ಹಿರಿಯಡಕ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಅಂಜಾರು ಪೊಲೀಸ್ ಕ್ವಾಟ್ರರ್ಸ್ ಬಳಿಯ ನಿವಾಸಿ ಪ್ರಥಮೇಶ್ (17) ಶಾಲಾ ಬ್ಯಾಗ್ ಸಹಿತ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈತನ ಸಾವಿಗೆ ಮೊಬೈಲ್ನ ಆನ್ಲೈನ್ ಆಟದ ಟಾಸ್ಕ್ ಕಾರಣವೇ ಎಂಬ ಪ್ರಶ್ನೆ ಉದ್ಭವಿಸಿದೆ. ಆತ ಅತಿಯಾಗಿ ಮೊಬೈಲ್ ಬಳಸುತ್ತಿದ್ದು, ಪರೀಕ್ಷೆಗಳಲ್ಲಿ ಅಂಕ ಕಡಿಮೆ ಬರುತ್ತಿತ್ತು ಹಾಗೂ ಮಂಗಳವಾರದಿಂದ ಕಾಲೇಜಿನಲ್ಲಿ ಪರೀಕ್ಷೆಗಳು ಇದ್ದ ಹಿನ್ನೆಲೆಯಲ್ಲಿ ಮನೆಯವರು ಸೋಮವಾರ ಬುದ್ಧಿ ಮಾತು ಹೇಳಿ ಮೊಬೈಲ್ ತೆಗೆದಿಟ್ಟಿದ್ದರು.
ಸೋಮವಾರ ಕಾಲೇಜಿಗೆಂದು ಹೊರಟ ವಿದ್ಯಾರ್ಥಿ ಸಂಜೆ ಮರಳಿ ಮನೆಗೆ ಬಂದಿರಲಿಲ್ಲ. ಈ ಬಗ್ಗೆ ಪೋಷಕರು ಹಿರಿಯಡಕ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಮನೆಯವರು ಮತ್ತು ಸ್ಥಳೀಯರು ಹಾಗೂ ಸಹಪಾಠಿಗಳು ಎಷ್ಟು ಹುಡುಕಾಡಿದರೂ ರಾತ್ರಿಯವರೆಗೂ ಆತ ಪತ್ತೆಯಾಗಿರಲಿಲ್ಲ.
ಮಂಗಳವಾರ ಬೆಳಗ್ಗೆ ಹಿರಿಯಡಕ ಪ್ರಥಮ ದರ್ಜೆ ಕಾಲೇಜಿನ ಸಮೀಪದಲ್ಲಿರುವ ಜನವಸತಿ ರಹಿತ ಮನೆಯ ಬಾವಿಯಲ್ಲಿ ಶಾಲಾ ಬ್ಯಾಗ್ ತೇಲುತ್ತಿರುವುದು ಪತ್ತೆಯಾಗಿತ್ತು. ಇಲ್ಲಿಗೆ ಕೆಲವು ಮಕ್ಕಳು ಆಗಾಗ ಹೋಗಿ ಸಮಯ ಕಳೆಯುತ್ತಿದ್ದು, ಸಂಶಯದಲ್ಲಿ ಅಲ್ಲಿ ಹೋಗಿ ಹುಡುಕಲಾಗಿತ್ತು. ಮಾಹಿತಿ ತಿಳಿದ ತತ್ಕ್ಷಣ ಪೊಲೀಸರು ಗರುಡ ಪಾತಾಳ ಬಳಸಿ ಹುಡುಕಾಡಿದಾಗ ವಿದ್ಯಾರ್ಥಿಯ ಮೃತ ದೇಹ ಪತ್ತೆಯಾಗಿತ್ತು.