Header Ads Widget

ಬೆಂಗಳೂರು: ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ

 


ಡ್ರಾಪ್ ನೀಡುವ ನೆಪದಲ್ಲಿ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್ ಎಸ್ ಆರ್ ಲೇಔಟ್ ಪೊಲೀಸರು ಆಡುಗೋಡಿಯ ನಿವಾಸದಿಂದ ಆರೋಪಿಯನ್ನು ಬಂಧಿಸಿದ್ದಾರೆ.

ಆ.18 ರಂದು ಮುಂಜಾನೆ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ವ್ಯಾಪ್ತಿಯ ಹೊಸೂರು ಸರ್ವಿಸ್ ರಸ್ತೆಯ ಪ್ರತ್ಯೇಕ ಸ್ಥಳದಲ್ಲಿ ಈ ಘಟನೆ ನಡೆದಿದೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಸಂತ್ರಸ್ತೆಯ ಹೇಳಿಕೆ ಮತ್ತು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಮಾಹಿತಿಯನ್ನು ಪಡೆದು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿರುವ ಪೊಲೀಸರು, ಪ್ರಕರಣ ಇನ್ನೂ ತನಿಖೆ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.

ಏನಿದು ಘಟನೆ?:

ಸಂತ್ರಸ್ತೆಯು ಹೆಬ್ಬಗೋಡಿ ನಿವಾಸಿಯಾಗಿದ್ದು, ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದು, ಶನಿವಾರ ತಡರಾತ್ರಿ ಸ್ನೇಹಿತನೊಂದಿಗೆ ಕೋರಮಂಗಲದ ಪಬ್‍ವೊಂದಕ್ಕೆ ಬಂದಿದ್ದಳು. ವಾಪಸ್ ಹೋಗುವಾಗ ಸ್ನೇಹಿತನ ಕಾರಿನಲ್ಲಿ ತೆರಳಿದ್ದಾಳೆ, ಈ ವೇಳೆ ಕಾರು ಅಪಘಾತವಾಗಿ, ಆಟೋ ಚಾಲಕರೊಂದಿಗೆ ವಾಗ್ವಾದ ನಡೆದಿದೆ. ಗಸ್ತಿನಲ್ಲಿದ್ದ ಹೊಯ್ಸ ಪೊಲೀಸ್ ಸ್ಥಳಕ್ಕೆ ಧಾವಿಸಿದಾಗ ಎಲ್ಲರೂ ಬೇರೆ ಬೇರೆ ಕಡೆ ತೆರಳಿದ್ದಾರೆ. ಯುವತಿ ಒಂಟಿಯಾಗಿ ಸ್ಥಳದಿಂದ ನಡೆದುಕೊಂಡೇ ತೆರಳಿದ್ದಳು. ಈ ವೇಳೆ ಮೋಟಾರ್ ಬೈಕ್ ನಲ್ಲಿ ಬಂದ ವ್ಯಕ್ತಿಯೊಬ್ಬ ಆಕೆಯನ್ನು ಮನೆಗೆ ಬಿಡುವುದಾಗಿ ಹೇಳಿ ಗಾಡಿ ಹತ್ತಿಸಿಕೊಂಡಿದ್ದಾನೆ. ಬೈಕ್ ಹತ್ತಿಸಿಕೊಂಡ ವ್ಯಕ್ತಿ ಆಕೆಯನ್ನು ಹೊಸೂರು ಸರ್ವಿಸ್ ರಸ್ತೆಯ ಗೋಡೌನ್ ಬಳಿಯ ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದಿದ್ದಾನೆ. ಅಪಾಯವನ್ನು ಗ್ರಹಿಸಿದ ಸಂತ್ರಸ್ತೆ ತನ್ನ ಸ್ನೇಹಿತನಿಗೆ SOS ತುರ್ತು ಕರೆ ಮಾಡಿದ್ದಾಳೆ.

ಆಕೆಯ ಸ್ನೇಹಿತ ಸ್ವೀಕರಿಸಿದ ಸ್ಥಳದ ಆಧಾರದ ಮೇಲೆ ಆಕೆಯಿದ್ದ ಸ್ಥಳ ತಲುಪಲು 10-15 ನಿಮಿಷಗಳಲ್ಲಿ ಸಮಯ ತೆಗೆದುಕೊಂಡಿದ್ದು, ಈ ವೇಳೆಗಾಗಲೇ ಮಹಿಳೆ ಮೇಲೆ ಅತ್ಯಾಚಾರ ನಡೆಸಲಾಗಿತ್ತು. ಸ್ಥಳವನ್ನು ತಲುಪಿದಾಗ, ಆಕೆಯ ಸ್ನೇಹಿತನು ಮುಖದ ಮೇಲೆ ಗಾಯದ ಗುರುತುಗಳಿದ್ದ ಶರ್ಟ್ ಧರಿಸದ ವ್ಯಕ್ತಿ ಹೋಗುತ್ತಿರುವುದನ್ನು ನೋಡಿದ್ದಾನೆ. ಆತನನ್ನು ಹಿಡಿದುಕೊಳ್ಳಲು ಯತ್ನಿಸಿದಾಗ ಆರೋಪಿ ಪರಾರಿಯಾಗಿದ್ದಾನೆ. ಸ್ವಲ್ಪ ಸಮಯದ ನಂತರ, ಇನ್ನೊಬ್ಬ ಸ್ನೇಹಿತ ಬಂದು ನೆಲದ ಮೇಲೆ ಅರೆಬೆತ್ತಲೆ ಸ್ಥಿತಿಯಲ್ಲಿ ಬಿದ್ದಿದ್ದ ಸಂತ್ರಸ್ತೆಯನ್ನು ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಂತ್ರಸ್ತೆಯ ಸ್ನೇಹಿತ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಸಂತ್ರಸ್ತೆಯನ್ನು ಭಾನುವಾರ ಬೆಳಗ್ಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಪೊಲೀಸರು ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಭಾನುವಾರ ನಸುಕಿನ 1 ರಿಂದ 1.30 ರ ನಡುವೆ ಈ ಘಟನೆ ನಡೆದಿದೆ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ (ಪೂರ್ವ), ರಮಣ್ ಗುಪ್ತಾ ತಿಳಿಸಿದ್ದಾರೆ.

ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 64 (ಅತ್ಯಾಚಾರಕ್ಕೆ ಶಿಕ್ಷೆ) ಅಡಿಯಲ್ಲಿ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.