ಲಿ ಪುಟಾಣಿಗಳು ಕೃಷ್ಣವೇಷ ಧರಿಸಿ ಮನೆ ಮನೆಗಳಲ್ಲಿ ಶ್ರೀ ಕೃಷ್ಣನ ಪ್ರತಿರೂಪದಂತೆ ಮನಸೆಳೆಯುತ್ತವೆ. ಒಂದೊಮ್ಮೆ ನಗುತ್ತಾ, ಮತ್ತೊಮ್ಮೆ ಅಳುತ್ತಾ, ಮಗದೊಮ್ಮೆ ಚೇಷ್ಟೆ ಮಾಡುತ್ತಾ, ಮತ್ತಿನ್ನೊಂದೊಮ್ಮೆ ಅಮ್ಮನ ಸೀರೆಯಲ್ಲಿ ಅಡಗುತ್ತಾ, ಆಗಾಗ ಅಮ್ಮನ ಕೊರಳ ಸುತ್ತ ಜೋತು ಬೀಳುತ್ತಾ,ಕೆಲವೊಮ್ಮೆ ಹೆಗಲ ಮೇಲೆ ಅರೆ ನಿದ್ರಿಸುತ್ತಲಿರುತ್ತಾರೆ.
ಇನ್ನೊಂದಿಷ್ಟು ಪುಟಾಣಿ ಕೃಷ್ಣರು ಜನ್ಮಾಷ್ಟಮಿಯ ಸಂಭ್ರಮದಲ್ಲಿ ತನ್ನ ತಾಯಿಯೊಂದಿಗೆ ದೇವಕೀ ಕೃಷ್ಣರಾಗಿ,ಯಶೋದಾ ಕೃಷ್ಣರಾಗಿ ವೇದಿಕೆಯಲ್ಲಿ ಮಿಂಚಿದರೆ,ಮತ್ತೂ ಒಂದಷ್ಟು ಬಾಲಕೃಷ್ಣ ರು ರಥಬೀದಿಯ ತುಂಬ ಸಂಚರಿಸುತ್ತಾ ಅಲ್ಲಿರುವ ಆಟದ ವಸ್ತುಗಳನ್ನು ಕೊಡಿಸಲು ಹಟಮಾಡುತ್ತಾ ಎಲ್ಲರ ಗಮನಸೆಳೆಯುತ್ತಿರುತ್ತಾರೆ. ಅಲ್ಲೊಂದು ಇಲ್ಲೊಂದು ಕೃಷ್ಣ ವೇಷಧಾರಿಗಳು ತಮ್ಮ ಅಪ್ಪನ ಹೆಗಲೇರಿ ಮೊಸರುಕುಡಿಕೆ ಸಂಭ್ರಮವನ್ನು ವಿಸ್ಮಯದಿಂದ ವೀಕ್ಷಿಸುತ್ತಿದ್ದರೆ ಅವರನ್ನು ನೋಡುವುದೇ ಸೊಬಗು.
ಅದರಲ್ಲೂ ವೇದಿಕೆಯಲ್ಲಿ ಕೃಷ್ಣ ವೇಷ ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳ ಮನೆಯವರು ಹಾಗು ತಾಯಿ ಯಶೋದೆಯ ಚಡಪಡಿಕೆ, ಆತಂಕ, ಸಂತೋಷ,ಉತ್ಸಾಹದ ರೀತಿಯನ್ನು ನೋಡುವುದೇ ಚೆಂದ. ಕೃಷ್ಣ ವೇಷ ಸ್ಪರ್ಧೆಗೆ ಒಂದಷ್ಟು ಪೂರ್ವ ತಯಾರಿ,ಜನ್ಮಾಷ್ಟಮಿಯ ಕೆಲದಿನಗಳ ಮುಂಚಿನಿಂದ ಆಕೆಯ ಗಡಿಬಿಡಿ, ತನ್ನ ಮಗುವನ್ನು ಶೃಂಗರಿಸಲು ಪೇಟೆ ಸುತ್ತಿ ಅಂಗಡಿ ತಿರುಗಿ ಬರುವ ಆಯಾಸ, ಮಗುವನ್ನು ಸಮಾಧಾನಿಸಿ ಸುಧಾರಿಸಲು ಆಕೆ ಪಡುವ ಪರಿಪಾಟಲು ಇವೆಲ್ಲ ತೊಂದರೆಗಳು ಆಕೆಗೆ ತನ್ನ ಮುದ್ದು ಮಗುವನ್ನು ಮುದ್ದು ಕೃಷ್ಣನಾಗಿ ನೋಡುವ ಸೌಭಾಗ್ಯದ ಮುಂದೆ ನಗಣ್ಯ.
ತನ್ನ ಪುಟಾಣಿಯ ಆಟಗಳನ್ನು ಕಣ್ತುಂಬಿಕೊಳ್ಳುವ ಆಕೆ ತನ್ನ ಮಗುವಿನಲ್ಲಿ ಶ್ರೀಕೃಷ್ಣನನ್ನು ಕಂಡು ಸಂತಸ ಪಟ್ಟು ಸಂಭ್ರಮಿ ಸುತ್ತಾಳೆ . ಅಂತೂ ಇಂತೂ ದ್ವಾಪರ ಯುಗದಿಂದ ಕಲಿಯುಗದವರೆಗೂ ಶ್ರೀಕೃಷ್ಣನೆಂದರೆ ತಾಯಿಯ ಮಮತೆಗೊಂದು ಕನ್ನಡಿ, ಮಾತೆಯ ವಾತ್ಸಲ್ಯಕ್ಕೊಂದು ಮುನ್ನುಡಿ,ಅಮ್ಮನೆಂಬ ಅಕ್ಕರೆಗೊಂದು ನವಿಲುಗರಿ. ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು.
~ಪೂರ್ಣಿಮಾ ಜನಾರ್ದನ ಕೊಡವೂರು