ಸಾಲಿಗ್ರಾಮದ ಶ್ರೀ ಗುರು ನರಸಿಂಹ ದೇವಸ್ಥಾನದಲ್ಲಿ ದಿನಂಪ್ರತಿ ನಡೆಯುತ್ತಿರುವ ಅನ್ನ ದಾಸೋಹವು ಶುಚಿ, ರುಚಿ ಮತ್ತು ಸಮಯ ಕ್ಲಪ್ತತೆಗೆ ಹೆಸರುವಾಸಿಯಾಗಿದ್ದು, ದೈವ ಪ್ರೇರಣೆಯಂತೆ ಭೋಜನ ನಿಧಿಗೆ ದೇಣಿಗೆಯನ್ನು ನೀಡಿರುವುದಾಗಿ ಬೆಂಗಳೂರಿನ ಹೋಟೆಲ್ ಇಂದ್ರಪ್ರಸ್ಥದ ಮಾಲಿಕ, ಮೂಲತಃ ಕೋಟ ಹೋಬಳಿಯ ಹರ್ತಟ್ಟು ಮೂಲದ ಶ್ರೀ ಪ್ರಕಾಶ ಮಯ್ಯರು ಅಭಿಪ್ರಾಯ ಪಟ್ಟಿದ್ದಾರೆ. ಶ್ರೀಮತಿ ಯಮುನಾ ಮತ್ತು ಶ್ರೀ ಚಂದ್ರಶೇಖರ ಮಯ್ಯ ದಂಪತಿಯ ಸ್ಮರಣಾರ್ಥವಾಗಿ ಶ್ರೀಮತಿ ಮಂಜುಳಾ ಮತ್ತು ಶ್ರೀ ಪ್ರಕಾಶ ಮಯ್ಯ ದಂಪತಿಯು ದೇವಳದ ಶಾಶ್ವತ ಭೋಜನ ನಿಧಿಗೆ ಕೊಡಮಾಡಿದ ಒಂದು ಕೋಟಿ ರೂಪಾಯಿಗಳ ದೇಣಿಗೆಯ ನಾಮಫಲಕವನ್ನು ಅನಾವರಣಗೊಳಿಸಿದ ಶ್ರೀ ಪ್ರಕಾಶ ಮಯ್ಯರನ್ನು ಅಧ್ಯಕ್ಷ ಡಾ.ಕೆ.ಎಸ್.ಕಾರಂತರು ಕ್ಷೇತ್ರದ ಸಾಂಪ್ರದಾಯಿಕ ಗೌರವದೊಂದಿಗೆ ಅಭಿನಂದಿಸಿ ಶುಭವನ್ನು ಹಾರೈಸಿದರು. ಕಾರ್ಯದರ್ಶಿ ಲಕ್ಷ್ಮೀನಾರಾಯಣ ತುಂಗ, ಕೂಟ ಮಹಾಜಗತ್ತಿನ ಕೇಂದ್ರ ಸಂಸ್ಥೆಯ ಪೂರ್ವ ಕೋಶಾಧಿಕಾರಿ ಶ್ರೀ ತಾರಾನಾಥ ಹೊಳ್ಳ (ಗೆಳೆಯರ ಬಳಗ), ಮತ್ತವರ ಪತ್ನಿ ಶ್ರೀಮತಿ ಮಲ್ಲಿಕಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ದೇವಳದ ಆಗಮನಿಗಮಾಗಮ ವೇದ ಪಾಠ ಶಾಲೆಯ ವಿದ್ಯಾರ್ಥಿಗಳಿಂದ ವೇದ ಮಂತ್ರವು ಪಠಿಸಲ್ಪಟ್ಟಿತು. ಹಿರಿಯ ಸಿಬ್ಬಂದಿ ಶ್ರೀಕಾಂತ ಕಲ್ಕೂರರು ವಂದನಾರ್ಪಣೆಗೈದರು. ಸರಳ ಸಮಾರಂಭವನ್ನು ದೇವಳದ ಸಹಾಯಕ ಪ್ರಬಂಧಕ ಗಣೇಶ ಭಟ್ಟರು ಅಚ್ಚುಕಟ್ಟಾಗಿ ನಿರ್ವಹಿಸಿದರು.