Header Ads Widget

ಆ.18 - ರೂಪಕಲಾ ಆಳ್ವರಿಗೆ ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ ಪ್ರದಾನ


ಉಡುಪಿ ತುಳುಕೂಟವು ನೀಡುವ 29ನೇ ವರ್ಷದ 'ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ'ಗೆ ಮಂಗಳೂರಿನ ಕರಂಗಲ್ಪಾಡಿಯ ರೂಪಕಲಾ ಆಳ್ವ ಅವರ 'ಪಮ್ಮಕ್ಕೆನ ಪೊರುಂಬಾಟ' ಎಂಬ ಕಾದಂಬರಿ ಆಯ್ಕೆಯಾಗಿದ್ದು, ಪ್ರಶಸ್ತಿ ಪ್ರಧಾನ ಸಮಾರಂಭವು ಆ. 18 ರಂದು, ಸಂಜೆ 4 ಗಂಟೆಗೆ ಯಕ್ಷಗಾನ ಕಲಾರಂಗದ ನೂತನ ಸಭಾಂಗಣ ಐವೈಸಿಯಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳುಕೂಟದ ಜಯಕರ್ ಶೆಟ್ಟಿ ಇಂದ್ರಾಳಿ ವಹಿಸಲಿದ್ದು, ಅತಿಥಿಗಳಾಗಿ ಕರ್ನಾಟಕ ತುಳುಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ, ಮಂಗಳೂರಿನ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ, ಉದ್ಯಮಿ ವೈ. ಸುಧೀರ್ ಕುಮಾರ್ ಮತ್ತು ಸಮಾಜಸೇವಕ ಯು. ವಿಶ್ವನಾಥ ಶೆಣೈ ಭಾಗವಹಿಸಲಿದ್ದಾರೆ. ಪ್ರಶಸ್ತಿ ಪುರಸ್ಕೃತ ಕಾದಂಬರಿಯನ್ನು ಅಮಿತಾಂಜಲಿ ಕಿರಣ್ ಅವರು ಪರಿಚಯಿಸಲಿದ್ದಾರೆ.

ಇದೇ ಸಂದರ್ಭದಲ್ಲಿ, ತುಳುಭಾಷೆಯನ್ನು ತೃತೀಯ ಐಚ್ಛಿಕ ಭಾಷೆಯನ್ನಾಗಿ ಆಯ್ಕೆ ಮಾಡಿಕೊಂಡು ಈ ಬಾರಿಯ ಎಸ್.ಎಸ್.ಎಲ್. ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 100 ಅಂಕ ಪಡೆದ ಜಿಲ್ಲೆಯ 17 ವಿದ್ಯಾರ್ಥಿಗಳನ್ನು ಗೌರವಿಸಲಾಗುತ್ತದೆ ಎಂದು ತುಳುಕೂಟದ ಕಾರ್ಯದರ್ಶಿ ಗಂಗಾಧರ್ ಕಿದಿಯೂರು ಹಾಗೂ ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ ಸಂಚಾಲಕಿ ತಾರಾ ಉಮೇಶ್ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

  29 ನೇ ವರ್ಷದ ಪ್ರಶಸ್ತಿ

ತುಳು ಭಾಷೆ, ಸಂಸ್ಕೃತಿ, ಸಾಹಿತ್ಯಕ್ಕಾಗಿ ಅಪಾರ ಸೇವೆ ಸಲ್ಲಿಸಿದ, ತುಳು ಚಳುವಳಿ, ದೇಶದ ಸ್ವಾತಂತ್ರ್ಯ ಹೋರಾಟದಲ್ಲೂ ಪಾಲ್ಗೊಂಡ, ಹಿರಿಯ ಸಾಹಿತ್ಯ ಚೇತನ ದಿ. ಶ್ರೀನಿವಾಸ ಉಪಾಧ್ಯಾಯ ಪಣಿಯಾಡಿ ಅವರ ಸ್ಮರಣಾರ್ಥ ತುಳುಕೂಟವು ತುಳುನಾಡಿನ ಸಾಂಸ್ಕೃತಿಕ, ಸಾಮಾಜಿಕ ಬದುಕಿನ ಮೇಲೆ ಬೆಳಕು ಚೆಲ್ಲುವ ತುಳು ಕಾದಂಬರಿಗೆ ಕಳೆದ 29 ವರ್ಷಗಳಿಂದ ಈ ಪ್ರಶಸ್ತಿಯನ್ನು ನೀಡುತ್ತಿದೆ. ಪ್ರಶಸ್ತಿಯು 10 ಸಾವಿರ ರು. ನಗದು ಬಹುಮಾನವನ್ನು ಒಳಗೊಂಡಿದೆ.

ಈ ಬಾರಿ ಖ್ಯಾತ ವಿಮರ್ಶಕ ಪ್ರೊ.ಮುರಳಿಧರ ಉಪಾಧ್ಯಾಯ ಹಿರಿಯಡ್ಕ, ಸಾಹಿತಿ ಪದ್ಮನಾಭ ರೈ ಪುತ್ತಿಗೆ, ಕಲಾವಿದ ಸಕು ಪಂಗಾಳ ಅವರು ತೀರ್ಪುಗಾರರಾಗಿ ಪ್ರಶಸ್ತಿಗೆ ಕಾದಂಬರಿಯನ್ನು ಆಯ್ಕೆ ಮಾಡಿದ್ದಾರೆ.

  ಸಾಹಿತಿ ರೂಪಕಲಾ ಆಳ್ವ

ಕನ್ನಡ ಮತ್ತು ತುಳು ಭಾಷೆಗಳೆರಡರಲ್ಲೂ ಸಾಹಿತ್ಯ ರಚಿಸುತ್ತಿರುವ ರೂಪಕಲಾ ಅವರು ಮಂಗಳೂರಿನ ಸಂದೇಶ ಪ್ರತಿಷ್ಠಾನದಲ್ಲಿ ಸಂಶೋದಕಿಯಾಗಿದ್ದಾರೆ. ಮೇರು ನಾಟಿ, ಜೋಳಿಗೆಯಿಂದ ಹೊಳಿಗೆ, ಪಡಿಪ್ಪಿರೆ ಇತ್ಯಾದಿ ಕೃತಿಗಳನ್ನು ರಚಿಸಿರುವ ಅವರಿಗೆ ತುಳು ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ, ಸಾರಾ ಅಬೂಬಕ್ಕರ್ ಸಾಹಿತ್ಯ ಪ್ರಶಸ್ತಿಗಳು ಲಭಿಸಿವೆ.

ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಮಂಗಳೂರು ನಗರ ಗ್ರಂಥಾಲಯದ ಸಲಹಾ ಪ್ರಾಧಿಕಾರದ ಸದಸ್ಯರಾಗಿ, ಲೇಖಕಿಯರು ವಾಚಕಿಯರು ಸಂಘ ಇತ್ಯಾಗಿ ಅನೇಕ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.