ಹಿರಿಯ ನಾಗರಿಕರ ವೇದಿಕೆ ಬೈಂದೂರು ಮತ್ತು ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ಸಂಘದ ಬೈಂದೂರು ತಾಲೋಕು ಘಟಕ ಇವರ ಜಂಟಿ ಆಶ್ರಯದೊಂದಿಗೆ ಬೈಂದೂರು ಶ್ರೀ ಮಹಾಕಾಳಿ ದೇವಸ್ಥಾನದ ವಠಾರದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಹಿರಿಯ ಸದಸ್ಯರು ನಿವೃತ್ತ ಮುಖ್ಯೋಪಾಧ್ಯಾಯರೂ ಆದ ಶ್ರೀ ಡಿ.ಶೇಷಗಿರಿಯವರು ಧ್ವಜಾರೋಹಣ ನೆರವೇರಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ನಿವೃತ್ತ ಸರಕಾರಿನೌಕರರ ಸಂಘದ ಅಧ್ಯಕ್ಷ ಶ್ರೀ ಐ. ನಾರಾಯಣ ಅವರು ಪ್ರಾಸ್ತಾವಿಕ ನುಡಿಗಳೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು.ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ಶ್ರೀ ಕೆ.ಪುಂಡಲೀಕ ನಾಯಕ್ ಅವರು ಅಧ್ಯಕ್ಷೀಯ ನುಡಿಗಳನ್ನಾಡಿ,ಸ್ವಾತಂತ್ರ್ಯೋತ್ಸವದ ಶುಭಾಶಯ ಹೇಳಿದರು.
ಕಾರ್ಯಕ್ರಮದಲ್ಲಿ ಮಣಿಪಾಲ್ ಸಮೂಹ ಸಂಸ್ಥೆಗಳ ಪ್ರೇರಣೆ,ಸಹಕಾರದೊಂದಿಗೆ ಪ್ರಾತಿನಿದ್ಯ ವಹಿಸಿ, ಮಾಹೆ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರೂ ಮತ್ತು ಪಿ.ಹೆಚ್.ಡಿ ಸಂಶೋಧನಾ ಅಭ್ಯರ್ಥಿಯಾದ ಶ್ರೀ ರಾಘವೇಂದ್ರ ಜಿ ಮತ್ತು ಕಾರ್ಯಕ್ರಮ ಸಂಯೋಜಕರಾದ ಕುಮಾರಿ ಅಶ್ವಿನಿಯವರು (ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್) ಹಿರಿಯ ನಾಗರಿಕರ ಪುನಶ್ಚೇತನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಅವರು ಸೈಬರ್ ವಂಚನೆಯ ಕುರಿತು ಜನಜಾಗೃತಿ,ಸುರಕ್ಷತೆ,ಭದ್ರತೆ ಮತ್ತು ಗೌಪ್ಯತೆಗಳ ಬಗ್ಗೆ ದೃಶ್ಯ ಮಾದ್ಯದ ಮೂಲಕ ಮನವರಿಕೆ ಮಾಡಿಕೊಟ್ಟರು.ವಿವಿಧ ಮೊಬೈಲ್ ಆ್ಯಪ್ ಗಳ ಬಳಕೆ ಮೊಬೈಲ್ ನ್ನು ದೈನಂದಿನ ಜೀವನದಲ್ಲಿ ಹೇಗೆ ಬಳಸಿಕೊಳ್ಳಬೇಕು ಹಾಗೂ ಆಧುನಿಕ ವಿಧಾನಗಳ ಮೂಲಕ ಮೊಬೈಲ್ ಬಳಕೆಯಿಂದ ಬದುಕನ್ನು ಹೇಗೆ ಸರಳ ಹಾಗೂ ಸುಂದರವಾಗಿಸಬಹುದೆಂದು ತಿಳಿಸಿ,ಅನೇಕ ಪ್ರಾತ್ಯಕ್ಷಿಕೆ ಮತ್ತು ಮತ್ತು ಪ್ರಶ್ನಾವಳಿಗಳು,ರಸಪ್ರಶ್ನೆಗಳ ಮೂಲಕ ಮತ್ತು ಆಂಡ್ರಾಯ್ಡ್ ಮೊಬೈಲ್ ಗಳ ಬಳಕೆ ಕುರಿತು ಪ್ರಾಯೋಗಿಕವಾಗಿ ತಿಳಿಹೇಳಿದರು.
ಹಿರಿಯ ನಾಗರಿಕರಿಗೆ ಇದೊಂದು ಅರ್ಥಪೂರ್ಣ ಕಾರ್ಯಾಗಾರವಾಗಿತ್ತು. ಶ್ರೀ ಎನ್ ಜಗನ್ನಾಥ ಶೆಟ್ಟಿ,ಶ್ರೀ ಮಂ ಜುದೇವಾಡಿಗ,ಶ್ರೀ ರಾಮ ಸೇರೆಗಾರ್ ಉಪಸ್ಥಿತಿತರಿದ್ದರು. ಸಭೆಯ ಆರಂಭದಲ್ಲಿ ಶ್ರೀಮತಿ ಶಾರದಾ ಟೀಚರ್ ಪ್ರಾರ್ಥನೆ ಮಾಡಿದರು. ಉಭಯ ಸಂಘಟನೆಯ ಕಾರ್ಯದರ್ಶಿ ಶ್ರೀ ಗೋವಿಂದ ಬಿಲ್ಲವರು ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.