Header Ads Widget

ಕೃಷ್ಣಾಷ್ಟಮಿಗೆ ರಜೆ ನೀಡಿ~  ಪುತ್ತಿಗೆ ಶ್ರೀ

 

ಭಾರತೀಯ ಸಂಸ್ಕೃತಿಯಲ್ಲಿ ದೇವರ ಬಹುರೂಪದ ಆರಾಧನೆಯನ್ನು ಹೇಳಿದೆಯಾದರೂ ಪೂರ್ಣಾವತಾರಿಯಾದ ಶ್ರೀಕೃಷ್ಣನ ಆರಾಧನೆಯಿಂದ ಸಕಲ ಇಷ್ಟಾರ್ಥ ಪ್ರಾಪ್ತಿಯಾಗುತ್ತದೆ ಎಂದು ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.

ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಪರ್ಯಾಯ ಪುತ್ತಿಗೆ ಮಠ ಆಶ್ರಯದಲ್ಲಿ ಸೆ. 1ರ ವರೆಗೆ ಒಂದು ತಿಂಗಳ ಕಾಲ ನಡೆಯುವ ಕೃಷ್ಣ ಮಾಸೋತ್ಸವಕ್ಕೆ ಗುರುವಾರ ಚಾಲನೆ ನೀಡಲಾಗಿದ್ದು, ಅಧ್ಯಕ್ಷತೆ ವಹಿಸಿ ಮಾತನಾಡಿದರು.
 

ಶ್ರೀಕೃಷ್ಣ ಕ್ರಿಪ್ರ ಫಲದಾಯಕ. ಆತನ ಪೂಜೆಯಿಂದ ಶೀಘ್ರ ಫಲ ಪಡೆಯುವುದು ಸಾಧ್ಯ. ಈ ನಿಟ್ಟಿನಲ್ಲಿ ಆಚಾರ್ಯ ಮಧ್ವರು ಉಡುಪಿಯಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿ, ಎಲ್ಲರಿಗೂ ಕೃಷ್ಣನ ಸೇವೆಯಲ್ಲಿ ಪಾಲ್ಗೊಳ್ಳುವ ಅವಕಾಶ ಕಲ್ಪಿಸಿದ್ದಾರೆ. ಕೃಷ್ಣನ ಜನ್ಮೋತ್ಸವವನ್ನು ಸಂಭ್ರಮ ದಿಂದ ಆಚರಿಸುವ ಮೂಲಕ ಜನ್ಮ ಸಾರ್ಥಕ ಪಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಜನ್ಮಾಷ್ಟಮಿಯನ್ನು ಆಚರಿಸಲು ಸಂಕಲ್ಪಿಸಿರುವುದಾಗಿ ತಿಳಿಸಿದರು.

ಗುರುವಿನ ಮೂಲಕ ದೇವರ ದರ್ಶನ ಸಾಧ್ಯ. ಹಾಗಾಗಿ ತಮ್ಮ ಗುರುಗಳಾದ ಶ್ರೀ ಸುಜ್ಞಾನೇಂದ್ರತೀರ್ಥ ಶ್ರೀಪಾದರ ಆರಾಧನೆಯ ದಿನದಂದು ಕಾರ್ಯಕ್ರಮ ಆರಂಭಿಸಿರುವುದಾಗಿ ಪುತ್ತಿಗೆ ಶ್ರೀಗಳು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಕಷ್ಟ ಬಂದಾಗ ಕೃಷ್ಣನನ್ನು ಸ್ಮರಿಸಿ, ಆತನಿಗೆ ನಮಸ್ಕರಿಸುವುದರಿಂದ ಪರಿಹಾರ ಸಾಧ್ಯ. ಭಾಗವತ ಮತ್ತು ಮಹಾಭಾರತದಲ್ಲಿ ಕೃಷ್ಣನನ್ನು ಚಿತ್ರಿಸಲಾಗಿದೆ. ಸಂಸ್ಕೃತಿ, ಸಂಸ್ಕಾರ ಗಳ ಮೇಲೆ ಆಘಾತವಾದಾಗ ಅತಿವೃಷ್ಟಿ, ಅನಾವೃಷ್ಟಿಗಳು ಸಂಭವಿಸುತ್ತವೆ ಎಂದರು.

ಸಾನ್ನಿಧ್ಯ ವಹಿಸಿದ್ದ ಭಂಡಾರಕೇರಿ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು, ದೇವರನ್ನು ಅರಿತು ಆತನನ್ನು ಪ್ರೀತಿಸುವುದೇ ಭಕ್ತಿ. ಅದಕ್ಕೆ ಶುದ್ಧ ಮನಸ್ಸು ಅಗತ್ಯ ಎಂದರು. ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು, ಗುರು ಮುಖೇನ ದೇವರನ್ನು ಕಾಣಬಹುದು ಎಂದರು.

ಅಭ್ಯಾಗತರಾಗಿದ್ದ ಶಿಕ್ಷಣ ತಜ್ಞ ಪ್ರೊ. ಕೆ.ಇ. ರಾಧಾಕೃಷ್ಣ ಬೆಂಗಳೂರು ಅವರು ಪುತ್ತಿಗೆ ಶ್ರೀಪಾದರನ್ನು ವಿಶ್ವ ಮಾನುಷರು ಎಂದು ಬಣ್ಣಿಸಿ, ಶ್ರೀಪಾದರು ಭಾರತದಾಚೆಗೂ ಕೃಷ್ಣ ಭಕ್ತಿ ಮತ್ತು ತತ್ವ ಪ್ರಸಾರ ಮಾಡಿದ್ದಾರೆ ಎಂದರು.

ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್, ಮಾಜಿ ಶಾಸಕರಾದ ರಘುಪತಿ ಭಟ್ ಮತ್ತು ಲಾಲಾಜಿ ಮೆಂಡನ್, ವಕೀಲ ಪ್ರದೀಪ ಕುಮಾರ್, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ನೇಕಾರರ ಸಂಘದ ಅಧ್ಯಕ್ಷ ರತ್ನಾಕರ ಇಂದ್ರಾಳಿ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯೋಗೀಶ ಶೆಟ್ಟಿ, ಉದ್ಯಮಿ ಸಂತೋಷ ಶೆಟ್ಟಿ, ಶ್ರೀಮಠದ ದಿವಾನ ನಾಗರಾಜ ಆಚಾರ್ಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ಮೊದಲಾದವರಿದ್ದರು. ರವೀಂದ್ರ ಆಚಾರ್ಯ ಮತ್ತು ರಮೇಶ ಭಟ್ ಸಹಕರಿಸಿದರು. ವಿದ್ವಾನ್ ಗೋಪಾಲಾಚಾರ್ ಸ್ವಾಗತಿಸಿ, ನಿರೂಪಿಸಿದರು.

ಈ ಸಂದರ್ಭದಲ್ಲಿ ಶ್ರೀಕೃಷ್ಣ ಮತ್ತು ಗೀತೆಗೆ ಸಂಬಂಧಿಸಿ ಆಯೋಜಿಸಲಾಗಿರುವ ಆನ್ ಲೈನ್ ರಸಪ್ರಶ್ನೆಗೆ ಚಾಲನೆ ನೀಡಲಾಯಿತು. ವಾದಿರಾಜ ಚೊಕ್ಕಾಡಿ ಮತ್ತು ಪ್ರಮೋದ್ ಸಾಗರ್ ಸಹಕರಿಸಿದರು. ಬಳಿಕ ಸಂಗೀತ ಕಟ್ಟಿ ಕುಲಕರ್ಣಿ ಅವರಿಂದ ಭಕ್ತಿಗೀತೆ ನಡೆಯಿತು.

ಶ್ರೀಕೃಷ್ಣಾಷ್ಟಮಿಗೆ ಸಾರ್ವತ್ರಿಕ ರಜೆ ನೀಡುವಂತೆ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಆಗ್ರ ಹಿಸಿದರು. ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಕೃಷ್ಣಲೀಲೋತ್ಸವ ಮೂಲಕ ಎರಡು ದಿನ ಆಚರಿಸಲಾಗುತ್ತದೆ. ಹಾಗಾಗಿ ಎರಡು ದಿನ, ಅಸಾಧ್ಯವಾದರೆ ಒಂದು ದಿನವಾದರೂ ರಜೆ ನೀಡುವಂತೆ ಶ್ರೀಗಳು ಒತ್ತಾಯಿಸಿದ್ದಾರೆ.