Header Ads Widget

ಜನಸಾಗರದ ಮಧ್ಯೆ ವಿಟ್ಲಪಿಂಡಿ ಮಹೋತ್ಸವ ಸಂಪನ್ನ


ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ನೇತೃತ್ವದಲ್ಲಿ ಮಂಗಳವಾರ ನಡೆದ ಶ್ರೀಕೃಷ್ಣ ಲೀಲೋತ್ಸವ ವಿಟ್ಲಪಿಂಡಿ ಮಹೋತ್ಸ ವದಲ್ಲಿ ಶ್ರೀಕೃಷ್ಣನ ಮೃಣ್ಮಯ ಮೂರ್ತಿಯನ್ನು ಚಿನ್ನದ ರಥದಲ್ಲಿಟ್ಟು ರಥೋತ್ಸವ ಮಾಡ ಲಾಯಿತು. 


ಗೋವಳರು ಮೊಸರು ಕುಡಿಕೆಗಳನ್ನು ಒಡೆದು ಸಂಭ್ರಮಿಸಿದರು. ಹುಲಿವೇಷ ಸಹಿತ ವಿವಿಧ ಜಾನಪದ ವೇಷಗಳು ರಥೋತ್ಸವದಲ್ಲಿ ಭಾಗವಹಿಸಿದ್ದವು. ಸಹಸ್ರಾರು ಸಂಖ್ಯೆಯಲ್ಲಿ ಮಂದಿ ಭಾಗವಹಿಸಿದ್ದರು.


ಪರ್ಯಾಯ ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಉಡುಪಿ ಶ್ರೀಕೃಷ್ಣನಿಗೆ `ಜೋ ಜೋ ಶ್ರೀಕೃಷ್ಣ' ಅಲಂಕಾರ ಮಾಡಿ ಅರ್ಚಿಸಿದ್ದರು. ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮಹಾಪೂಜೆ ನಡೆಸಿದರು.



ಅಪರಾಹ್ನ ಮೂರು ಗಂಟೆ ವೇಳೆಗೆ ಮೃಣ್ಮಯ ಮೂರ್ತಿಯನ್ನು ಚಿನ್ನದ ಪಲ್ಲಿಕಿಯಲ್ಲಿಟ್ಟು ವಾದ್ಯಘೋಷದೊಂದಿಗೆ ರಥಬೀದಿಗೆ ತಂದು ಚಿನ್ನದ ರಥದಲ್ಲಿರಿಸಲಾಯಿತು. 


ನವರತ್ನ ರಥದಲ್ಲಿ ಅನಂತೇಶ್ವರ- ಚಂದ್ರೇಶ್ವರ ದೇವರ ಉತ್ಸವ ಮೂರ್ತಿಗಳನ್ನಿರಿಸಲಾಗಿತ್ತು. ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ಉತ್ಸವದಲ್ಲಿ ಭಾಗವಹಿಸಿದ್ದರು.


ಗೊಲ್ಲ ವೇಷಧಾರಿಗಳಾದ ಮಠದ ಸಿಬಂದಿ ರಥಬೀದಿಯಲ್ಲಿ ನಿರ್ಮಿಸಲಾದ ಗುರ್ಜಿ ಗಳಲ್ಲಿರಿಸಲಾದ ಮೊಸರು, ಬಣ್ಣದ ನೀರಿನ ಕುಡಿಕೆಗಳನ್ನು ಒಡೆದು ಸಂಭ್ರಮಿಸಲು ಸಿದ್ಧರಾಗಿದ್ದರು. 


ಹುಲಿವೇಷಗಳು ಹಾಗೂ ವಿವಿಧ ಜಾನಪದ ವೇಷಗಳು ರಥೋತ್ಸವದಲ್ಲಿ ಭಾಗವಹಿಸಿದ್ದವು. ರಥ ಸಾಗುತ್ತಲೇ ಗೊಲ್ಲವೇಷಧಾರಿಗಳು ಕುಡಿಕೆಗಳನ್ನು ಒಡೆದು ಸಂಭ್ರಮಿಸಿದರು.


 ಮಹೋತ್ಸವದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಹಾಗೂ ಪ್ರವಾಸಿಗರು ನೆರದಿದ್ದರು. ಭಂಡಾರಕೇರಿ ಮಠ ಎದುರು ನಿರ್ಮಿಸಲಾದ ವೇದಿಕೆಯಿಂದ ಭಕ್ತರೆಡೆಗೆ ಉಂಡೆ ಚಕ್ಕುಲಿ ಪ್ರಸಾದ ರೂಪದಲ್ಲಿ ಎಸೆಯಲಾಯಿತು.

ರಥಬೀದಿಯಲ್ಲಿ ಒಂದು ಸುತ್ತು ರಥೋತ್ಸವ ನಡೆದು, ಬಳಿಕ ಕೃಷ್ಣಮೂರ್ತಿಯನ್ನು ಮಧ್ವ ಸರೋವರದಲ್ಲಿ ಜಲಸ್ತಂಭನಗೊಳಿಸುವ ಮೂಲಕ ಸಂಭ್ರಮದ ವಿಟ್ಲಪಿಂಡಿ ಮಹೋತ್ಸ ವಕ್ಕೆ ತೆರೆ ಎಳೆಯಲಾಯಿತು.