ಆಗಸ್ಟ್ ತಿಂಗಳ ಮೊದಲ ಭಾನುವಾರವೆಂದರೆ ವಾಟ್ಸಪ್ ಸ್ಟೇಟಸ್ ,ಇನ್ಸ್ಟಾ , ಫೇಸ್‌ಬುಕ್ ಮುಂತಾದ ಸಾಮಾಜಿಕ ಜಾಲತಾಣದಲ್ಲಿ ಸ್ನೇಹದ ದ್ಯೋತಕವಾಗಿ ಸಂಕೇತಗಳು,ಮಿತ್ರತ್ವದ ಸ್ಲೋಗನ್ ಗಳು,ಚಿತ್ರಗಳು ಪುಂಖಾನುಪುಂಖವಾಗಿ ಕಾಣಸಿಗುತ್ತದೆ. ವಯಕ್ತಿಕವಾಗಿ ಶುಭಾಶಯ ಕೋರುವ ಸ್ನೇಹಿತರ ದಂಡಿಗೇನೂ ಕಡಿಮೆ ಇರುವುದಿಲ್ಲ.ಅಂದು ಅಂತರ್ರಾಷ್ಟ್ರೀಯ ಸ್ನೇಹಿತರ ದಿನ.ಹಳೆಯ ಸ್ನೇಹದ ಪುಟಗಳಿಗೆ ಜೀವ ತುಂಬುವ...ಹೊಸ ಸ್ನೇಹಕ್ಕೆ ಕೈ ಚಾಚುವ ಒಂದು ಸಂಭ್ರಮದ ದಿನವೆಂದು ಇತ್ತೀಚಿನ ವರ್ಷಗಳಿಂದ ಶುಭಾಶಯ ಕೋರಿ ಆಚರಿಸುವ ಪಧ್ಧತಿ ಯ ಫ್ಯಾಷನ್ ಯುವಕರ ನಡುವೆ ಏನೋ ಹೊಸ ವಾತಾವರಣವನ್ನು ಸೃಷ್ಟಿಸುತ್ತಿದೆ. ಆಗಸ್ಟ್ ನ ಈ ಮೊದಲ ಭಾನುವಾರದಂದೆ ಸ್ನೇಹಿತರ ದಿನಾಚರಣೆ ಮಾಡುವುದಕ್ಕೆ ಕಾರಣವೂ ಇದೆ.1935ರಲ್ಲಿ ಅಮೇರಿಕಾ ಸರಕಾರ ಒಬ್ಬ ವ್ಯಕ್ತಿಯನ್ನು ಅಪರಾಧದ ಯಾವುದೋ ಕಾರಣಕ್ಕೆ ಸಾಯಿಸುತ್ತದೆ. ಆ ವ್ಯಕ್ತಿಯ ಸಾವಿನ ಸುದ್ದಿಯನ್ನು ತಿಳಿದ ಆತನ ಆತ್ಮೀಯ ಸ್ನೇಹಿತ ದುಃಖ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.ಅದೇ ಕಾರಣವನ್ನು ಮನಗಂಡ ಸರಕಾರ, ನಿಸ್ವಾರ್ಥ,ನಿಷ್ಕಲ್ಮಷ ಸ್ನೇಹ ಹೊಂದಿದ್ದ ಸತ್ತ ವ್ಯಕ್ತಿಯ ನೆನಪಿನಲ್ಲಿ ಸ್ನೇಹಿತರ ದಿನವೆಂದು ಮುಂದೆ ಜಗಜ್ಹಾಹಿರಾಯಿತು ಎನ್ನುವುದು ಪ್ರತೀತಿ ಇದೆ. ಒಂದೊಂದು ರಾಷ್ಟ್ರದಲ್ಲಿ ಒಂದೊಂದು ಹಿನ್ನಲೆಯಲ್ಲಿ ಆಚರಿಸಲ್ಪಡುತ್ತದೆ. ಇಂದು ಭಾರತವೂ ಸ್ನೇಹಿತರ ದಿನವನ್ನು ಅನುಸರಿಸುತ್ತಿದೆ.ಅದೇನೆ ಪ್ರತೀತಿಗಳಿದ್ದರೂ ಇಂದು ಆಚರಿಸುವ ಸ್ನೇಹ ಸಂಬಂಧ ನೈತಿಕತೆಯನ್ನು ಹೊಂದಿದೆಯೇ ಎನ್ನುವುದು ಮುಖ್ಯವಾಗುತ್ತದೆ.
ಆದಿತ್ಯಸ್ಯೋದಯಂ ತತಾ ತಾಂಬೂಲಂ
ಭಾರತೀಕಥಾ
ಇಷ್ಟಾ ಭಾರ್ಯಾ ಸುಮಿತ್ರಂಚ ಅಪೂರ್ವಾಣಿ
ದಿನೆ ದಿನೇ..
ಈ ಸಂಸ್ಕೃತ ದ ವಾಣಿಯಂತೆ ಸೂರ್ಯೋದಯ,ತಾಂಬೂಲ,ಮಹಾಭಾರತ ಕಥೆ,ಇಷ್ಷಳಾದ ಪತ್ನಿ,ಒಳ್ಳೆಯ ಗೆಳೆತನ ಇವೆಲ್ಲವೂ ದಿನ ದಿನವೂ ಹೊಚ್ಚ ಹೊಸದಾಗಿರುತ್ತದೆ ಎಂದು. ಹೌದು ಸ್ನೇಹ ಎನ್ನುವುದು ಸದಾ ಹೊಚ್ಚ ಹೊಸದಾಗಿಯೆ ಇರುತ್ತದೆ.ಎಲ್ಲಿ ನಿಷ್ಕಲ್ಮಷ ಮನಸಿನ ಹೃದಯಗಳ ನಡುವೆ ಪ್ರೀತಿ,ಆತ್ಮೀಯತೆ ಹುಟ್ಟುತ್ತದೋ ಅಲ್ಲಿ ಸ್ನೇಹ ಸದಾ ಹೊಚ್ಚ ಹೊಸತು..ಸದಾ ಹಸಿರಾಗಿರುತ್ತದೆ.
ಜಾತಿ,ಧರ್ಮವಿಲ್ಲ: ನಿಜವಾದ ಗೆಳೆತನ ಎನ್ನುವುದು ಜಾತಿ,ಧರ್ಮವನ್ನು ಮೀರಿದ್ದು.ಸಂಬಂದಿಗಳಿಗಿಂತ ಮೊದಲು ಬಂದು ಸಹಾಯ ಮಾಡುವ ಸ್ನೇಹಿತ ಜಾತಿ ಮತದ ಮೀನ ಮೇಷ ಎಣಿಸಲಾರ.ಜಗತ್ತಿಗೆ ನೀವು ವ್ಯಕ್ತಿಯಾಗಿರಬಹುದು.ಆದರೆ ಒಬ್ಬ ವ್ಯಕ್ತಿ ಗೆ ನೀವು ಜಗತ್ತಾಗಿ ಕಾಣುವುದು ಒಂದು ಅಮೂಲ್ಯವಾದ ಸ್ನೇಹದಿಂದ.ಸ್ನೇಹದಿಂದ ಸಮಾಜದಲ್ಲಿ ಸೌಹಾರ್ದತೆಯನ್ನು ಕಾಪಾಡಬಹುದು. ಅರಿಸ್ಟಾಟಲ್ ಹೇಳುವಂತೆ " ಸ್ನೇಹವೆಂದರೆ ಎರಡು ಶರೀರಗಳಲ್ಲಿ ವಾಸವಾಗಿರುವ ಆತ್ಮವಾಗಿದೆ.
ಸ್ನೇಹಕ್ಕೆ ವಯಸ್ಸಿಲ್ಲ :
ಗೆಳೆತನಕ್ಕೆ ವಯಸ್ಸಿನ ಹಂಗಿಲ್ಲ.ಆತ್ಮೀಯ ಭಾವನೆಗಳು ತುಂಬಿರುವ ಮನಸ್ಸಿನ ಯಾವ ವಯೋಮಾನದ ವ್ಯಕ್ತಿಯಾಗಿರಲಿ ಗೆಳೆತನವನ್ನು ಬಯಸುವುದು ತಪ್ಪಲ್ಲ.ಬಾಲಕರಿಗೆ ಹಿರಿಯರ ಗೆಳತನವೂ ಇರುತ್ತದೆ.ಮಕ್ಕಳಿಗೆ ಯುವಕರ ಜೊತೆ ಗೆಳೆತನ ಇರುತ್ತದೆ.ಗೆಳೆಯ- ಗೆಳತಿಯರ ನಡುವಿನ ಮಧುರ ಬಾಂಧವ್ಯವೂ ಸ್ನೇಹಕ್ಕೆ ಸಾಕ್ಷಿ ಯಾಗಿರುತ್ತದೆ.ಆದರೂ ಸ್ನೇಹವನ್ನು ವಯೋಮಾನಕ್ಕನುಗುಣವಾಗಿ ವಿವಿಧ ಹಂತಗಳಲ್ಲೂ ಕಾಣಬಹುದು. ಕೆಲವರಿಗೆ ಬಾಲ್ಯದಿಂದಲೇ ಅಯಾಚಿತವಾಗಿ ಸ್ನೇಹ ಸಂಪಾದನೆಯಾಗುತ್ತದೆ.. ವಿದ್ಯಾರ್ಥಿ ದೆಸೆಯಿಂದಲೆ ಆಯಾಯ ಬೌದ್ದಿಕ ಮಟ್ಟದ ಅನುಸಾರವಾಗಿ ಮುಗ್ಧತೆಯ ಸಂಹವಹನಗಳ ಮೂಲಕ ಮೂಡಿಬರುವ ಸ್ನೇಹ ಒಂದು ರೀತಿಯದ್ದಾಧರೆ 18 ರ ಹರೆಯದ ನಂತರ 28 ರವರೆಗಿನ ಗೆಳೆತನ ಹುಡುಗಾಟದಿಂದ ಕೂಡಿರುತ್ತದೆ.ಇಲ್ಲಿ ನೂರಾರು ಜನ ಸ್ನೇಹಿತರು ಈ ವಯಸಿನ ಪಯಣದಲ್ಲಿ ಬಂದು ಹೋಗುತ್ತಾರೆ. ಹಳೆಯ ಕ್ಲಾಸ್ ಮೇಟ್ಸ್, ಹೊಸ ಕಲೀಗ್ಸ್, ರೂಮ್ ಮೇಟ್ಸ್, ಪಕ್ಕದ ಮನೆ ಮಿತ್ರರು, ಊರಿನ ಮಿತ್ರರು,ರೈಡಿಂಗ್ ಮಿತ್ರರು, ಫೇಸ್‌ಬುಕ್ ಗೆಳೆಯರು.. ಹೀಗೆ ಹತ್ತು ಹಲವಾರು ಹಾದಿಯಲ್ಲಿ ಸ್ನೇಹದಿಂದ ಹತ್ತಿರಾದವರಿರುತ್ತಾರೆ.ತಿರುಗಾಟ, ಹೊಡೆದಾಟ, ಹೋಟೆಲ್, ಬಾರ್, ಅಂತ ಒಂದು ಎಂಜಾಯ್ ಮೆಂಟ್ ಗಾಗಿಯೇ ಇರುವ ಹದಿಪರ್ವದ ದಿನಗಳು.ಆದರೆ ಅಲ್ಲಿ ನಿಜವಾದ ಸ್ನೇಹಿತರು ಸಿಗುವುದು ಬೆರಳೆಣಿಕೆಯಷ್ಟು ಮಾತ್ರ. ವಿನಾಕಾರಣ ಜಗಳ, ಮನಸ್ತಾಪದಿಂದ, ಹಣ,ದುರುಪಯೋಗ, ಅನೈತಿಕತೆ, ವ್ಯಸನದಿಂದ ದೂರಾಗುವ ಸಂದರ್ಭಗಳು ಹಲವು..ತದನಂತರ ಮದುವೆ ಆದ ಬಳಿಕ 40 ರ ಹೊಸ್ತಿಲಲ್ಲಿ ಸಿಗುವ ಗೆಳೆಯರೆಂದರೆ ಅಳಿದುಳಿದ ಜರಡಿ ಹಿಡಿದ ಹಳೆಯ ಸ್ನೆಹಿತರೇ ಬಂಧುಗಳಾಗುತ್ತಾರೆ.ಕೆಲಸದ ಒತ್ತಡವಿದ್ದಾಗ,, ಆರ್ಥಿಕ,ಆರೋಗ್ಯದ ಸಮಸ್ಯೆ ಇದ್ದಾಗ ಇಂತಹ ಸ್ನೇಹಿತರೇ ಆತ್ಮ ಬಂಧುಗಳಾಗುತ್ತಾರೆ.ಇನ್ನು ನಿವೃತ್ತಿ ವಯಸ್ಸಿನಲ್ಲಿ ಹೊಸ ಸ್ನೇಹಿತರ ಸಹವಾಸ ಒದಗಿಬರುವುದು ಸಾಮಾನ್ಯ. ಸಂಜೆಯ ವಾಕಿಂಗ್ ಸಮಯದಲ್ಲಿ ಸಿಗುವ ಇಳಿಸಂಜೆಯ ಸ್ನೇಹಿತರು ಲೋಕಾಭಿರಾಮ ಮಾತಾಡುತ್ತ್ತಲೇ ಮಕ್ಕಳ ವಿದ್ಯಾಭ್ಯಾಸ, ಉದ್ಯೋಗ, ಮದುವೆ,ಆರೋಗ್ಯ- ಅನಾರೋಗ್ಯದ ಬಗ್ಗೆ ವಿಚಾರ ವಿನಿಮಯ ಮಾಡುತ್ತಲೇ ಒಬ್ಬರಿಗೊಬ್ಬರು ಆತ್ಮೀಯ ಬಂಧುಗಳಾಗುತ್ತಾರೆ. ಸುಖ ಕಷ್ಟ ದಲ್ಲಿ ಭಾಗಿಯಾಗುತ್ತಾರೆ.
ಅದು ಹೆಣ್ಣಿನ ಅಥವಾ ಗಂಡಿನ ನಡುವೆ ಇರುವ ಸ್ನೇಹವೇ ಇರಲಿ ನಿಸ್ವಾರ್ಥ ಮನಸ್ಸಲ್ಲಿ ಒಳ್ಳೆಯ ಚಿಂತನೆಗಳೇ ಮನೆ ಮಾಡಿಕೊಂಡಿರುತ್ತದೆ.
ನಿಮ್ಮ ನಗುವನ್ನು ಕಾಣುವ ಸ್ನೇಹಿತ ಆ ನಗುವಿನ ಹಿಂದಿನ ನೋವನ್ನೂ ಅರಿತವನೇ ನಿಜವಾದ ಸ್ನೇಹಿತನಾಗಿರುತ್ತಾನೆ.ಭುಜದ ಮೇಲೆ ಕೈ ಹಾಕಿಕೊಂಡು ನಡೆಯುವ ಹಾದಿಯಲ್ಲಿ ಕಷ್ಟ ಬಂದಾಗ ಬೆನ್ನು ತಟ್ಟಿ ಧೈರ್ಯ ಹೇಳುವವನೂ,ಮಸಣದವರೆಗೂ ಭುಜಕೊಡುವವನೂ ಉತ್ತಮ ಸ್ನೇಹಿತನಾಗಬಲ್ಲ..
ಸಿರಿತನ ಬಡತನದ ಭೇಧವಿಲ್ಲ;
ಸ್ನೇಹದಲ್ಲಿ ಸಿರಿತನ ಬಡತನದ ಮಾತು ಬರಲಾರದು. ಶ್ರೀಮಂತನಿಗೆ ರಕ್ತ ಕೊಟ್ಟ ಬಡವನೂ ಗೆಳೆಯನಾಗಿ ಇರಬಲ್ಲ..ಬಡವನಿಗೆ ಆರ್ಥಿಕ ಸಹಾಯ ನೀಡಿದ ಶ್ರೀಮಂತನೂ ಸ್ನೇಹಿತನಾಗಬಲ್ಲ. ಜ್ಞಾನ ದ ಬೌದ್ಧಿಕ ಮಟ್ಟದ ಸಮತೋಲನದಲ್ಲೂ ಶ್ರೀಮಂತ, ಬಡವನ ನಡುವೆ ಸ್ನೇಹ ಹುಟ್ಟಬಹುದು. ಮಹಡಿಮನೆಯಲ್ಲಿರುವವನಿಗೆ ಹಳ್ಳಿಯ ಸಂಸ್ಕೃತಿಯ ಸೊಗಡನ್ನು ಇಷ್ಟ ಪಟ್ಟರೂ ಹಳ್ಳಿ ಹೈದನೂ ಸ್ನೇಹಿತನಾಗಬಲ್ಲ..ಶ್ರೀ ಕೃಷ್ಣ ನಿಗೆ ಸುಧಾಮನಂತ ಸ್ನೇಹಿತ, ದುರ್ಯೋಧನನೆಂಬ ದುಷ್ಟ ನಿಗೆ ಕರ್ಣನೆಂಬ ಸಾತ್ವಿಕನೂ ಸ್ನೇಹಿತನಾಗುತ್ತಾನೆ.
ಮೋಸಹೋಗದ ಗೆಳೆತನವಿರಲಿ;
ಆದರೆ ನೈತಿಕತೆಯಿಲ್ಲದ ಗೆಳೆತನವೂ ನಮ್ಮ ನಡುವೆ ಸುಳಿದು ಹೋಗಿಬಿಡುತ್ತದೆ. ಸ್ನೇಹದ ಹೆಸರಿನಲ್ಲಿ ಮೋಸ ವಂಚನೆ ಮಾಡುವ ಜನರಿದ್ದಾರೆ. ತಮ್ಮ ಸ್ವಾರ್ಥ ಕ್ಕಾಗಿ ಬಯಸುವ ಗೆಳೆತನ ಯಾವತ್ತೂ ಕ್ಷಣಿಕ. ಫೇಸ್‌ಬುಕ್ ನಂತಹ ಸಾಮಾಜಿಕ ಜಾಲತಾಣದಲ್ಲಿ ಇಂತಹ ಮೋಸ ನಡೆಯುತ್ತದೆ. ಅಲ್ಲದೆ ಯಾವುದೋ ಉದ್ದೇಶದಿಂದ ಆಪ್ತರಾಗಿ ಉದ್ದೇಶಿತ ಕೆಲಸ ಮುಗಿದ ಬಳಿಕ ನಿಧಾನವಾಗಿ ದೂರವಾಗುವ ಸ್ನೇಹವೂ ಇರುತ್ತದೆ. ಮೊದ ಮೊದಲು ಇದ್ದ ಆತ್ಮೀಯತೆ, ಸ್ನೇಹ ಹೊಂದಿರುವವರು ಬರಬರುತ್ತಾ ಅಪರೂಪವಾಗಿ ಬಿಡುತ್ತಾರೆ. ಅದೇ ಆಪ್ತತೆಯನ್ನು ಇಟ್ಟುಕೊಂಡಿರುವವರು ತುಂಬಾ ನೋವನ್ನು ಅನುಭವಿಸುತ್ತಾರೆ.ಆದರೆ ಕೆಲವರು ಸ್ನೇಹ,ಸಂಬಂಧ ಅಂತ ನಿರ್ಲಿಪ್ತರಾಗಿ ನಿರಾಳರಾಗಿರುತ್ತಾರೆ.ಆದರೆ ಒಮ್ಮೆ ಸ್ನೇಹ ಸಂಪಾದಿಸಿ ಕೈ ಕೊಟ್ಟರೆ ಆತ್ಮ ವಂಚನೆ ಮಾಡಿದಂತೆ. ಗೌರವಿಸಿಕೊಂಡು ಪಡೆದ ಸ್ನೇಹ ಮನಸ್ಸಿನಲ್ಲಿ ಅದ್ದಿದ ನವಿರಾದ ಭಾವ.ಅದಕ್ಕೂ ನೋವು,ನಲಿವಿನ ಚೇತನವಿರುತ್ತದೆ. ಆತ್ಮದೊಂದಿಗಿನ ಅನುಸಂಧಾನವಿದೆ. ದೋಸ್ತಿ ಎನ್ನುವ ಆಸ್ತಿಗೆ ಯಾವತ್ತೂ ಬೆಲೆಕಟ್ಟಲಾಗದು.ಮೋಸ ಹೋಗದ ಗೆಳೆತನವಿರಲಿ.ಸ್ನೇಹದ ಅನ್ಯೋನ್ಯತೆ ಯ ಮಹತ್ವವನ್ನು ಕವಿ ಹೀಗೆ ವರ್ಣಿಸಿದ್ದಾರೆ.
ಓಡುವ ನದಿಗೂ ಮೋಡದ ಸ್ನೇಹ/
ಅರಳುವ ಹೂವಿಗೂ ಕಿರಣದ ಸ್ನೇಹ/
ಬಂಗಾರದ ಶಶಿಗೆ ಸಾಗರದ ಸ್ನೇಹ/
ಒಲವು ನಲಿವು ಸ್ನೇಹದ ಚೆಲುವು/
ಸ್ನೇಹ ಅತಿಮಧುರ/ ಸ್ನೇಹ ಅದು ಅಮರ//.
ಉಮೇಶ್ ಆಚಾರ್ಯ, ಉಡುಪಿ