ಇದರ ಹಿಂದೆ ಪದ್ಮಶಾಲಿ ನೇಕಾರ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಪ್ರತಿಷ್ಠಾನದ ತಂಡ ಮತ್ತು ಉಡುಪಿಯ ಕೆಲ ಮಹಿಳೆಯರ ಸಹಭಾಗಿತ್ವ ಮುಖ್ಯವಾಗಿದೆ. ಒಂದು ಪ್ರಾದೇಶಿಕ ಜವಳಿ ವ್ಯಾಪಾರವನ್ನು ಪುನಶ್ಚೇತನಗೊಳಿಸಲು ಆ ಪ್ರದೇಶದ ಜವಾಬ್ದಾರಿ ಯುತ ಮಹಿಳೆಯರು ಮುಖ್ಯ ಪಾತ್ರಧಾರಿಗಳಾಗುತ್ತಾರೆ.
ಕರಾವಳಿ ಭಾಗದಲ್ಲಿ ಹವಾಮಾನ ಬಹಳ ಬಿಸಿಲುದಾಯಕವಾಗಿರುವುದರಿಂದ ಇಲ್ಲಿಯ ಮಹಿಳೆಯರಿಗೆ ಉಡುಪಿ ಕೈಮಗ್ಗ ಸೀರೆ ಹೇಳಿಮಾಡಿಸಿದ್ದು. ಹಿಂದೆ ತುಳುನಾಡಿನ ಮಹಿಳೆಯರು ನಿತ್ಯವೂ ಈ ಉಡುಪಿ ಕೈಮಗ್ಗ ಸೀರೆಯನ್ನೇ ಇಡೀ ದಿನ ಉಡುತ್ತಿದ್ದರು. ಆ ಸಮಯದಲ್ಲಿ ಚರ್ಮ ಸಂಭಂಧೀ ಕಾಯಿಲೆಗಳು ಬಹಳ ಕಡಿಮೆ ಇರುತ್ತಿತ್ತು.
ಕಾಲ ಕ್ರಮೇಣ ತುಳುನಾಡಿನ ಯುವ ಪೀಳಿಗೆ ಕುಲಕಸುಬನ್ನು ಬಿಟ್ಟು ಉತ್ತಮ ಶಿಕ್ಷಣ ಹೊಂದಿ ಕೆಲಸಕ್ಕಾಗಿ ವಿದೇಶಗಳಿಗೆ ಹೋಗಲು ಶುರು ಮಾಡಿದರು. ವಿದೇಶದಿಂದ ಬರುವಾಗ ಬೆಂಕಿ ಪೊಟ್ಟಣದಲ್ಲಿ ಹಿಡಿಸುವಷ್ಟು ತೆಳುವಾದ ಸಿಂಥೆಟಿಕ್ ಸೀರೆಯನ್ನು ತರುತ್ತಿದ್ದರು. ಕ್ರಮೇಣ ಉಡುಪಿ ಕೈಮಗ್ಗ ಸೀರೆಗೆ ಬೇಡಿಕೆ ಕಡಿಮೆ ಆಗಲು ಶುರುವಾಯಿತು.
ಕಾಲ ಎಲ್ಲವನ್ನೂ ಬದಲಾಯಿಸುತ್ತದೆ ಎನ್ನುವುದಕ್ಕೆ ಸಾಕ್ಷಿಯಾಗಿ ಉಡುಪಿ ಕೈಮಗ್ಗ ಸೀರೆಯ ನೇಕಾರಿಕೆ ಹಾಗೂ ಬಳಕೆ ಕ್ಷೀಣಿಸುತ್ತಾ ಬಂತು. ಒಂದು ಸಾವಿರ ನೇಕಾರರಿದ್ದ ನೇಕಾರಿಕೆ ಕೇವಲ 11 ಜನ ನೇಕಾರರು ಮಾತ್ರ ಉಳಿದರು. ಶೆಟ್ಟಿಗಾರ್ಸ ಮುದಾಯದ ಕುಲ ಕಸುಬಾದ ಕೈಮಗ್ಗ ನೇಕಾರಿಕೆ ನಶಿಸಿ ಶಿಥಿಲಗೊಳ್ಳುವ ಹಂತ ತಲುಪಿತು.
ಪುನಶ್ಚೇತನದ ನಾಂದಿ: ಹೇಗಾದರೂ ಮಾಡಿ ಶೆಟ್ಟಿಗಾರ್ ಸಮುದಾಯದ ಕುಲ ಕಸುಬಾದ ನೇಕಾರಿಕೆಯನ್ನು ಉಳಿಸಿ ಬೆಳೆಸಲು ಹಿರಿ ತಲೆಗಳು ಹವಣಿಸುತ್ತಿರುವ ಸಂದರ್ಭದಲ್ಲಿ ಪದ್ಮಶಾಲಿ ನೇಕಾರ ಪ್ರತಿಷ್ಠಾನದ ಅಧ್ಯಕ್ಷರಾಗಿ ರತ್ನಾಕರ್ ಇಂದ್ರಾಳಿಯವರು ಆಯ್ಕೆಯಾಗಿ ಪ್ರತಿಷ್ಠಾನದ ಚುಕ್ಕಾಣಿಯನ್ನು ಹಿಡಿದು ಉಡುಪಿ ಕೈಮಗ್ಗ ನೇಕಾರಿಕೆ ಉಳಿಸಲು ಸರ್ವೋತ್ತಮ ಚಿಂತನೆಯನ್ನು ಮಾಡುವಲ್ಲಿ ಹೆಜ್ಜೆ ಇಟ್ಟರು.
ಹಳೆ ಬೇರು ಹೊಸಚಿಗುರು ಸೇರಿಕೊಂಡು ಪ್ರತಿಷ್ಠಾನದ ಹೊಸ ತಂಡವನ್ನು ರಚಿಸಿಕೊಂಡರು. 2022 ಆಗಸ್ಟ್ 8ರಂದು ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಅಂಗವಾಗಿ ಮೊದಲ ಬಾರಿಗೆ ಶೆಟ್ಟಿಗಾರ್ ಸಮುದಾಯದ ಹಿರಿಯರೂ ಕಿರಿಯರೂ ಸುಮಾರು 100 ಜನ ಸೇರಿ ಉಡುಪಿ ಕೈಮಗ್ಗ ಸೀರೆ ಹಾಗೂ ಉಡುಪಿ ಕೈಮಗ್ಗದ ಜುಬ್ಬಾ ಪಂಚೆ ಹಾಗೂ ಶಾಲು ತೊಟ್ಟುಕೊಂಡು ತುಳುನಾಡಿನ ಸಾಂಸ್ಕೃತಿಕ ಶೈಲಿಯಲ್ಲಿ ಉಡುಪನ್ನು ಬಗೆ ಬಗೆಯಾಗಿ ಬಿಂಬಿಸುವ ನಿಟ್ಟಿನಲ್ಲಿ ಮೊದಲ ಬಾರಿಗೆ ಉಡುಪಿ ಕೈಮಗ್ಗ ನೇಕಾರಿಕೆಯ ಪುನಶ್ಚೇತನಕ್ಕೆ ನಾಂದಿ ಹಾಡಿದರು. ಈ ಸಂದರ್ಭದಲ್ಲಿ ಫ್ಯಾಷನ್ ಶೋ ನಲ್ಲಿ ಭಾಗವಹಿಸಲು ಸಾಕಷ್ಟು ಹೊಸ ಕೈಮಗ್ಗ ಸೀರೆಗಳು ವ್ಯಾಪಾರವಾದವು.
ಈ ಸಮಯದಲ್ಲಿ ಪದ್ಮಶಾಲಿ ಸಮಾಜದ 5 ವರ್ಷದ ಮಕ್ಕಳಿಂದ 80ರ ವಯೋವೃದ್ಧರು ಉಡುಪಿ ಕೈಮಗ್ಗ ನೇಕಾರಿಕೆಗೆ ಬೆನ್ನೆಲುಬಾಗಿ ನಿಂತರು. ನಮ್ಮ ಉಡುಪಿ ಕೈಮಗ್ಗ ಸೀರೆ ನಮ್ಮ ಹೆಮ್ಮೆ ಎನ್ನುವ ಘೋಷಣೆಯೊಂದಿಗೆ ಒಂದು ದಿನದ ಕಾರ್ಯ ಕ್ರಮವನ್ನು ಆಯೋಜಿಸಿ ಒಂದಷ್ಟು ಸ್ಪಂದನೆಯನ್ನು ಪಡೆದರು.
ಪ್ರಗತಿಪರ ಬದಲಾವಣೆಗಳು: 2023ರಲ್ಲಿ ಜಿಐ ಟ್ಯಾಗ್ ಹೊಂದಿರುವ ಉಡುಪಿ ಕೈಮಗ್ಗದ ಉಡುಪಿ ಸೀರೆಗಳನ್ನು, ಮತ್ತು ಕೈಮಗ್ಗದ ನೇಕಾರಿಕೆಯನ್ನು ಉಳಿಸಿ ಬೆಳೆಸಲು ಪ್ರೋತ್ಸಾಹಿಸುವಂತೆ ಅಂದಿನ ಉಡುಪಿಯ ಜಿಲ್ಲಾಧಿಕಾರಿ ಕೂರ್ಮರಾವ್, ಜಿಲ್ಲಾ ಪಂಚಾಯತ್ ಸಿಇಒ ಎಚ್ ಪ್ರಸನ್ನ ಹಾಗೂ ಐಎಎಸ್ ಪ್ರೊಬೆಷನರಿ ಯತೀಶ್ ಅವರಿಗೆ ನಿರಂತರವಾಗಿ ವಿನಂತಿಸಿದ ಪರಿಣಾಮ ಜಿಲ್ಲಾ ಖನಿಜ ನಿಧಿಯಿಂದ ಮಾಸಿಕ ತಲಾ ರೂ. 10,000/- ಶಿಷ್ಯವೇತನ ಮತ್ತು ಪದ್ಮಶಾಲಿ ನೇಕಾರ ಪ್ರತಿಷ್ಠಾನದ ವತಿಯಿಂದ ಮಾಸಿಕ ತಲಾ ರೂ. 2000/- ಪ್ರಯಾಣ ಭತ್ಯೆಯೊಂದಿಗೆ 25 ಮಹಿಳೆಯರಿಗೆ 5 ತಿಂಗಳ ಕೈಮಗ್ಗದ ನೇಯ್ಗೆ ತರಬೇತಿ ಯಶಸ್ವಿಯಾಗಿ ಪೂರ್ಣಗೊಂಡಿತು.
ತರಬೇತಿಯ ಬಳಿಕ ಅವರಿಗೆ ಕೈಮಗ್ಗದ ನೇಕಾರಿಕೆಯ ಸ್ವ ಉದ್ಯೋಗವನ್ನು ಕಲ್ಪಿಸುವ ನಿಟ್ಟಿನಲ್ಲಿ ಸುಸಜ್ಜಿತ ಕೈಮಗ್ಗದ ನೇಯ್ಗೆ ಕೇಂದ್ರದ ಅಗತ್ಯವನ್ನು ಜಿಲ್ಲೆಯ ವಿವಿಧ ಅಧಿಕಾರಿಗಳೊಂದಿಗೆ ಚರ್ಚಿಸಿ ಜಿಲ್ಲಾ ಪಂಚಾಯತ್ ಕಟ್ಟಡದ ತಳ ಅಂತಸ್ತನ್ನು ಕೈಮಗ್ಗದ ನೇಯ್ಗೆ ಕೇಂದ್ರವಾಗಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ವೃತ್ತಿಪರ ನೇಕಾರರಿಗೆ ಸರಕಾರದಿಂದ ಬರುವ ಕೈಮಗ್ಗಗಳು ತರಬೇತಿ ಪಡೆದ ಹೊಸ ನೇಕಾರರಿಗೆ ಸಿಗುವುದು ವಿಳಂಬವಾಗಿ, ಅವರು ಜೀವನೋಪಾಯಕ್ಕಾಗಿ ಬೇರೆ ಉದ್ಯೋಗಗಳತ್ತ ಹೋಗುವ ಸಾಧ್ಯತೆಯನ್ನು ಗ್ರಹಿಸಿದರು. ಕೂಡಲೇ ಇಲ್ಲಿನ ಕೈಮಗ್ಗದ ನೇಕಾರಿಕೆಗೆ ಸೂಕ್ತವಾದ ಕೈಮಗ್ಗಗಳನ್ನು ಹುಡುಕಲಾರಂಭಿಸಿದರು.
ಈ ಭಾಗದಲ್ಲಿ ಅಂಥ ಕೈಮಗ್ಗಗಳು ಸಿಗದೆ ಇದ್ದಾಗ, ದೂರದ ತಮಿಳುನಾಡಿನ ಈರೋಡಿಗೆ ಹಿರಿಯ ನೇಕಾರರನ್ನು ಕರೆದೊಯ್ದು, ಅವರ ಶಿಫಾರಸಿನ ಮೇರೆಗೆ, ನವೀಕೃತ ಕೈಮಗ್ಗಗಳನ್ನು ಖರೀದಿಸಿ ತಂದು, ಪದ್ಮಶಾಲಿ ಸಮಾಜದ ದಾನಿಗಳಿಂದ ಕೈಮಗ್ಗದ ಕೊಡುಗೆ ನೀಡುವಂತೆ ವಿನಂತಿಸಿ, ಈಗಾಗಲೇ 20 ಕೈಮಗ್ಗಗಳಿಗೆ ದಾನಿಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
10 ನವೀಕೃತ ಕೈಮಗ್ಗಗಳನ್ನು ನಬಾರ್ಡ್ ಸಂಸ್ಥೆಯಿಂದ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಉಡುಪಿಯಲ್ಲಿ ಕೈಮಗ್ಗದ ನೇಕಾರಿಕೆಯ ಇತಿಹಾಸ ಮತ್ತು ಕೈಮಗ್ಗದ ಉಡುಪಿ ಸೀರೆಗಳ ಬಗ್ಗೆ ಸವಿವರ ಮಾಹಿತಿ ನೀಡಿ, ಪುನಸ್ಚೇತನಕ್ಕೆ ವಿನಂತಿಸಲಾಗಿ, ಮಾನ್ಯ ಸಚಿವರು ನಬಾರ್ಡ್ ಸಂಸ್ಥೆಗೆ ಉಡುಪಿಯಲ್ಲಿ ಕೈಮಗ್ಗದ ನೇಯ್ಗೆ ತರಬೇತಿಯನ್ನು ಮಾಡಲು ಶಿಫಾರಸು ಮಾಡಿ, ರೂ. 14 ಲಕ್ಷ ಅನುದಾನ ಬಿಡುಗಡೆಯಾಗಿ, 30 ಮಹಿಳೆಯರಿಗೆ 6 ತಿಂಗಳ ಕೈಮಗ್ಗ ನೇಯ್ಗೆ ತರಬೇತಿ ಪ್ರಾರಂಭವಾಯಿತು.
ಈ ಎರಡನೆಯ ಹಂತದ ಕೈಮಗ್ಗ ನೇಯ್ಗೆ ತರಬೇತಿಗೆ ಶಿಷ್ಯವೇತನ ನೀಡಲು ರೋಬೋಸಾಫ್ಟ್ ಟೆಕ್ನಾಲಜೀಸ್ ಸಂಸ್ಥೆಯನ್ನು ವಿನಂತಿಸಲಾಗಿ, ಅವರಿಂದ ಸಿಎಸ್ಆರ್ ನಿಧಿಯ ಮೂಲಕ ರೂ. 32 ಲಕ್ಷ ಅನುದಾನ ಬಿಡುಗಡೆಯಾಗಿ, ಶಿಬಿರಾರ್ಥಿಗಳಿಗೆ ತಲಾ ರೂ. 8,000ದಂತೆ ಶಿಷ್ಯ ವೇತನ ನೀಡಲು ಸಹಕಾರಿಯಾಯಿತು.
ಇದರ ಜೊತೆಗೆ ಮೊದಲ ಹಂತದಲ್ಲಿ ತರಬೇತಿ ಪಡೆದ ಮಹಿಳಾ ನೇಕಾರರು ನೇಯ್ಗೆ ಪೂರ್ವ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಾಗ ಯಾವುದೇ ಮಜೂರಿ ಸಿಗದಿರುವುದನ್ನು ಮನಗಂಡು, ಅಂದಿನ ಜಿಲ್ಲಾ ಪಂಚಾಯತ್ ಸಿಇಒ ಎಚ್ ಪ್ರಸನ್ನ ಅವರ ಲಕ ಶಿಫಾರಸ್ಸು ಮಾಡಿಸಿ ತಲಾ ರೂ. 8,000/- ಹೆಚ್ಚುವರಿ 3 ತಿಂಗಳ ಶಿಷ್ಯವೇತನವನ್ನು ಈ ಸಿಎಸ್ಆರ್ ನಿಧಿಯ ಮೂಲಕ ನೀಡಲಾಯಿತು.
2022 ರಲ್ಲಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯನ್ನು ಕಲ್ಯಾಣಪುರದ ವೀರಭದ್ರ ದೇವಸ್ಥಾನದಲ್ಲಿ ಕೈಮಗ್ಗ ಸೀರೆಗಳ ಉತ್ಸವ ಎಂಬ ಹೆಸರಿನಲ್ಲಿ ಆಚರಿಸಲಾಯಿತು. ಅದರ ಯಶಸ್ಸಿನಿಂದ ಪ್ರೇರಣೆ ಪಡೆದು 2023 ರ ಸಾಲಿನ ಕೈಮಗ್ಗ ಸೀರೆಗಳ ಉತ್ಸವ ಕಾರ್ಯಕ್ರಮವನ್ನು ಅದಮಾರು ಮಠಾಧೀಶರ ಆಶೀರ್ವಾದದಿಂದ ಉಡುಪಿಯ ಪೂರ್ಣಪ್ರಜ್ಞ ಅಡಿಟೋರಿಯಂ ನಲ್ಲಿ ಮೂರು ದಿನಗಳ ಕಾಲ ಅತ್ಯಂತ ಅದ್ದೂರಿಯಾಗಿ ಏರ್ಪಡಿಸಲಾಯಿತು. ಈ ಮೂಲಕ ಉಡುಪಿಯ ಜನತೆಗೆ ಕೈಮಗ್ಗ ನೇಕಾರಿಕೆ ಮತ್ತು ಉಡುಪಿ ಸೀರೆಗಳ ಬಗ್ಗೆ ಅರಿವು ಮೂಡಿಸಲಾಯಿತು.
ಉಡುಪಿ ಕೈಮಗ್ಗ ಸೀರೆಯ ಪುನಶ್ಚೇತನಕ್ಕೆ ಹಿರಿಯ ದಂಪತಿಗಳಾದ ಕೇಶವ್ ಶೆಟ್ಟಿಗಾರ್ ಮತ್ತು ಆವರ ಪತ್ನಿ ಗೀತಾ 2022ರ ರಾಷ್ಟೀಯ ಕೈಮಗ್ಗ ದಿನಾಚರಣೆಯ ದಿನ ಫ್ಯಾಷನ್ ಶೋ ನಲ್ಲಿ ರ್ಯಾಂಪ್ ವಾಕ್ ಮಾಡಿ ಕಿರಿಯರಿಗೆ ಸ್ಪೂರ್ತಿಯಾದರು. ಅಂತೆಯೇ ಅತೀ ಸಣ್ಣ ವಯಸ್ಸಿನ ಹುಡುಗಿಯೂ ಉಡುಪಿ ಕೈಮಗ್ಗ ಸೀರೆಯುಟ್ಟು ಯಕ್ಷಗಾನದ ಸ್ತ್ರೀ ಪಾತ್ರದಲ್ಲಿ ಮಿಂಚಿದ್ದಾರೆ. ಹಳೆ ಬೇರು ಹೊಸ ಚಿಗುರಿನ ಸಮ್ಮಿಳಿತ.
ಪೂರ್ಣಿಮಾ ಜನಾರ್ದನ್, ಲಕ್ಷ್ಮೀ ಆಚಾರ್ಯ, ನಿಮಿತ ಸತೀಶ್ಚಂದ್ರ, ಶಿಲ್ಪಾ ಜೋಶಿ, ಹೀಗೆ 26 ಜನ ಬ್ರಾಂಡ್ ಅಂಬಾಸಿಡರ್ ಆಗಿ ಮಹಿಳೆಯರು ಈ ಸೀರೆಗಳನ್ನು ತಾವು ಉಟ್ಟು ಇನ್ನೊಬ್ಬರಿಗೆ ಉಡುವಂತೆ ಪ್ರೇರೇಪಿಸುತ್ತಿರುವರು. 2023ರಲ್ಲಿ ಜಿಐ ಟ್ಯಾಗ್ ಹೊಂದಿರುವ ಉಡುಪಿ ಕೈಮಗ್ಗದ ಉಡುಪಿ ಸೀರೆಗಳನ್ನು, ಮತ್ತು ಕೈಮಗ್ಗದ ನೇಕಾರಿಕೆಯನ್ನು ಉಳಿಸಿ ಬೆಳೆಸಲು ಪ್ರೋತ್ಸಾಹ ದಾಯಕವಾಗಿ ಜಿಲ್ಲಾ ಖನಿಜ ನಿಧಿಯಿಂದ ಮಾಸಿಕ ತಲಾ ರೂ. 10,000/- ಶಿಷ್ಯವೇತನ ಮತ್ತು ಪದ್ಮಶಾಲಿ ನೇಕಾರ ಪ್ರತಿಷ್ಠಾನದ ವತಿಯಿಂದ ಮಾಸಿಕ ತಲಾ ರೂ. 2000/- ಪ್ರಯಾಣ ಭತ್ಯೆಯೊಂದಿಗೆ 25 ಮಹಿಳೆಯರಿಗೆ 5 ತಿಂಗಳ ಉಡುಪಿ ಕೈಮಗ್ಗ ಸೀರೆಯ ಪುನಶ್ಚತನಗೊಳಿಸಲು ಮೊದಲು ಬೆನ್ನೆಲುಬಾಗಿ ನಿಂತವರು ಉಡುಪಿಯ ರೂಪದರ್ಶಿ ವಿದ್ಯಾಸರಸ್ವತಿಯವರು.
ಫ್ಯಾಷನ್ ಲೋಕಕ್ಕೆ ಕಾಲಿಟ್ಟು ಅನೇಕ ಸಾಧನೆಗಳನ್ನು ಪ್ರಶಸ್ತಿಗಳನ್ನೂ ಪಡೆದುಕೊಂಡ ವಿದ್ಯಾ ಸರಸ್ವತಿ ಉಡುಪಿ ಕೈಮಗ್ಗ ಸೀರೆ ಉಟ್ಟು ತುಳುನಾಡಿನ ರೈತ ಮಹಿಳೆಯ ಉಡುಗೆ ತೊಡುಗೆಯ ಶೈಲಿಯಲ್ಲಿ ಸ್ವತಃ ರೂಪದರ್ಶಿ ಯಾಗಿ ಮಿಂಚಿ, ವಿಶೇಷವಾದ ಆಕರ್ಷಕ ಕ್ಯಾಲೆಂಡರ್ ತಯಾರಿಸಿ ರಾಜ್ಯ ಅಂತರ್ ರಾಜ್ಯದಲ್ಲಿ ಹಂಚಿ ಉಡುಪಿ ಸೀರೆಯನ್ನು ದೇಶಾದ್ಯಂತ ಪ್ರಚಾರ ಪಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇದರಿಂದಾಗಿ ಉಡುಪಿಯ ಎಲ್ಲಾ ವಯಸ್ಸಿನ ಮಹಿಳೆಯರೂ ಉಡುಪಿ ಕೈಮಗ್ಗ ಸೀರೆಯನ್ನು ಕೊಳ್ಳಲು ಪ್ರಾರಂಭಿಸಿದರು.
ಬಳಿಕ ಉಡುಪಿಯಲ್ಲಿ ಲಯನ್ಸ್ ಕ್ಲಬ್, ರೋಟರಿ ಕ್ಲಬ್,ಹೀಗೆ ಹಲವಾರು ಮಹಿಳಾ ಸಂಘಗಳಲ್ಲಿ ಯಾವುದೇ ಕಾರ್ಯಕ್ರಗಳು ನಡೆದರೂ ಸಂಸ್ಥೆಯ ಎಲ್ಲಾ ಮಹಿಳೆಯರು ಉಡುಪಿ ಕೈಮಗ್ಗ ಸೀರೆಯನ್ನೇ ಉಡುತ್ತಿದ್ಧ ಕಾರಣ ಸಾಕಷ್ಟು ಸೀರೆಗಳು ವ್ಯಾಪಾರ ವಾದವು. ಈ ಸಂದರ್ಭದಲ್ಲಿ ಕೈಮಗ್ಗ ಸೀರೆಯ ಉತ್ಪಾದನೆಗಿಂತ ಮಾರಾಟವೇ ಜಾಸ್ತಿಯಾಯಿತು. ಹೀಗೆ ಏಕಾ ಏಕಿ ಉಡುಪಿ ಕೈಮಗ್ಗ ಸೀರೆಯ ಪುನಶ್ಚೇತನ ಆಯಿತು.
ಉಡುಪಿಯ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯುವ ಕೈಮಗ್ಗ ಸೀರೆಗಳ ಉತ್ಸವಕ್ಕೆ ಪರ್ಯಾಯ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಸಂಪೂರ್ಣ ಬೆಂಬಲವನ್ನು ನೀಡುವ
ಮೂಲಕ ನೇಕಾರಿಕೆ ವೃತ್ತಿಗೆ ಉತ್ತೇಜನ ನೀಡಿದ್ದಾರೆ.
ಇತಿಹಾಸದಲ್ಲೇ ಪ್ರಥಮ ಎಂಬಂತೆ ರಾಜಾಂಗಣದಲ್ಲಿ ಉಡುಪಿ ಪದ್ಮಶಾಲಿ ನೇಕಾರ ಪ್ರತಿಷ್ಠಾನದ ನೇತೃತ್ವದಲ್ಲಿ ನಡೆಯಲಿರುವ ಕೈಮಗ್ಗ ಸೀರೆಗಳ ಉತ್ಸವಕ್ಕೆ ಉಡುಪಿ ಜನತೆಯ ಸಹಕಾರ ಅತ್ಯಗತ್ಯ ವಾಗಿದೆ. ಕೈಮಗ್ಗ ಸೀರೆಗಳ ಉತ್ಸವ ಉಡುಪಿ ಜಿಲ್ಲೆ ಯಲ್ಲಿರುವ ಸಾವಿರಾರು ನೇಕಾರ ಕುಟುಂಬಗಳಲ್ಲಿ ಹೊಸ ಸಂಚಲನ ಮೂಡಿಸಲಿದೆ.
ಆಗಸ್ಟ್ 1 ರಿಂದ 11ನೇ ತಾರೀಖಿನವರೆಗೆ ನಡೆಯಲಿರುವ ಈ ಉತ್ಸವದಲ್ಲಿ ಉತ್ಸವದಲ್ಲಿ ತುಳುನಾಡ ವೈಭವ, ಉಡುಪಿ ಸೀರೆಗಳ ಸೌಂದರ್ಯ ಸ್ಪರ್ಧೆ. ಹಾಗೂ ಶ್ರೀ ಕೃಷ್ಣ ಲೀಲೋತ್ಸವ, ಉಡುಪಿ ಸೀರೆಗಳನ್ನುಟ್ಟ ಗೋಪಿಕೆಯರೊಂದಿಗೆ ಬಾಲಕೃಷ್ಣನ ಲೀಲೆಗಳ ನೃತ್ಯ ಅಥವಾ ನೃತ್ಯ ರೂಪಕ ಸ್ಪರ್ಧೆ ಮತ್ತು ಎಂಟು ದಿನಗಳ ಕಾಲ ನಿರಂತರ ಸಾಂಸ್ಕೃತಿಕ ವೈಭವದ ಕಾರ್ಯ ಕ್ರಮಗಳು ನೆರವೇರಲಿದೆ. 11 ದಿನಗಳ ಕಾಲ ಇಡೀ ಕರ್ನಾಟಕ ರಾಜ್ಯ ಮತ್ತು ಹೊರ ರಾಜ್ಯಗಳ ಕೈಮಗ್ಗದ ಬಟ್ಟೆಗಳ ಪ್ರದರ್ಶನ ಮತ್ತು ಮಾರಾಟ ಮೇಳವು ನಡೆಯಲಿದೆ.
ಉಡುಪಿ ಕೈಮಗ್ಗದ ನೇಕಾರಿಕೆಯಲ್ಲಿ ನಿರಂತರ ಹೊಸತನವನ್ನು ಮಾಡಲು ಪ್ರಯತ್ನಿಸುತ್ತಿರುವ ರತ್ನಾಕರ್ ಇಂದ್ರಾಳಿ ಯವರು ಸದ್ಯದಲ್ಲಿಯೇ ಉಡುಪಿ ಬ್ರಾಂಡ್ ನ ಲಿನನ್ ಕೈಮಗ್ಗದ ಬಟ್ಟೆಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ತಿಳಿಸಿರುತ್ತಾರೆ. ಒಂದು ಸಮುದಾಯದ ಪ್ರಾದೇಶಿಕ ಜವಳಿ ಉದ್ಯಮ ಬೆಳೆಯಬೇಕಾದರೆ ಆ ಪ್ರದೇಶದ ಸಾರ್ವಜನಿಕರಸಹಕಾರಅತ್ಯಗತ್ಯ.ವಿದ್ಯಾ ಸರಸ್ವತಿ, ರೂಪದರ್ಶಿ, ಉಡುಪಿ ಕೈಮಗ್ಗ ಸೀರೆ