Header Ads Widget

ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಹಾಗೂ ನಮ್ಮ ಅನುಸರಣೆ~ಶೋಭಾ ದಿನೇಶ್ ಉದ್ಯಾವರ

 

ನಾರಾಯಣ ಗುರುಗಳ ತತ್ವಗಳನ್ನು ಪ್ರಸ್ತುತ ನಾವೆಷ್ಟು ಅನುಸರಿಸಿಕೊಂಡು ಹೋಗುತ್ತಿದ್ದೇವೆ ?ಎನ್ನುವ ವಿಚಾರಾವಲೋಕನವನ್ನು ಮಂಥನ ಮಾಡಿ ನೋಡಿದಾಗ ಗುರು ತತ್ವಗಳ ಅಳವಡಿಕೆಯ ಪ್ರಗತಿ ಇನ್ನೂ ಬಹಳಷ್ಟು ಆಗಲಿಕ್ಕಿದೆ. ಗುರುಗಳ ಬೋಧನೆಗಳನ್ನು ನಾವೆಷ್ಟು ಅನುಸರಿಸುತ್ತಿದ್ದೇವೆ? ಅನಿಷ್ಟ ಸಂಪ್ರದಾಯಗಳ ವಿರುದ್ಧ ಹೋರಾಡಿ ಒಂದೇ ಜಾತಿ ವಂದೇ ಮತ ಒಂದೇ ದೇವರು ಎಂದು ಸಾರಿದ ನಾರಾಯಣ ಗುರುಗಳ ತತ್ವಗಳನ್ನು ನಾವೆಷ್ಟು ಅನುಸರಿಸಿಕೊಂಡು ಹೋಗುತ್ತಿದ್ದೇವೆ.

ಈ ವಿಚಾರವನ್ನು ಆಳವಾಗಿ ಪರಿಗಣಿಸಿದಾಗ ಆ ಒಂದು ಕಾಲದಲ್ಲಿ ಅಸ್ಪೃಶ್ಯರಿಗೆ ಹಾಗೂ ಕೆಳಜಾತಿಯವರಿಗೆ ದೇವಾಲಯದ ಪ್ರವೇಶ ನಿಷಿದ್ಧವಾಗಿತ್ತು. ಹಾಗೂ ಶಿಕ್ಷಣ ವಂಚಿತರಾಗಿದ್ದ ಕಾಲಘಟ್ಟದಲ್ಲಿ ಸಮಾಜ ಸುಧಾರಣೆಯನ್ನು ಕೈಗೆತ್ತಿಕೊಂಡವರೇ ಬ್ರಹ್ಮಶ್ರೀ ನಾರಾಯಣ ಗುರುಗಳು. ಆದರೆ ಗುರುಗಳು ಯಾವುದೇ ಹಿಂಸಾ ಮಾರ್ಗಗಳನ್ನು ಅನುಸರಿಸದೆ ಅನುಸಂಧಾನದ ಮೂಲಕ ಚಳುವಳಿಗಳನ್ನು ನಡೆಸಿ ಪರಿಸ್ಥಿತಿ ಸುಧಾರಣೆಯಾಗದಿದ್ದಾಗ ಹಲವು ದೇವಾಲಯಗಳನ್ನು ತಾವೇ ನಿರ್ಮಿಸಿ ದೇವಸ್ಥಾನದ ಒಳಗೆ ಪ್ರವೇಶಕ್ಕೆ ಅನುವು ಮಾಡಿಕೊಟ್ಟರು

ಕ್ರಮೇಣ ಆ ಒಂದು ಕಾಲಘಟ್ಟದಲ್ಲಿ ಅಸ್ಪೃಶ್ಯತೆ ಎಂಬ ಪಿಡುಗೊಂದು ತೆರೆಗೊಂಡಿತು .ತದನಂತರ ಸವರ್ಣರ ದೇವಾಲಯಗಳಿಗೆ ಎಲ್ಲಾ ಜಾತಿ ಧರ್ಮದವರಿಗೂ ಒಳ ಪ್ರವೇಶ ದೊರೆಯಿತು. ಗುರುಗಳ ಬೋಧನೆಗಳತ್ತ ಒಮ್ಮೆ ಕಣ್ಣು ಹಾಯಿಸಿದಾಗ ,ಪ್ರಾಣಿ ಹಿಂಸೆ ಮಾಡಬಾರದೆಂದು ಬಲಿಗಳನ್ನು ನಿಲ್ಲಿಸುವಂತೆ ತಿಳಿಸಿದರು.ಭೂತರಾಧನೆ ನಾಗ ಪೂಜೆ ಇವುಗಳನ್ನೆಲ್ಲ ಸರಳವಾಗಿ ಆಚರಿಸಿ,ದುಂದು ವೆಚ್ಚಗಳಂತಹ ಸಂಪ್ರದಾಯಗಳಿಗೆ ಬಲಿಬೀಳಬಾರದೆಂದು ಮನವರಿಕೆ ಮಾಡಿಸಿದ್ದರು.ಅಂತಹ ಆಡಂಬರದ ಪೂಜೆಗಳನ್ನು ದೇವರು ಬಯಸುವುದಿಲ್ಲ ಎಂಬ ಸಂದೇಶವನ್ನು ಕೊಟ್ಟರು. ಮಧ್ಯಪಾನ ನಿಲ್ಲಿಸುವಂತೆ ಕರೆಕೊಟ್ಟರು .ಬಾಲ್ಯ ವಿವಾಹ ಬಹುಪತ್ನಿತ್ವ ಬಹು ಪತಿತ್ವ ಸಲ್ಲದೆಂದು ಕರೆಕೊಟ್ಟರು.

ವರದಕ್ಷಿಣೆಯ ಪಿಡುಗಿಗೊಂದು ಬರೆ ಎಳೆದರು. ಶಿಕ್ಷಣ ಹಾಗು ಉದ್ಯೋಗದ ಬಗ್ಗೆ ಸಮೃದ್ಧ ತಿಳುವಳಿಕೆಯನ್ನು ಕೊಡಿಸಿದರು. ಅದ್ದೂರಿ ಮದುವೆಗೆ ತೆರೆ ಎಳೆದು ಸರಳ ಮದುವೆ ಮಾಡಿಸುವಂತೆ ಕೇಳಿಕೊಂಡರು. ಮೂಢನಂಬಿಕೆಯಿಂದ ಹೊರಬರಲು ಶಿಕ್ಷಣ ಎನ್ನುವ ಜ್ಞಾನದ ಮೂಲಕ ಅಜ್ಞಾನದ ಅಂಧಕಾರವನ್ನು ಹೊಡೆದೋಡಿಸಿದರು .ಆದರೆ ನಾರಾಯಣ ಗುರುಸ್ವಾಮಿ ಹಾಕಿಕೊಟ್ಟ ಅಡಿಪಾಯವನ್ನು ನಾವೆಷ್ಟು ಗಟ್ಟಿಗೊಳಿಸುತ್ತಿದ್ದೇವೆ ಎಂಬ ಚಿಂತನೆ ಪ್ರತಿಯೊಬ್ಬರಲ್ಲಿ ಮೂಡಿ ಅದನ್ನು ಅನುಸರಿಸಿಕೊಂಡು ಹೋದರೆ ಮಾತ್ರ ಅವರು ಆ ಸಂದರ್ಭದಲ್ಲಿ ಮಾಡಿದ ಚಳುವಳಿ ಹೋರಾಟಕ್ಕೆ ಎಂದೂ ಜಯ ಸಿಗಬಹುದು.

ಅವರ ಬೋಧನೆಗಳ ಬಗ್ಗೆ ತಿಳಿಯಪಡಿಸುವ ಜವಾಬ್ದಾರಿಗಳನ್ನು ಸಂಘ ಸಂಸ್ಥೆಗಳು ಕೈಗೊಂಡು ಜನರ ಮನ ಮುಟ್ಟಿಸುವಲ್ಲಿ ಪ್ರಯತ್ನಿಸಿದರೆ ಗುರುಜಯಂತಿಯ ಆಚರಣೆಗೊಂಡು ಅರ್ಥ ಸಿಗಬಹುದು. ಹಿಂದೂ ಧರ್ಮದಲ್ಲೊಂದು ದೊಡ್ಡ ಕೊರತೆ ಎಂದರೆ ಧರ್ಮ ಶಿಕ್ಷಣದ ಕೊರತೆ ಬಾಲಸಂಸ್ಕಾರ ಧರ್ಮ ಶಿಕ್ಷಣ ನೀಡುವ ಬಗ್ಗೆ ಧರ್ಮ ಜಾಗೃತಿಯನ್ನು ಅನುಷ್ಠಾನಗೊಳಿಸಲು ಸಂಘ ಸಂಸ್ಥೆಗಳು ಕೈಜೋಡಿಸಬೇಕಾಗಿದೆ ಆಗ ತತ್ವಗಳು ಕಂಡಿತ ನೆರವೇರಬಹುದು.

ಒಂದೇ ಜಾತಿ ಒಂದೇ ಮತ ಒಂದೇ ಧರ್ಮ ಒಂದೇ ದೇವರು ಎಂದು ಬರಿ ಬಾಯಿ ಮಾತಿಗಷ್ಟೇ ಹೇಳದೆ ಆ ವೇದವಾಕ್ಯವನ್ನು ಜನಸಾಮಾನ್ಯರು ಹೃದಯದಿಂದ ಸ್ವೀಕರಿಸಬೇಕಾಗಿದೆ. ಬಾಲ್ಯ ವಿವಾಹ ಪೂರ್ಣ ಪ್ರಮಾಣದಲ್ಲಿ ನಿರ್ವಾಣಗೊಂಡಿತು. ಶೈಕ್ಷಣಿಕ ವಿಚಾರ ತೆಗೆದುಕೊಂಡರೆ ಶಿಕ್ಷಣ ಪ್ರತಿಯೊಬ್ಬರಿಗೂ ಹೆಣ್ಣು ಗಂಡೆಂಬ ಭೇದವಿಲ್ಲದೆ ಬಡವ ಬಲ್ಲಿದನೆಂಬ ತಾರತಮ್ಯವಿಲ್ಲದೆ ಉತ್ತಮ ಶಿಕ್ಷಣ ಎಲ್ಲಾ ವರ್ಗಗಳಿಗೂ ದೊರೆಯುವಂತಹ ಸೌಲಭ್ಯಗಳು ಬಹಳಷ್ಟು ಆಗಿದೆ .ಈ ಬೆಳವಣಿಗೆ ಗುರುಗಳ ಕಠಿಣ ಶ್ರಮದ ಫಲ ಎಂದರೆ ತಪ್ಪಾಗದು.ಆದರೆ ನಾವಿಲ್ಲಿ ವರದಕ್ಷಿಣೆ ಹಾಗೂ ಆಡಂಬರದ ಮದುವೆಯ ವಿಚಾರ ತೆಗೆದುಕೊಂಡರೆ ಗುರುಗಳು ಸಾರಿದ ಬೋಧನೆಯಲ್ಲಿ ಆಡಂಬರದ ಮದುವೆ ನಿಲ್ಲಿಸಬೇಕು ಸರಳ ವಿವಾಹ ಜಾರಿಗೊಳಿಸಿದ್ದರು .

ಈ ವಿಶಯವಾಗಿ ನೋಟ ಹರಿಸಿದಾಗ ನಾವೆಷ್ಟು ಸರಳವಾದ ವಿವಾಹಗಳನ್ನು ಮಾಡುತ್ತಿದ್ದೇವೆ ಈ ಬಗ್ಗೆ ನಾವ್ಯಾಕೆ ಜಾಗೃತ ರಾಗುತ್ತಿಲ್ಲಎಂಬ ಪ್ರಶ್ನೆಯೊಂದು ಹಾದು ಹೋಗುತ್ತದೆ.ಪ್ರಸ್ತುತ ದಿನಗಳಲ್ಲಿ ವರದಕ್ಷಿಣೆ ಎನ್ನುವ ಪಿಡುಗು ಬಹಳಷ್ಟು ಕಡಿಮೆಯಾಗಿದೆ ಆದರೆ ಮದುವೆ ಮಾತ್ರ ಮಿತಿಮೀರಿದ ಆಡಂಬರದಲ್ಲಿ ನಡೆಯುತ್ತಿದೆ. ನಮ್ಮ ಸಂಪ್ರದಾಯಗಳನ್ನು ಬದಿಗಿಟ್ಟು ಅನ್ಯಅನುಕರಣೆ ಗಳತ್ತ ಒಲವು ಮೂಡಿಸಿಕೊಂಡು ವಿನಾಕಾರಣ ದುಂದು ವೆಚ್ಚಗಳನ್ನು ಮಾಡುತ್ತಿದ್ದೇವೆ.ಈ ಬಗ್ಗೆ ನಾವ್ಯಾಕೆ ಎಚ್ಚೆತ್ತುಕೊಳ್ಳುತ್ತಿಲ್ಲ? ಮದ್ಯಪಾನದಿಂದ ಮನೆ ಹಾಗೂ ಸಮಾಜದ ಶಾಂತಿ ಹಾಳಾಗುವುದಲ್ಲದೆ ಆರ್ಥಿಕವಾಗಿ ಸಂಸಾರ ಕುಂಠಿತಗೊಳ್ಳುತ್ತದೆ ಹಾಗೂ ದೈಹಿಕ ಹಾಗೂ ಮಾನಸಿಕ ವ್ಯಥೆಗಳನ್ನು ಅನುಭವಿಸಬೇಕಾಗುತ್ತದೆ ಎಂಬ ನಿಟ್ಟಿನಲ್ಲಿ ಮದ್ಯಪಾನ ಸೇವನೆಗೆ ಸಂಪೂರ್ಣ ನಿಷೇಧವನ್ನುಗುರುಗಳು ಹೇರಿದರು.

ಆದರೆ ನಾವಿಂದು ಮೈಮೇಲೆ ಒಂದಷ್ಟು ಸಾಲ ಮಾಡಿಕೊಂಡು ಮದುವೆ ಯಂತಹ ಒಳ್ಳೆಯ ಶುಭ ಕಾರ್ಯಕ್ರಮದ ಮುನ್ನಾದಿನ ನಡೆವ ಮದರಂಗಿ ಸಂಪ್ರದಾಯದ ಶುಭ ಸಂದರ್ಭದಲ್ಲಿ ಮದ್ಯಪಾನ ಮಾಂಸಾಹಾರದಂತಹ ಅನಿಷ್ಟ ವ್ಯವಸ್ಥೆಯನ್ನು ರೂಪಿಸಿ ಕೊಂಡು ಕುಣಿದು ಖುಷಿ ಪಡುತ್ತಿದ್ದೇವೆ. ಗುರುಗಳ ತತ್ವವನ್ನು ನಾವು ಮೀರಿ ಹೋಗುತ್ತಿದ್ದೇವೆ ಎನ್ನುವ ಬಗ್ಗೆ ಅದ್ಯಾಕೋ ಯುವ ಜನಾಂಗಕ್ಕೆ ಅರಿವಾಗುತ್ತಿಲ್ಲ

ಎಲ್ಲಾ ಕಡೆ ಅವರ ತತ್ವ ಪಾಲಿಸುತ್ತಿಲ್ಲ ಎಂದು ನಾನು ಹೇಳುತ್ತಿಲ್ಲ. ಸಂಘ ಸಂಸ್ಥೆಗಳು ಬಹಳಷ್ಟು ಒಳ್ಳೆಯ ಕೆಲಸಗಳನ್ನು ನಡೆಸುತ್ತಿದೆ ಆದರೆ ಇವು ಪ್ರಸ್ತುತ ಕಾಲದಲ್ಲಿ ಇನ್ನೂ ಅಭಿವೃದ್ಧಿಪಡಿಸ ಬೇಕಾದೀತು ಕೆಲವು ಕಡೆ ಬಹಳ ಸರಳ ಹಾಗೂ ಮದುಮಾಂಸವಿಲ್ಲದ ಮದುವೆಗಳು ಈಗಲೂ ನಡೆಯುತ್ತಿದೆ. ಇನ್ನು ಮಹಿಳೆಯರ ಮೇಲೆ ಹೇರಿದ್ದ ಅನಿಷ್ಟ ಕಂದಾಚಾರಗಳಿಗೆ ತೆರೆ ಹಾಕಿ ಅವರಿಗೊಂದು ಸ್ಥಾನಮಾನ ನೀಡಿದ ಉತ್ತಮ ನಿದರ್ಶನಗಳು ಕೂಡ ನಮ್ಮ ಸಂಘದ ಮಂಚೂಣಿಯಲ್ಲಿದೆ. ಗುರುಗಳು ಹಾಕಿ ಕೊಟ್ಟ ತತ್ವಗಳನ್ನು ಯುವ ಜನಾಂಗ ಅನುಷ್ಠಾನಕ್ಕೆ ತರುವಂತೆ ಧರ್ಮ ವ್ಯವಸ್ಥೆಯೊಂದಿಗೆ ದುಡಿಯಬೇಕು.

ಗುರುಗಳು ಹಾಕಿಕೊಟ್ಟ ಸುಂದರ ಅಡಿಪಾಯದ ಮೇಲೊಂದು ಜ್ಞಾನೋದಯ ಮೆಟ್ಟಿಲುಗಳು ನಿರ್ಮಾಣವಾಗಬೇಕು.ನಾರಾಯಣ ಗುರುಗಳು ಬೆಳಗಿಸಿದ ಬೆಳಕಿನ ದೀಪದ ಕೆಳಗಡೆ ಕೈ ಕೈ ಹಿಡಿದು ನಡೆಯುವ ಆಲೋಚನೆಯನ್ನು ಪ್ರತಿಯೊಬ್ಬ ಅನುಸರಿಸಿಕೊಂಡು ನಡೆದರೆ ದೇಶದ ಅಭಿವೃದ್ಧಿಯಾಗುವಲ್ಲಿ ಬೇರೆ ಮಾತಿಲ್ಲ . ಆಧ್ಯಾತ್ಮಿಕದ ಮೂಲಕ ಸಮಾಜ ಸುಧಾರಣೆ ಮಾಡಿದ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಗಳನ್ನು ತಿಳುವಳಿಕೆ ಎಂಬ ಪಲ್ಲಕ್ಕಿಯಲ್ಲಿ ಹೊತ್ತೊಯ್ದ ಅಜ್ಞಾನದ ಅಂಧಕಾರವನ್ನು ಹೊಡೆದೋಡಿಸಿ ಜ್ಞಾನ ಸುಧೆಯನ್ನು ಹರಿಸುವ

ಶೋಭಾ ದಿನೇಶ್ ಉದ್ಯಾವರ