ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆಸಿರುವ ಅನೇಕ ಆಘಾತಗಳಿಗೆ ಒಳಗಾಗಿರುವ ಕಾಶ್ಮೀರಿ ಪಂಡಿತರ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ತಮ್ಮ ಪಾರಂಪರಿಕ ವೈದಿಕ ಸಂಸ್ಕಾರಗಳಿಂದ ವಂಚಿತರಾಗಿದ್ದಾರೆ. ಗತಕಾಲದ ವೈಭವವನ್ನು ಮರಳಿ ಪಡೆಯಲು ಉತ್ಸುಕರಾದ ಪಂಡಿತರ ಪ್ರತಿ ಮನೆಯಲ್ಲೂ ಭಗವದ್ಗೀತಾ -ವೇದ-ಸಂಸ್ಕೃತಾಧ್ಯಯನ ನಡೆಯಬೇಕು. ಇದರಿಂದ ಮಾತ್ರ ಪಾರಂಪರಿಕ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಾದ್ಯ ಎಂದು ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನ ದ ನಿರ್ದೇಶಕರಾದ ಡಾ. ಬಿ. ಗೋಪಾಲಾಚಾರ್ಯರು ಕರೆ ನೀಡಿದರು.
ಅವರು ಜಮ್ಮು ನಿವಾಸಿಗಳಾದ ಕಾಶ್ಮೀರಿ ಪಂಡಿತ ಮಂಡಳಿಯ ಅಪೇಕ್ಷೆ ಹಾಗೂ ಆಹ್ವಾನದಂತೆ ಪರ್ಯಾಯ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥಶ್ರೀಪಾದರ ಹಾಗೂ ಕಿರಿಯ ಪಟ್ಟದ ಪರಮಪೂಜ್ಯ ಶ್ರೀ ಶ್ರೀ ಸುಶ್ರೀಂದ್ರತೀರ್ಥಶ್ರೀಪಾದಂಗಳವರ ಪರಮಾನುಗ್ರಹದಿಂದ ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನ ದ ಸಹಭಾಗಿತ್ವದಲ್ಲಿ ಸಂಸ್ಕೃತ ಮತ್ತು ವೇದ ಹಾಗೂ ಶಾರದಾ ಲಿಪಿಯ ಶಿಕ್ಷಣ ಮುಂತಾದ ಅನೇಕ ಯೋಜನೆಗಳಿಗೆ ಜಮ್ಮುವಿನಲ್ಲಿ ಚಾಲನೆಯನ್ನು ನೀಡಲಾಯಿತು. ಭಾರತ ಸರ್ಕಾರದ ಅಧೀನದಲ್ಲಿರುವ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ನೀವು ದೆಹಲಿ ಇದರ ಶಾಖಾ ಕೇಂದ್ರವಾದ ಶ್ರೀ ರಣವೀರ ಪರಿಸರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಗೋಪಾಲಾಚಾರ್ಯರು ಭಾಗವಹಿಸಿದ್ದರು.
ಒಂದು ಕಾಲದಲ್ಲಿ ರಾಜಾಶ್ರಯದಲ್ಲಿ ಅತ್ಯಂತ ವೈಭವದಿಂದ ಜೀವಿಸಿದ್ದ ನೂರಾರು ಕುಟುಂಬಗಳು ಭಯಾನಕವಾದ ಆಕ್ರಮಣದ ಕಹಿ ಘಟನೆಗಳಿಂದ ಇನ್ನೂ ಹೊರಬಂದಿಲ್ಲ. ಇತ್ತೀಚೆಗೆ 370 ರ ನಿಯಮವನ್ನು ರದ್ದುಗೊಳಿಸಿದ ದಿನದಿಂದ ಅನೇಕ ಅಭಿವೃದ್ಧಿಯ ಸಾಕಾರವನ್ನು ಬಯಸಿದ್ದಾರೆ. ಜಮ್ಮುವಿನ ಕಾಲೋನಿಯಲ್ಲಿ ಸುಮಾರು 4,200 ಕುಟುಂಬ ವಾಸಿಸುತ್ತಿದ್ದಾರೆ.
ಜಮ್ಮುವಿನಲ್ಲಿ ಸುಮಾರು 800 ಸಂಸ್ಕೃತ ವಿದ್ಯಾರ್ಥಿಗಳನ್ನು ಹೊಂದಿರುವ ಈ ಪರಿಸರದ ಮಾನ್ಯ ನಿರ್ದೇಶಕರಾದ ಪ್ರೊ. ಶ್ರೀಧರ್ ಮಿಶ್ರ ಜೀ ಅವರು ಸಭೆಯ ಅಧ್ಯಕ್ಷತೆ ವಹಿಸಿ ಜಮ್ಮುವಿನಲ್ಲಿ ನಡೆಯುವ ಸಂಸ್ಕೃತ ಆಂದೋಲನಕ್ಕೆ ಸಂಪೂರ್ಣ ಸಹಕಾರವನ್ನು ಘೋಷಿಸಿದರು.
ಸಿ.ಬಿ.ಐ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಮತ್ತು ಅತ್ಯಂತ ಪ್ರಸಿದ್ಧವಾದ ಮಾತಾ ವೈಷ್ಣೋದೇವಿ ದೇವಸ್ಥಾನ ದ ಅಧಿಕಾರಿಗಳಾದ ಮಾನ್ಯ ಸುರೇಶ್ ಕುಮಾರ್ ಶರ್ಮಾ ಜೀ ಹಾಗೂ ಅನೇಕ ಸಂಸ್ಕೃತ ಉಪನ್ಯಾಸಕರು ಹಾಗೂ ವಿದ್ವತ್ ತರಗತಿಗಳ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.