Header Ads Widget

ಕೃಷ್ಣಾಷ್ಟಮಿಗೆ ವೇಷ ಯಾಕೆ? ~ವೀಣಾ ಬನ್ನಂಜೆ



ಅಷ್ಟಮಿ ಎಂದರೆ ಉಂಡೆ ಚಕ್ಕುಲಿ. ಅಷ್ಟಮಿ ಎಂದರೆ ವೇಷ. ಕೃಷ್ಣ ಹುಟ್ಟಿದ ಎಂದರೆ ಮೊಸರು ಕುಡಿಕೆಯ ಸಂಭ್ರಮ. ಕೃಷ್ಣ ಜನ್ಮಾಷ್ಟಮಿ ಎಂದರೆ ಮಧ್ಯರಾತ್ರಿ ದೇವಪೂಜೆ. ದೇವರಿಗೆ ನಾವೇ ಅರ್ಘ್ಯ ಬಿಡುವ ವಿಶೇಷ. ಇವೆಲ್ಲ ಕಣ್ಣ ಮುಂದೆ ಹಾಯುತ್ತವೆ. ಕೃಷ್ಣ ಒಬ್ಬನೇ ಹೆಣ್ಣು, ಗಂಡು - ಲಿಂಗ, ಜಾತಿ ಭೇದ ಇಲ್ಲದೇ ಅರ್ಘ್ಯ ಸ್ವೀಕರಿಸುವವ. ಆ ರಾತ್ರಿ ಪೂಜೆ ಎಲ್ಲರಿಗೂ ಲಭ್ಯ. ಆನಂತರದ ಆನಂದ ಉಂಡೆ ಚಕ್ಕುಲಿ. ಅಷ್ಟು ಹೊತ್ತು ಉಪವಾಸ ಮಾಡಿದ್ದಕ್ಕೆ ವಿಶೇಷ ಬೋನಸ್. 


ಇದು ಒಂದು ಭಾಗ.  ಬೆಳಗಿನಿಂದ ನಮಗೆ ಇನ್ನೊಂದು ಸಂಭ್ರಮ. ಕಿಟಕಿಯತ್ತಲೇ ಕಣ್ಣು. ಗುರುತಿರುವವರು ಗುರುತಾಗದಂತೆ ಬರುತ್ತಾರೆ. ಮುಖಕ್ಕೆ ಬಣ್ಣ. ಮೈಗೆ ಬೇರೆ ಬೇರೆ ಉಡುಪು. ಅವರು ಬಂದು ನಿಂತಾಗ ನಮಗೆ ಏನೋ‌ ಖುಷಿ. ನೋಟವೊಂದು ಹಬ್ಬ. ಅವರ ನಡೆ ನುಡಿ ಹಾಸ್ಯದ ಭಾಗ. ಅವರಿಗೆ ಒಂದೆರಡು ನಾಣ್ಯ ಕೊಟ್ಟರಾಯಿತು. ಅವರು ಹೋದರೆನ್ನುವುದರ ಒಳಗೆ ಮತ್ತೊಬ್ಬರು ಹಾಜರು. ಅಮ್ಮ ನಮ್ಮನ್ನು ಒಳಗೆ ಕರೆದು ಬಾಗಿಲು ಹಾಕುವುದುಂಟು. ಆದರೂ ಅದು ಮುಗಿಯದ ಕುತೂಹಲ. ಅಮ್ಮ ಬಯ್ದರೆ ಬಯ್ಯಲಿ. ವೇಷದ ಆಕರ್ಷಣೆ ಬಿಡಲಾಗದು. 


ಅದು ಎಂತೆಂಥ ವೇಷ? ಸಿರ್ಕ್ ಸಿದ್ಧಿ ಅಂತ ಒಬ್ಬಳು. ದೊಡ್ಡ ನಿತಂಬ, ಘನ ಸ್ತನ... ಅವಳದು ಅರ್ಧ ಸೀರೆ ಲಂಗದ ವೇಷ. ಅವಳದು ಒಂದು ವಿಚಿತ್ರ ನಾಟ್ಯ. ಕೈಯಲ್ಲಿ ಎಂಥದೋ ಒಂದು  ಸಾಧನ.


ಇನ್ನು ನಾಟ್ಯ ಮಾಡುವವರದೇ ಒಂದು ಗುಂಪು. ಅವರ ಜೊತೆ ಬ್ಯಾಂಡು ಬಜಂತ್ರಿ. ಅವರು ಸುಂದರವಾಗಿ ಕುಣಿವ ಹೊತ್ತಿಗೆ ಒಬ್ಬ ಟೋಪಿ ಹಾಕಿಕೊಂಡು ಬಂದೂಕು ಹಿಡಿದ ಬೇಟೆಗಾರ. ಹಿಂದಿನಿಂದ ಗೊತ್ತೇ ಇಲ್ಲದಂತೆ ಅವರನ್ನು ಬೇಟೆಯಾಡುವ ಹಾಗೆ. ಸಿಂಹದ ವೇಷ ಬಂದರೂ ಈ ಬೇಟೆಗಾರ ಇದ್ದಾನೆ. ಹುಲಿವೇಷ ಒಂದು ವಿಶೇಷ ಆಕರ್ಷಣೆ. ಆ ವೇಷ, ಆ ಕುಣಿತ, ಆ ಹಿಮ್ಮೇಳ, ಎಲ್ಲವೂ ಮೈಝುಮ್ಮೆನ್ನುವ ಅನುಭವ. ಹುಲಿವೇಷ ಬರುವ ವರೆಗೆ ಕಾಯುವ ತಾಳ್ಮೆ ಕಡಿಮೆ. ಬೇರಾವುದೋ ಮನೆಯಲ್ಲಿ ಅದರ ಅಬ್ಬರ ಕೇಳಿದರೆ ಅಲ್ಲಿಗೇ ಓಡುತ್ತಿದ್ದುದುಂಟು. ಅಷ್ಟು ಸೆಳೆತ. ಅಲ್ಲಿಯೂ ಒಬ್ಬ ಬೇಟೆಗಾರ ಇದ್ದಾನೆ. ಅವನು ಹುಲಿಗಳ ಹಿಂದೆ ಮುಂದೆ ಸುತ್ತುತ್ತಾನೆ. ನಮಗೆ ಅವನು ಒಂದು ದೊಡ್ಡ ಕುತೂಹಲ. ಅವನು ನಮ್ಮ ಕಡೆಗೆ ಬಂದೂಕು ತಿರುಗಿಸುವುದು ಉಂಟು. ನಮಗೆ ನಗುವೋ ನಗು. 


ಇದರಂತೆ ಇನ್ನೂ ಹಲವು ವೇಷ. ಸೊಪ್ಪು ಮಾರುವವರ ವೇಷ ಉಂಟು. ಕೆಲವರು ಕೃಷ್ಣ ವೇಷದಲ್ಲೇ ಬರುತ್ತಾರೆ. ಮತ್ತೆ ಕೆಲವರು ಕರಡಿಯಾಗಿ ಬಿಡುತ್ತಾರೆ. ಅಲ್ಲೂ ಒಬ್ಬ ಬೇಟೆಗಾರ ಇದ್ದಾನೆ. 


ಇವರು ಕೃಷ್ಣ ಜನ್ಮಾಷ್ಟಮಿಯ ಬೆಳಗಿನ ಆರಕ್ಕೆ ಮನೆ ಮನೆ ಬಾಗಿಲಿಗೆ ಬರುತ್ತಾರೆ. ಮತ್ತೆ ಅದು ಮರುದಿನ ಮಧ್ಯಾಹ್ನದ ವರೆಗೂ ಇರುತ್ತದೆ. ಮಧ್ಯಾಹ್ನ ಕೃಷ್ಣ ಮಠದ ಮೊಸರು ಕುಡಿಕೆಯ ಹೊತ್ತಿಗೆ ಸಮಾಪ್ತಿ. ಅಲ್ಲಿ ವೇಷದ ಸ್ಪರ್ಧೆ, ಬಹುಮಾನ. ಅಲ್ಲಿ ಅದರ ಪರಾಕಾಷ್ಠೆ. ನಮಗೆ ಆ ಮನೆ, ಈ ಮನೆಗೆ ಬಂದ ಎಲ್ಲಾ ವೇಷ ದರ್ಶನ. ಮತ್ತೆ ಅದರೊಳಗೆ ಒಂದು ವೇಷಕ್ಕೆ ಬಹುಮಾನ. ನಮಗೆ ಖುಷಿಯೋ ಖುಷಿ. ಉಂಡೆ ಚಕ್ಕುಲಿಗಿಂತಲೂ ಇದು ಒಂದು ತೂಕ ಹೆಚ್ಚು ನಮಗೆ. 


ಕೃಷ್ಣನ ಹುಟ್ಟಿಗೂ ವೇಷಕ್ಕೂ ಏನು ಸಂಬಂಧ? ಅದೂ ಮನೆ ಮನೆಗೆ ಹೋಗುವುದು ಯಾಕೆ? ಚೌತಿ ದೀಪಾವಳಿಗೆ ಇಲ್ಲದ ವೇಷ ಈ ದಿನ ಯಾಕೆ? 


ಇದರ ಹಿಂದೆ ಕೃಷ್ಣ ಕತೆಯಿದೆ. ನಾವು ಮರೆತಿದ್ದೇವೆ. ಕೃಷ್ಣ ಹುಟ್ಟಿದ ದಿನ ಅವನು ಅದಲು ಬದಲಾದ. ಕಂಸನ ಕೈಗೆ ಸಿಕ್ಕಿದ್ದು ಯೋಗಮಾಯೆ, ಅವನಲ್ಲ. ಯೋಗ ಮಾಯೆಯನ್ನು ಕಂಸ ನೆಲಕ್ಕೆ ಬಡಿದ. ಆದರೆ ಅವಳು ಅಷ್ಟಭುಜದ ಶಕ್ತಿಯಾಗಿ ಆಕಾಶಕ್ಕೆ ನೆಗೆದಳು. "ನಿನ್ನನ್ನು ಕೊಲ್ಲುವವ ಆಗಲೇ ಹುಟ್ಟಿದ್ದಾನೆ. ಸಾವನ್ನು ತಪ್ಪಿಸಿಕೊಳ್ಳಲಾರೆ" ಎಂದು ಎಚ್ಚರಿಸಿದಳು.


ಕಂಸನ ಅಳ್ಳೆದೆ ನಡುಗಿತು. ಮಂತ್ರಿಮಂಡಲ ಸಮಾಲೋಚನೆ ಮಾಡಿತು. ಆ ಮಗು ಎಲ್ಲಿದೆ? ಹೇಗೆ ಹುಡುಕುವುದು? ಹುಡುಕುವುದು ಆಗದು. ಎಲ್ಲ ಹೊಸದಾಗಿ ಹುಟ್ಟಿದ ಮಕ್ಕಳನ್ನು ಕೊಂದರಾಯಿತು. ಕೃಷ್ಣನೂ ಸಾಯುತ್ತಾನೆ. ಅದಕ್ಕಾಗಿ ರಾಕ್ಷಸರನ್ನು ಮನೆ ಮನೆಗೆ ಕಳುಹಿಸಲಾಯಿತು. ಇದ್ದ ಹಾಗೆ ಹೋಗುವುದಲ್ಲ. ವೇಷ ಬದಲಿಸಿ ಹೋಗುವುದು. ಅದಕ್ಕೆ ಒಬ್ಬೊಬ್ಬರಾಗಿ ಹೊರಟರು. ಪೂತನಿ ಮೊದಲಿಗಳು. ಕುರೂಪಿ ಸುಂದರಿಯಾಗಿ ಹೋದಳು. ಇನ್ಯಾರೋ ಹೆಬ್ಬಾವು, ಬಕಪಕ್ಷಿ, ಕತ್ತೆ, ಕರು, ಗೋಪಾಲಕ ಹೀಗೆ ಅವರದು ನೂರೆಂಟು ವೇಷ. ಎಲ್ಲರನ್ನೂ ಕೃಷ್ಣ ಮುಗಿಸಿದ. ಅವನು ಅಂತಿಂಥವನಲ್ಲ ಮಹಾ ಬೇಟೆಗಾರ. ಕೊಂದು ಆಡಿದ. 


ಅವನು ಹುಟ್ಟಿದ ದಿನ. ಆಗ ರಾಕ್ಷಸರು ವೇಷ ಬದಲಾಯಿಸಿ ಮನೆ ಮನೆ ತಿರುಗಿದ್ದರು. ಹೊಸದಾಗಿ ಹುಟ್ಟಿದ ಮಗು ಹುಡುಕಿ ಹುಡುಕಿ ಕೊಂದಿದ್ದರು. ಈಗ ಬರುವ ಈ ವೇಷ ಅದರದ್ದೇ ನೆನಪು. ಬಂದವರು ನಮ್ಮ ಮಗುವನ್ನು ತಿನ್ನದಿರಲಿ ಎಂಬಂತೆ ಕಾಣಿಕೆ ಕೊಟ್ಟು ಸಾಗಿ ಹಾಕುವುದು. ಬಹುತೇಕ ವೇಷ ಅದೇ ಹಳೆಯ ಸ್ಮರಣೆ. ಇವರ ಪೂತನಿಯೇ ಸಿರ್ಕಸಿದ್ಧಿ ಅನಿಸುತ್ತದೆ. ಕರಡಿ, ಸಿಂಹ ಎಲ್ಲ ಕತ್ತೆ, ಕರು, ಹಾವು ಪ್ರಾಣಿಗಳ ರೂಪದಲ್ಲಿ ಬಂದ ರಕ್ಕಸರ ನೆನಪಿಗೆ. ತುಂಬಾ ನಾಟ್ಯದ ದೊಡ್ಡ ದೊಡ್ಡ ಗುಂಪು ಆ ಕಾಲದಲ್ಲಿ ಸಂಭ್ರಮಿಸಿದ ಗೋಪಿಕೆಯರಿರಬಹುದು. ಹುಲಿವೇಷ ರಕ್ಕಸರ ಕ್ರೌರ್ಯದ ಉತ್ತುಂಗ. 


ಇಲ್ಲಿ ಎಲ್ಲಾ ಕಡೆ ಬೇಟೆಗಾರ ಯಾಕೆ? ಅವನು ಬೇರಾರೂ ಅಲ್ಲ ಶ್ರೀ ಕೃಷ್ಣ. ನೀವು ಯಾವ ವೇಷದಲ್ಲೇ ಬನ್ನಿ ಹಿಂದೆ ನಿಂತಿದ್ದಾನೆ ಈ ಬೇಟೆಗಾರ. ಇವನು ಮುಗಿಸದೇ ಬಿಡುವುದಿಲ್ಲ. ನಿಮ್ಮ ಯಾವ ವೇಷವೂ ನಡೆಯುವುದಿಲ್ಲ. ಇದು ಆ ಬೇಟೆಗಾರನ ಸಂದೇಶ. ಕೃಷ್ಣನ ಸಂದೇಶ. 


ಇಷ್ಟೆಲ್ಲ ರಕ್ಕಸರ ಪ್ರತಿನಿಧಿಗಳು. ಕೃಷ್ಣನನ್ನು ಕೊಲ್ಲಲು ಬಂದು ಸತ್ತವರು. ಅವರನ್ನು ಸಾಗಹಾಕಿ ಕೃಷ್ಣನನ್ನು ಕರೆದುಕೊಳ್ಳಿ. ಇದು ಆ ವೇಷದ ಮೂಲಕ ನಮಗೆ ಕೊಟ್ಟ ಕರೆ. 


ಇಂಥ ವೇಷಕ್ಕೆ ಮಠದ ಸ್ಪರ್ಧೆ, ಬಹುಮಾನ ಯಾಕೆ? ಅದು ಒಂದು ಸಂಸ್ಕೃತಿಯ ಭಾಗವಾಗಿ ಉಳಿಯಲಿ ಎಂದು ಪ್ರೋತ್ಸಾಹ ಅಷ್ಟೇ. ರಕ್ಕಸರಿಗೆ ಬಹುಮಾನ ಅಲ್ಲ. ಹಾಗೆ ಬಹುಮಾನ ಕೊಡುವುದೇ ಆದರೆ ನಾವು ಕಂಸರೆಂದಂತೆ ಆದೀತು. ಆ ಉದ್ದೇಶ ಮಠಗಳಿಗೆ ಇಲ್ಲ. ಕೃಷ್ಣ ಕಲಾರಾಧಕ. ಅವನು ಕೊಳಲು ವಾದಕ. ನಾಟ್ಯಪ್ರಿಯ. ಅದಕ್ಕೆ ಸಂಗಾತಿಯನ್ನು ನಾಟ್ಯದಿಂದ ಆಯ್ಕೆ ಮಾಡುವ ನವಿಲ ಗರಿಯನ್ನು ತಲೆಯಲ್ಲಿ ಧರಿಸಿದ. ಇಂಥಾ ಕಲಾಪ್ರಿಯನ ನೆನಪಿಗೆ ಈ ವೇಷವೆಂಬ ಕಲಾ ಪೋಷಣೆ. ಬೇರೇನೂ ಅಲ್ಲ. 


ಆದರೂ ವೇಷ ಹಾಕುವವರು ಕತ್ತೆ, ಕರು, ಹೆಬ್ಬಾವು, ಬಕ ಇಂಥ ವೇಷ ಹಾಕಿದರೆ ಸೊಗಸು. ಬದಲಿಗೆ ಕರಡಿ, ಸಿಂಹ, ಹುಲಿ ಆಡುತ್ತಾರೆ. ತೊಂದರೆ ಇಲ್ಲ. ಅದರ ಮಧ್ಯೆ ಹನುಮಂತ, ರಾಮ ಜಾಂಬವಂತ ಈ ವೇಷ ಬರುವುದೂ ಉಂಟು. ಎಂತೆಂಥ ದುಷ್ಟ ವೇಷಗಳ ರಕ್ಕಸರಿರಲಿ, ಕಾಯಲಿಕ್ಕೆ ರಾಮ ಹನುಮರೂ ಇದ್ದಾರೆ ಎಂಬ ಸಂದೇಶ ಕೊಡುತ್ತಿರಬಹುದು. 


ಎಲ್ಲ ಕ್ರೂರ ವೇಷದ ಹಿಂದೆ ಇರುವ ಬೇಟೆಗಾರ ಮಾತ್ರ ನಿಜಕ್ಕೂ ವಿಶೇಷ ಆಕರ್ಷಣೆ. ಎಷ್ಟೆಂದರೂ ಅವನು ಕೃಷ್ಣನಲ್ಲವೇ ಅದಕ್ಕೆ ಹಾಗೆ ಸೆಳೆಯುತ್ತಾನೆ. ಅವನು ಯಾವ ವೇಷ ತೊಟ್ಟು ಬಂದರೂ ಸೈ. ನಮ್ಮನ್ನು ಸೆಳೆಯಲೇ ಬೇಕು.


ಒಂದು ದಿನ ವೇಷ ತೊಟ್ಟವರು ವೇಷ ಬಿಚ್ಚಿಯಾರು. ಜೀವನವಿಡೀ ವೇಷ ಹಾಕುವವರು? ಅವರು ನೆನಪಿಟ್ಟು ಕೊಳ್ಳಬೇಕು ಬೇಟೆಗಾರ ಕೃಷ್ಣ ಬೆನ್ನಿಗೆ ಇದ್ದಾನೆ. ಮುಂದಿರುವವರನ್ನು ನೋಡಬಹುದು... ಹಿಂದಿರುವವನು ಅವನೇ ಕಾಯಬೇಕು. ನಮ್ಮ ವೇಷ ಅವನ ಮುಂದೆ ನಡೆಯುವುದಿಲ್ಲ.