ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ಚರ್ಚಿನ ಪ್ರತಿಷ್ಠಾಪನೆಯ ವಾರ್ಷಿಕ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಒಂಬತ್ತು ದಿನಗಳ ನೊವೆನಾ ಪ್ರಾರ್ಥನೆಗೆ ಮಂಗಳವಾರ ಸಂಜೆ ಚಾಲನೆ ನೀಡಲಾಯಿತು.
ಮಂಗಳೂರು ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಲೊರೇನ್ಸ್ ಮ್ಯಾಕ್ಷಿಮ್ ನೊರೊನ್ಹಾ ಅವರು ಒಂಬತ್ತು ದಿನಗಳ ನೊವೆನಾ ಕಾರ್ಯಕ್ರಮಕ್ಕೆ ಧ್ವಜಾರೋಹಣ ಮಾಡುವುದರ ಮೂಲಕ ಚಾಲನೆ ನೀಡಿ ಪವಿತ್ರ ಬಲಿಪೂಜೆಯನ್ನು ಅರ್ಪಿಸಿದರು.
ಈ ವೇಳೆ ವೆಲಂಕಣಿ ಮಾತೆಯ ಪುಣ್ಯಕ್ಷೇತ್ರದ ರೆಕ್ಟರ್ ವಂ|ಡಾ|ಬ್ಯಾಪ್ಟಿಸ್ಟ್ ಮಿನೇಜಸ್, ಚರ್ಚಿನ ಮಹೋತ್ಸವ ಆಚರಣಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಆಗಸ್ಟ್ 15 ಚರ್ಚಿನ ಪ್ರತಿಷ್ಠಾಪನಾ ಮಹೋತ್ಸವ ಜರುಗಲಿದ್ದು, ಒಂಬತ್ತು ದಿನಗಳ ನೊವೆನಾ ಕಾರ್ಯಕ್ರಮದಲ್ಲಿ ವಿವಿಧ ಉದ್ದೇಶಗಳಾದ, ಯುವಜನತೆ, ಧಾರ್ಮಿಕ ವ್ಯಕ್ತಿಗಳು, ಅಶಕ್ತರು, ಕ್ರೈಸ್ತ ಕುಟುಂಬಗಳು, ವಿದೇಶದಲ್ಲಿ ನೆಲೆಸಿರುವ ಕ್ರೈಸ್ತ ವಿಶ್ವಾಸಿಗಳು, ದಾನಿಗಳು, ಮದುವೆಯಾದ ದಂಪತಿಗಳು, ಮಕ್ಕಳು, ಹಾಗೂ ಭಕ್ತಿಕರಿಗಾಗಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ.
ಆಗಸ್ಟ್ 11 ಭಾನುವಾರದಂದು ಮಧ್ಯಾನ್ಹ 2:30 ಗಂಟೆಗೆ ಕಲ್ಮಾಡಿ ಸೇತುವೆಯಿಂದ ಕಲ್ಮಾಡಿ ದೇವಾಲಯದ ವರೆಗೆ ವೆಲಂಕಣಿ ಮಾತೆಯ ಮೂರ್ತಿಯ ಮೆರವಣಿಗೆ ನಡೆಯಲಿರುವುದು. ಅಂದು ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರಾಗಿರುವ ಅತೀ ವಂದನೀಯ ಡಾ. ಲುವಿಸ್ ಪಾವ್ಲ್ ಡಿʼಸೋಜಾ ರವರು ವೆಲಂಕಣಿ ಮಾತೆಯ ಮೂರ್ತಿಯ ಮೆರವಣಿಗೆ ಚಾಲನೆ ನೀಡಲಿರುವರು.
ಆಗಸ್ಟ್ 15 ಗುರುವಾರದಂದು ಬೆಳಗ್ಗೆ 10:30 ಗಂಟೆಗೆ ದಿವ್ಯ ಬಲಿಪೂಜೆಯನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಜೆರಾಲ್ಡ್ ಐಸಾಕ್ ಲೋಬೊರವರು ನೆರೆವೇರಿಸಲಿರುವರು. ಉಡುಪಿ ಧರ್ಮಪ್ರಾಂತ್ಯದ ಅನೇಕ ಧರ್ಮಗುರುಗಳು ಹಾಗೂ ಸಾವಿರಾರು ಭಕ್ತಾದಿಗಳು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವರು. ಅಂದು ಬೆಳಗ್ಗೆ 7:30 ಹಾಗೂ ಸಾಯಂಕಾಲ 4:00 ಗಂಟೆಗೆ ಕೊಂಕಣಿ ಭಾಷೆಯಲ್ಲಿ ಹಾಗೂ ಸಾಯಂಕಾಲ 6:00 ಗಂಟೆಗೆ ಇಂಗ್ಲೀಷ್ ಭಾಷೆಯಲ್ಲಿ ಇತರೆ ಬಲಿಪೂಜೆಗಳನ್ನು ಆಯೋಜಿಸಲಾಗಿದೆ.