Header Ads Widget

{ ಕೃಷ್ಣಾಷ್ಟಮಿ}"ಜನಪದ"ನಾಗಿ ಬೆಳೆದ 'ಗೋವಿಂದ~ • ಕೆ.ಎಲ್.ಕುಂಡಂತಾಯ


ಕೃಷ್ಣ ನೀನ್ಯಾರು ?....ಸತ್ಯ ಹೇಳು : ಮಗುವಾಗಿದ್ದ ಕೃಷ್ಣ ಹಾಲುಣಿಸಿದ ಹೆಂಗಸು 'ಪೂತನಿ' ಎಂಬ‌ವಳನ್ನು ಹಾಲುಣ್ಣುತ್ತಾ ಆಕೆಯ ಸಾವಿಗೆ ಕಾರಣನಾದಾಗಲೇ ಮತ್ತು ಆಕೆ ಕಂಸನಿಂದ ಕಳುಹಿಸಲ್ಪಟ್ಟವಳು ಎಂದು ತಿಳಿದಾಗಲೇ ಗೋಕುಲದಲ್ಲಿ ಆತಂಕ ಉದ್ಭವವಾಗುತ್ತದೆ , ಮಗು ಕೃಷ್ಣನ ಬಗ್ಗೆ ಏನೋ ನಿರೀಕ್ಷೆಗಳು ಜಾಗೃತವಾಗುತ್ತದೆ.

ದಿನಗಳು ಕಳೆಯುತ್ತದೆ ದನಕಾಯಲು ಗೋಪರೊಂದಿಗೆ ಹೋಗುತ್ತಾ ಕಂಸನಿಂದ ಕಳುಹಲ್ಪಟ್ಟ ಶಕಟ , ಧೇನುಕ , ಪ್ರಲಂಬ , ಬಕ ಮುಂತಾದವರ ಮಾರುವೇಷಗಳ ಕೃತ್ರಿಮವನ್ನು‌ ಬೇಧಿಸಿ ಅವರನ್ಮು ಕೊಂದಾಗ ಕೃಷ್ಣನ ವ್ಯಕ್ತಿತ್ವದ ಹಿನ್ನೆಲೆಯ ಪ್ರಭಾವಳಿ‌ ಸ್ಪಷ್ಟವಾಗುತ್ತದೆ . ‍ಮುಗ್ಧ ಗೆಳೆಯ ವಿಜಯ ನೇರವಾಗಿ "ಕೃಷ್ಣ ನೀನ್ಯಾರು‌, ಸತ್ಯ ಹೇಳು " ಎಂದು ಗೋಗರೆಯುತ್ತಾನೆ .

'ನೀನು ಏನೆಂದು , ಹೇಗೆಂದು ಭಾವಿಸುವೆಯೋ ಅದು ನಾನು' ಎನ್ನುವ ಉತ್ತರವನ್ನು ಕೊಡುತ್ತಾನೆ ಕೃಷ್ಣ .ಗೋಕುಲವು
ವಿಮೋಚಕನೊಬ್ಬನ ಬರುವಿಕೆಯನ್ನು ಕಾಯುತ್ತಿತ್ತು ಆ ಮಹನೀಯ ಇವನೇ ಎಂದು ನಿರ್ಧರಿಸಿಬಿಡುತ್ತದೆ .ಋಷಿಗಳ ಧೈರ್ಯೋಕ್ತಿ ಫಲಿಸಿದೆ ಎಂದು ಸಂತೋಷಪಡುತ್ತದೆ ಗೋಕುಲ. ಮತ್ತೆ ಮಣ್ಣಿನ ರಮಣೀಯತೆ ಪಲ್ಲವಿಸುತ್ತದೆ ಅದು 'ರಾಧೆ'ಯಾಗಿ ಕಂಗೊಳಿಸುತ್ತದೆ .'ರಾಧೆ - ಕೃಷ್ಣ' ಇವರ ಪ್ರೀತಿಯ ವಸಂತ ಸನ್ನಿಹಿತವಾಗುತ್ತದೆ.

• ಗೋವರ್ಧನೋತ್ವಕ್ಕೆ ಸಿದ್ಧತೆ : ಗೋಪರ ಗೋವುಗಳಿಗೂ ,ಗೋಪರಿಗೂ ತನ್ನ ವಿಷಜ್ವಾಲೆಯಿಂದ ಹಿಂಸಿಸುತ್ತಿದ್ದ ಕಾಲಿಯ ( ಕಾಳಿಯ) ಎಂಬ ಘೋರ ಸರ್ಪ ತನ್ನವರೊಂದಿಗೆ ಗೋಕುಲದ ಬಳಿ ಮಡು ಒಂದರಲ್ಲಿ ವಾಸವಾಗಿದ್ದ .ಗೋಪಾಲಕರ ದೂರಿನ ನ್ವಯ ಕಾಲಿಯನಿದ್ದ ವಿಷದ ಮಡುವಿಗೆ ಹಾರಿ ಕಾಲಿಯನನ್ನು ಹಾಗೂ ಅವನ ಪರಿವಾರವನ್ನು ಬಡಿದೆಬ್ಬಿಸುವ ಕೃಷ್ಣ ಬಹಳ ಚಾಕಚಾಕ್ಯತೆಯಿಂದ ಕಾಲಿಯನನ್ನು ಮಣಿಸುತ್ತಾನೆ , ಸಹಜವಾಗಿ ಅವನ ಪರಿವಾರವು ಶರಣಾಯಿತು.

ಕಾಲಿಯ ಮರ್ದನನಾದ ರಾಧೆಯ ಪ್ರಿಯನಾದ 'ಕನ್ನ'. ‌ಕೃಷ್ಣನ ಗಮನ ಸೆಳೆಯುತ್ತಿದ್ದದ್ದು ಗೋಕುಲದ ಗೋವರ್ಧನ ಪರ್ವತ. ದನಗಳೊಂದಿಗೆ ಹುಲ್ಲುಗಾವಲಿಗೆ ಪ್ರತಿನಿತ್ಯ ಹೋಗುತ್ತಿದ್ದ ಕೃಷ್ಣ ಬಹಳ ಸೂಕ್ಷ್ಮವಾಗಿ ಪರ್ವತವನ್ನು ನೋಡುತ್ತಿದ್ದ , ಅದರ ಉಪಯೋಗವನ್ನು ಗ್ರಹಿಸಿದ .ಗೋಕುಲದಲ್ಲಿ ಮಳೆಬರಲು ಈ ಪರ್ವತವು ಮೋಡಗಳನ್ನು ತಡೆದು ನಿಲ್ಲಿಸುವುದೇ ಕಾರಣ ಎಂದು ತಿಳಿದ. ಪ್ರತಿ ವರ್ಷದಂತೆ ಇಂದ್ರೋತ್ಸವಕ್ಕೆ ಸಿದ್ಧತೆಗಳಾಗುತ್ತಿತ್ತು . ಆದರೆ ಕೃಷ್ಣನ ಬಳಗ ಈ ವರ್ಷ 'ಇಂದ್ರೋತ್ಸವ' ಬೇಡ 'ಗೋವರ್ಧನೋತ್ಸವ' ಮಾಡೋಣ ಎಂದು ನಿರ್ಧರಿಸಿತು .ಹಿರಿಯರಿಂದ ಆಕ್ಷೇಪಗಳಿದ್ದರೂ ಕೊನೆಗೆ ಕೃಷ್ಣನ ಮಾತೆ ಅಂತಿಮವಾಯಿತು .

ಇಂದ್ರೋತ್ಸವದ ಬದಲು ಗೋವರ್ಧನ್ಸೋತ್ಸವ ಸಂಭ್ರಮದಿಂದ ಆಚರಿಸಲ್ಪಡುತ್ತದೆ .ಕೃಷ್ಣನ ನೇತೃತ್ವ ಕಾರಣವಾಗಿ ಆಚರಣೆಗೆ ವಿಶೇಷ ಮೆರಗು . ವಿಷಯ ತಿಳಿದ ಇಂದ್ರ ಕುಪಿತನಾದ , ಗೋಕುಲದ ಮೇಲೆ ಏಳು ದಿನಗಳ ಕಾಲ ಧಾರಾಕಾರ ಮಳೆ ಸುರಿಸಿದ. ಗೋಕುಲ ಜಲಾವೃತವಾಯಿತು . ದನ ಕರುಗಳು , ಗೋಪರ ವಾಸ್ತವ್ಯಗಳು ನೀರಿನಲ್ಲಿ ಮುಳುಗುವ ಆತಂಕ ಎದುರಾಯಿತು .

ಇದನ್ನು ಕಂಡ ಕೃಷ್ಣ ನೇರವಾಗಿ ತಾನು ಪ್ರತಿನಿತ್ಯ ಗಮನಿಸುತ್ತಿದ್ದ ಗೋವರ್ಧನ ಪರ್ವತದೆಡೆಗೆ ಓಡಿದ , ಪರ್ವತದ ಒಳಭಾಗದಲ್ಲಿದ್ದ ಅವಕಾಶವನ್ನು ತೆರೆಯಲು ಸುತ್ತುಮುತ್ತಲು ಇದ್ದ ಗಿಡಗಳನ್ನು ,ಕಲ್ಲುಗಳನ್ನು‌ ಗೋಪರ ಸಹಾಯದಿಂದ ತೆರವುಗೊಳಿಸಿದ , ಗೋಪಿಯರ ಸಹಿತ ಗೋಪಬಾಲಕರೂ ಕೈ ಜೋಡಿಸಿದರು.ವಿಶಾಲವಾದ ಅವಕಾಶ ಗೋಚರಿಸಿತು ,ಸಂತಸಪಟ್ಟ ಕೃಷ್ಣ ,ಅವನ ನಿರೀಕ್ಷೆ ಹುಸಿಯಾಗಲಿಲ್ಲ . ಗೋಕುಲದ ಗೋವುಗಳು ,ಗೋಪರು ,ಗೋಪಿಯರು ,
ಗೋಪಬಾಲರೆಲ್ಲ ಈ ಅವಕಾಶದಲ್ಲಿ ಆಶ್ರಯಪಡೆದರು.‌

ಬುಡದಲ್ಲಿದ್ದ ಆಧಾರ ಕಡಿಮೆಯಾಗಿ ಎಲ್ಲಿ ಪರ್ವತವೇ ಕುಸಿಯುತ್ತದೊ‌ ಎಂಬ ಸಂಶಯದಿಂದ ಕೃಷ್ಣ ತನ್ನ ಕೈಯ ಆಧಾರ ಒದಗಿಸಿದ ಪ್ರಕೃತಿಯಲ್ಲೆ ಇದ್ದ ಅವಕಾಶವನ್ನು ಉಪಯೋಗಿಸಿಕೊಂಡ. ಮಳೆ ನಿಂತಿತು ಗೋಪಾಲರೆಲ್ಲರೂ ಮರಳಿ ತಮ್ಮ ಮನೆಗಳಿಗೆ ಹಿಂದಿರುಗಿದರು. ಗೋವರ್ಧನೋತ್ಸವದಿಂದ ಸಂಭವಿಸಿದ ಇಂದ್ರನ ಮುನಿಸಿಗೆ ಉತ್ತರ ನೀಡಿದ ಯಶಸ್ಸಿಗೆ ಸಂಭ್ರಮಾಚರಣೆಯೋ ಎಂಬಂತೆ ಮರುದಿನ ಕೃಷ್ಣನನ್ನು ಹೊಗಳುತ್ತಾ "ಗೋವಿಂದ" ಎಂದು ಹೆಸರಿಟ್ಟು ಹಾಡಿದರು ಗೋಪಿಯರು.
ಗೋವರ್ಧನ ಪರ್ವತವನ್ನು ಕಿರುಬೆರಳಿನಿಂದ ಎತ್ತಿ ಗೋವುಗಳನ್ನು ,ಗೋಪಾಲರನ್ನು ರಕ್ಷಿಸಿದ ಕೀರ್ತಿ ಜನಜನಿತವಾಯಿತು.

ಹೀಗೆ ಸಾಹಸಗಳ ಸರಣಿಯನ್ನೇ ನಡೆಸಿ ಗೋಕುಲದಲ್ಲಿ ಸಂಚಲನ ಸೃಷ್ಟಿಸಿದ ಕೃಷ್ಣ ಜನನ ಬಹು ನಿರೀಕ್ಷಿತವಾಗಿತ್ತು.ಹೆತ್ತತಾಯಿ ದೇವಕಿಗೆ ‘ಘನಶ್ಯಾಮ’ನಾಗಿ, ಸಾಕಿದ ಅಮ್ಮನಿಗೆ ಕೃಷ್ಣನಾಗಿ, ಗೋಪಾಲಕರ ಸಂದೋಹಕ್ಕೆ ಗೋವಿಂದನಾಗಿ, ರಾಧೆಗೆ ‘ಕನ್ನ’ನಾಗಿ ಬೆಳೆದ ಈ ತುಂಟ ಜನಾಂಗವೊಂದರ ಉದ್ಧಾರಕನಾಗಿ ಅವರಿಗೆ ಜನಪ್ರಮೋದವನ್ನು ಉಂಟು ಮಾಡಿದ್ದು ಮಾತ್ರವಲ್ಲ ಮನುಕುಲದ ಪ್ರಿಯಬಂಧುವಾಗಿ ಲಾಲಿತ್ಯ-ಲಾವಣ್ಯಗಳ ಆಕರ್ಷಕ ವ್ಯಕ್ತಿತ್ವದಿಂದ ಜಗತ್ತನ್ನು ಗೆಲ್ಲುತ್ತಾನೆ.

ಗೀತಾಚಾರ್ಯನಾಗಿ ಮಾನವ ಜೀವನ ವಿಧಾನದ ಮೌಲ್ಯವನ್ನು ಸಾರುತ್ತಾನೆ. ಭಾರತೀಯರೆಲ್ಲರ ಆರಾಧ್ಯನಾಗುತ್ತಾನೆ. ಇಂತಹ
ಮೋಹಕ ಮಹಿಮಾತಿಶಯದ ವಿಸ್ಮಯ ಪುರುಷ ಕೃಷ್ಣನ ಬದುಕು ಅದ್ಭುತವೆನಿಸಿದಾಗ, ಅಗಾಧ ಹರವನ್ನು ಪಡೆದುಕೊಂಡಾಗ, ಲೋಕ ಕ್ಷೇಮಾರ್ಥಕ್ಕೆ ತೊಡಗಿಕೊಂಡಾಗ ಸಹಜವೆಂಬಂತೆ ಸಜ್ಜನರು ಉದ್ಗರಿಸಿದ್ದು ‘ಕೃಷ್ಣಾವತಾರ ಪರಿಪೂರ್ಣ ಅವತಾರ’ ವೆಂದು.ಈ ಪರಿಪೂರ್ಣತೆಯು ಒಂದು ಸಾಧನೆಯಾಗಿ, ಜಗನ್ಮೋಹಕವಾಗಿ ಪಲ್ಲವಿಸಿದ್ದು ಜನಸಾಮಾನ್ಯತೆಯ ಮುಗ್ಧ ಮನಸ್ಸುಗಳೊಂದಿಗೆ- ಜನಪದರ ಸಾಂಗತ್ಯದಲ್ಲಿ, ಬಹುಶಃ ಪರಿಪೂರ್ಣತೆಯು ಪರಾಕಾಷ್ಠೆಯನ್ನು ತಲುಪಲು ‘ದೇಸಿ’ ಪರಿಸರವೇ ಪೂರಕವಾಗುತ್ತದೆ.

ಆ ಮನೋಧರ್ಮದ ವ್ಯಕ್ತಿತ್ವವೇ ಕೃಷ್ಣವಾಗಿ ಆಕರ್ಷಿಸಲ್ಪಡುತ್ತದೆ. ‘ಜಗನ್ನಾಥ’ ಎಂಬಲ್ಲಿಗೆ ಏರಿಬಿಡುತ್ತದೆ. ಕೃಷ್ಣ ಬೆಳೆದದ್ದು, ಆಟವಾಡಿದ್ದು, ಅಪೂರ್ವ ಸಾಧನೆಗಳನ್ನೂ ಮಾಡಿದ್ದು ಆ ಮೂಲಕ ಜನಜನಿತನಾಗಿ ಜಗದೋದ್ಧಾರನೆನ್ನಿಸಿದ್ದು ಗೋಪಾಲಕರ ನಡುವೆ-ಗೋ ಸಮೂಹದ ಸನ್ನಿಧಿಯಲ್ಲಿ, ನುಡಿಸಿದ್ದು ಬಿದಿರಿನ ಓಟೆಯನ್ನು, ಧರಿಸಿದ್ದು ನವಿಲುಗರಿಯನ್ನು. ಬಿದಿರ ಓಟೆ ಮುರಲಿಯಾಗಿ ಉಲಿದಾಗ ಆ ಅನುರಣನ ಅಥವಾ ಸುಶ್ರಾವ್ಯ ನಾದ ಸಮ್ಮೋಹನವಾಯಿತು. ಗೋವುಗಳು-ಗೋಪಾಲಕರು-ಗೋಪಿಯರು ಮಂತ್ರ ಮುಗ್ಧರಾದರು. ಕೃಷ್ಣಾನುವರ್ತಿಗಳಾದರು.

ಈ ಸಮ್ಮೋಹನ ಸಾಮರ್ಥ್ಯಕ್ಕೆ ಕೂಡಿಕೊಂಡದ್ದು ಜಾಣ್ಮೆ, ಚಾಣಾಕ್ಷತೆ, ದೃಢವಾದ ಧೀ ಶಕ್ತಿ, ಅತಿಶಯ, ಆತ್ಮವಿಶ್ವಾಸ. ಇವುಗಳೇ ಕಾರಣವಾಗಿ ಕೃಷ್ಣ ಯುಗಾಂತದಲ್ಲಿ ಪೂರ್ಣಪುರುಷನಾಗಿ ವಿಜೃಂಭಿಸಿದ. ಆದರೂ ತಾನು ‘ಜನಪದ’ನಾಗಿಯೇ ಉಳಿದ. ಜನ ಸಾಮಾನ್ಯನಿಗೆ ಸುಲಭವಾಗಿ ಬೆಂಬಲಿಸಿದ, ಅಗತ್ಯಗಳನ್ನು ಪೂರೈಸುತ್ತಾ ರಕ್ಷಣೆ ನೀಡಿದ. ಈ ಕಾರ್ಯ ಧರ್ಮರಕ್ಷಣೆಯಾಯಿತು. ಕೃಷ್ಣ ಧರ್ಮ ಸಂಸ್ಥಾಪಕನಾದ.

ಜನ ಸಮೂಹ ಬಯಸುವ ಸುಖದ ಜೀವನಕ್ಕೆ ದುಡಿಮೆಯೇ ಆಧಾರವೆಂಬ ಸೂತ್ರವನ್ನು ಪ್ರಚುರ ಪಡಿಸಿದ. ಕ್ಷತ್ರಿಯರಿಗೆ ಯುದ್ಧವೇ ಪರಮ ಗುರಿ ಎಂಬುದನ್ನು ಬೋಧಿಸಿದ. ಧರ್ಮ-ಅಧರ್ಮ, ಕರ್ಮ-ಅಕರ್ಮಗಳ ವಿವರ-ವಿಸ್ತಾರವನ್ನು ಲೋಕಧರ್ಮಿಯಾಗಿ ಪ್ರತಿಪಾದಿಸಿ ಹಸ್ತಿನಾವತಿಯಲ್ಲಿ ಧರ್ಮರಾಯನನ್ನು ಚಕ್ರವರ್ತಿ ಎಂದು ಸ್ಥಿರವಾಗಿ ನೆಲೆಗೊಳಿಸಿದ. ಆದರೆ ತಾನು ಮಾತ್ರ ಯಾವ ಅಧಿಕಾರವನ್ನಾಗಲಿ, ಸ್ಥಾನಮಾನವನ್ನು ಪಡೆಯದೆ ಅಸಾಮಾನ್ಯ ಹಂತವನ್ನು ಏರಿ ಜಗದ್ವಂದ್ಯನಾದ.

ಆ ಕಾಲಕ್ಕೆ ನಾಗರಿಕತೆಯ ಪಾಠ ಅಗತ್ಯವಿದ್ದುದು ಗೋಪಾಲಕರಿಗೆ. ಅದೇ ಆತನ ಬಾಲ್ಯದ ಕಾಯಕವಾಯಿತು. ವಿಮೋಚನೆಯಿಂದ ರಕ್ಷಣೆಯನ್ನು ಕೊಡುತ್ತಾ ಸದೃಢ ‘ಯಾದವ ಸ್ತೋಮ’ವನ್ನು ರಚಿಸಲು ಕೃಷ್ಣ ಕಷ್ಟಪಟ್ಟ. ಆ ಮೂಲಕ ಭರತ ವರ್ಷದುದ್ದಕ್ಕೂ ಒಂದು ಆದರ್ಶವನ್ನು ಸಾರಿದ. ಆರ್ಥಿಕ ಸಬಲತೆ ನಾಗರಿಕತೆಯ ಸ್ಥಿರೀಕರಣಕ್ಕೆ ಹಾಗೂ ಮುಂದುವರಿಕೆಗೆ ಹೇತುವೆಂಬುದನ್ನು ಅರಿತ ಕೃಷ್ಣ ಹೈನುಗಾರಿಕೆಯಂತಹ ಗೋಪರಿಪಾಲನೆ, ಗವ್ಯಗಳ ವಿನಿಮಯದಿಂದ ಅಗತ್ಯಗಳನ್ನು ಪೂರೈಸಿಕೊಳ್ಳುವ ವಿಧಾನವನ್ನು ಅನುಷ್ಠಾನಕ್ಕೆ ತಂದ.

ಅಣ್ಣ ಬಲರಾಮ ಕೃಷಿಯಿಂದ ಸುಭಿಕ್ಷೆ ಎಂದ. ಸಾಂಕೇತಿಕವಾಗಿ ಹಲಧರನಾದ. ಕೃಷ್ಣನಿಗೆ ಮುರಲಿಯಾದರೆ, ರಾಮನಿಗೆ ಹಲಮುಸಲಗಳು ಭೂಷಣವಾದುವು. ವಿಫುಲವಾದ ಗೋ ಸಂಪತ್ತು-ಅಕ್ಷಯ ಕೃಷಿ ಲಾಭಗಳು ಗೋಪಾಲಕರ ಉತ್ಕರ್ಷಕ್ಕೆ ಕಾರಣವಾದುವು. ಇದೇ ಮುಂದೆ ಭರತ ವರ್ಷದಲ್ಲಿ ಸ್ಥಾಯಿಯಾಯಿತು. ಸನಾತನವಾಗಿದ್ದ ಹೈನುಗಾರಿಕೆ ಮತ್ತು ಕೃಷಿ ಮರಳಿ ನೆಲೆಯಾಯಿತು.

ಕೃಷ್ಣ-ರಾಮರಿಬ್ಬರೂ ಗೋಸಂಪತ್ತು ಮತ್ತು ಕೃಷಿ ಸಂಸ್ಕೃತಿಯನ್ನು ಪ್ರೋತ್ಸಾಹಿಸಿದವರು. ಸಾಧಿಸಿ ತೋರಿಸಿದವರು. ಇದು ಮಣ್ಣಿನೊಂದಿಗಿನ ಹೋರಾಟ ಸಂಬಂಧ.ಶುದ್ಧ ಜನಪದೀಯವಾದುದು. ಇದು ರಾಮ-ಕೃಷ್ಣರಿಬ್ಬರ ವ್ಯಕ್ತಿತ್ವದ ಒಂದು ಆಯಾಮವಲ್ಲ. ಸಮಗ್ರ ಸ್ವರೂಪ.

ಸ್ವಾರ್ಥ ರಹಿತ ಬದುಕು ಕಷ್ಟ ಸಾಧ್ಯ. ಅರ್ಪಣಾ ಭಾವ ಒಂದು ತ್ಯಾಗ. ಸಾಧನೆಯ ಸಿದ್ಧಿ ಪ್ರಯತ್ನಕ್ಕೆ ಲಭಿಸುವ ಫಲ. ಪುರಾತನವಾದ ವ್ಯವಸ್ಥೆಯನ್ನೂ ಪುನರ್ ಸ್ಥಾಪಿಸುವುದು ಸಾಹಸ. ಎಲ್ಲವೂ ಇದ್ದಾಗ ಏನೂ ಬೇಡವೆಂಬ ಭಾವ ಮೂಡುವುದು ನಿರ್ಲಿಪ್ತತೆ. ಲೋಕ ದೃಷ್ಟಿ ಉದ್ಧಾರಕನ ಮನೋಧರ್ಮ. ಮತ್ತೆ ಮಣ್ಣಿನ ಗಂಧಕ್ಕಾಗಿ ಹಾ ತೊರೆಯುತ್ತಾ ಸರಳ, ಮುಗ್ಧ ಪರಿಸರದಲ್ಲಿ ಬದುಕುವುದು ಮಣ್ಣಿನೊಂದಿಗಿನ ಅವಿನಾಭಾವ ಸಂಬಂಧ. ಹೀಗೆ ಸಾಗಿತು ಕೃಷ್ಣನ ಜೀವನ. ಲೋಕಕ್ಕೆ ಆಯಿತು ಕ್ಷೇಮ.

| ವಸುದೈವ ಕುಟುಂಬಕನಾದ ವಾಸುದೇವ| * ವಸುದೇವನ ಮಗನಾಗಿ ಕೃಷ್ಣ ವಾಸುದೇವನಾದ ಎನ್ನುವುದಕ್ಕಿಂತಲೂ ಆತ ವಸುಧೈವ ಕುಟುಂಬಕನಾಗಿ ‘ವಾಸುದೇವ’ ಅನ್ನಿಸಿಕೊಂಡ.
* ಬಾಲ ಲೀಲಾ ವಿನೋದಗಳು ಕೇವಲ ಆಟ-ಪಾಠಗಳಾಗದೆ ‘ದರ್ಶನ’ವಾಗುವುದು ಕೃಷ್ಣನ ಬಾಲ್ಯ ಮಾತ್ರ.
* ಹೈನುಗಾರಿಕೆ - ಕೃಷಿಗಳಿಗೆ ಒತ್ತು ನೀಡಿ ಮತ್ತೆ ಜನಪ್ರಿಯತೆ ಒದಗಿಸಿಕೊಟ್ಟ ಮಹನೀಯರು ರಾಮ-ಕೃಷ್ಣರು.
* ಆ ಕಾಲದ ರಾಜಕೀಯ ಗೊಂದಲ-ಪ್ರಜಾವರ್ಗಕ್ಕೆ ಉಂಟಾದ ಆತಂಕವನ್ನು ಪರಿಹರಿಸಿದ ಮುತ್ಸದ್ದಿ ‘ಕೃಷ್ಣ’.
* ‘ವಾಸುದೇವತ್ವ’ ಎಂಬುದು ದ್ವಾಪರಯುಗದ ಒಂದು ವಿಶಿಷ್ಟ ಸ್ಥಾನಮಾನ. ಇದನ್ನು ಪಡೆದವ ಕೃಷ್ಣ.
* ಹಾಲಿನ ಬಿಂದುವೊಂದು ಸಿಂಧುವಾಗಿ ಹರಿಯುವುದು ಕೃಷ್ಣ ತೋರಿದ ಪವಾಡ.
* ಲೌಕಿಕದಲ್ಲಿ ಅರಳುವ ಅಲೌಕಿಕ. ಭೌಮದ ‘ದಿವ್ಯ’.
* ಮಾನವ - ದೇವರ ನಡುವಿನ ಗೊಣಸು ಕೃಷ್ಣ.




--------