Header Ads Widget

ಪಿಪಿಸಿ ಉಡುಪಿ-ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಪರಿಚಯ ಕಾರ್ಯಕ್ರಮ


ವಿದ್ಯಾರ್ಥಿಗಳು ಸಮಾಜದ ಆಸ್ತಿ, ಆಯ್ಕೆ ಮಾಡಿಕೊಂಡ ವಿಷಯಗಳಲ್ಲಿ ಗಮನವಿಟ್ಟು ಮನಸ್ಸನ್ನು  ಕೇಂದ್ರೀಕೃತಗೊಳಿಸುವ  ನಿಟ್ಟಿನಲ್ಲಿ ಪ್ರಯತ್ನಿಸಿದರೆ ಆ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆ ಸಾಧ್ಯ. ಉತ್ತಮ ಕಾಲೇಜುಗಳ ಆಯ್ಕೆ, ಶಿಸ್ತು ಸಂಯಮ ಮುಂತಾದವುಗಳನ್ನು ಜೀವನದಲ್ಲಿ ಆರಂಭದಿಂದಲೇ ಅಳವಡಿಸಿಕೊಂಡು ರಕ್ಷಕರ ಹಾಗೂ ಕಾಲೇಜಿನ  ಕೀರ್ತಿಯನ್ನು ಶ್ರೇಷ್ಠ ಮಟ್ಟದಲ್ಲಿ ಕೊಂಡೊಯ್ಯಲು ಪ್ರಯತ್ನಿಶೀಲರಾಗಿ ಎಂದು ಪೂರ್ಣಪ್ರಜ್ಞ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ. ಚಂದ್ರಶೇಖರ್ ಜಿ. ಎಸ್ ಇವರು ವಿದ್ಯಾರ್ಥಿಗಳಿಗೆ ಕರೆಯಿತ್ತರು.

ದಿನಾಂಕ 12.08.24ರಂದು ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಘಟಕ ಹಾಗೂ ವಿದ್ಯಾರ್ಥಿ ಕ್ಷೇಮ ಪಾಲನ ಸಮಿತಿಯ ಜಂಟಿ ಆಶ್ರಯದಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪರಿಚಯ ಕಾರ್ಯಕ್ರಮವನ್ನು ಉದ್ಘಾಟಿಸಿ, ಶ್ರೀಯುತರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲರಾದ ಡಾ. ರಾಮು ಎಲ್. ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಶಿಕ್ಷಣದ ಮಹತ್ವವನ್ನು ವಿವರಿಸಿ, ಕಾಲೇಜಿನ ಚಟುವಟಿಕೆಗಳತ್ತ ಗಮನಹರಿಸಲು ವಿದ್ಯಾರ್ಥಿ ಗಳಿಗೆ ಮಾರ್ಗದರ್ಶನ ನೀಡಿದರು.

ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನ ಅಧಿಕಾರಿ ಡಾ. ರಮೇಶ್ ಟಿಎಸ್, ಹಿರಿಯ ಪ್ರಾಧ್ಯಾಪಕರು ಗಳಾದ ಡಾ ಪ್ರಕಾಶ್ ರಾವ್, ಪ್ರೊ. ಶಿವಕುಮಾರ್ ಪಿ ಟಿ, ಡಾ. ವಿಜಯಲಕ್ಷ್ಮಿಸಿ. ಭಟ್, ಆಂತರಿಕ ಗುಣಮಟ್ಟ ಖಾತರಿ ಘಟಕದ ಸಂಯೋಜಕ ಡಾ. ವಿನಯಕುಮಾರ್ ಡಿ, ಡಾ. ಮಹೇಶ್ ಭಟ್, ಸುಮಲತಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಕಾಲೇಜಿನ ಶಿಸ್ತು ಪರಿಪಾಲನೆ ಪರೀಕ್ಷಾ ನಿಯಮಗಳು ಕಾಲೇಜು ಬೆಳೆದು ಬಂದ ರೀತಿ ದೈನಂದಿನ ಚಟುವಟಿಕೆಗಳು, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಾಯಕವಾಗುವ ವಿವಿಧ ಕಾರ್ಯಕ್ರಮಗಳ ಆಯೋಜನೆ, ಗ್ರಂಥಾಲಯ ಬಳಕೆ ವಿದ್ಯಾರ್ಥಿನಿಯರು ಅನುಸರಿಸಬೇಕಾದ ನಿಯಮಗಳು ಮುಂತಾದ ವಿಷಯಗಳ ಬಗ್ಗೆ ಸವಿವರವಾಗಿ ಮಾಹಿತಿ ಕಾರ್ಯಕ್ರಮ ನಡೆಸಿಕೊಟ್ಟರು.

ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ಆದೇಶದ ಅನುಸಾರ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ವ್ಯಸನದ ವಿರುದ್ಧ ಜಾಗೃತಿ ಮೂಡಿಸುವ ಪ್ರತಿಜ್ಞಾ ವಿಧಿ ಕಾರ್ಯಕ್ರಮ ನಡೆಯಿತು.

ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಲಕ್ಷ್ಮೀಶ ರಾವ್ ಅತಿಥಿಗಳನ್ನು ಸ್ವಾಗತಿಸಿ, ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಹಾಗೂ ಕಾರ್ಯಕ್ರಮ ಸಂಯೋಜಕಿ ಶ್ರೀಮತಿ ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.