Header Ads Widget

ಶೀರೂರು ಮಠದ ಪರಿಸರದಲ್ಲಿ ಹುಲಿ ಘರ್ಜನೆ

 


ಶೀರೂರು ಮಠದ ಕೀರ್ತಿಶೇಷ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರು ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಮಹೋತ್ಸವ ಸಂದರ್ಭದಲ್ಲಿ ಆಚರಿಸಿಕೊಂಡು ಬರುತ್ತಿದ್ದ ಹುಲಿವೇಷ ಹಾಗೂ ಜಾನಪದ ನೃತ್ಯ ಕಾರ್ಯಕ್ರಮವನ್ನು ಪ್ರಸಕ್ತ ಪೀಠಾಧೀಶರಾದ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಮುಂದುವರಿಸುವ ಆಶಯ ಹೊಂದಿದ್ದು, ಆಗಸ್ಟ್ 27 ವಿಟ್ಲಪಿಂಡಿಯಂದು ರಥಬೀದಿಯ ರಾಘವೇಂದ್ರ ಮಠ ಎದುರಿನ ಅನ್ನವಿಠಲ ವೇದಿಕೆಯಲ್ಲಿ ಕಾರ್ಯಕ್ರಮ ನಡೆಸಲಾಗುವುದು ಎಂದು ಶಾಸಕ ಯಶಪಾಲ್ ಸುವರ್ಣ ತಿಳಿಸಿದರು. ಶನಿವಾರ ಸುದ್ದಿಗೋಷ್ಟಿಯಲ್ಲಿ ಕಾರ್ಯಕ್ರಮದ ವಿವರ ನೀಡಿದರು.

 
ಹುಲಿವೇಷ ಸಹಿತ ಜಾನಪದ ನೃತ್ಯಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎಲ್ಲ ಕಲಾವಿದರಿಗೆ ನೋಟಿನ ಹಾರದ ಮೂಲಕ ಸಂಭಾವನೆ ನೀಡಲಾಗುತ್ತಿದ್ದು, ಸುಮಾರು 5 ಲಕ್ಷ ರೂ. ಮೊತ್ತವನ್ನು ಈ ಸಂಭಾವನೆ ಗಾಗಿ ವೆಚ್ಚ ಮಾಡಲಾಗುವುದು. 10, 20, 50, 100 ಹಾಗೂ 200 ರೂ.ಗಳ ನೋಟಿನ ಹಾರ ಸಿದ್ಧಗೊಳಿಸಲಾಗುತ್ತಿದೆ.
 
ಶ್ರೀಕೃಷ್ಣ ಲೀಲೋತ್ಸವದ ವಿಟ್ಲಪಿಂಡಿ ಮಹೋತ್ಸವದಲ್ಲಿ ಕಲಾವಿದರು ಸೇವೆ ರೂಪದಲ್ಲಿ ಭಾಗಿಯಾಗ ಬೇಕೆಂಬುದು ಆಶಯ ಎಂದರು. ಶಿರೂರು ಮಠದ ದಿವಾನ ಉದಯಕುಮಾರ್ ಸರಳತ್ತಾಯ ಮಾತನಾಡಿ, ಅಂದು ಅಪರಾಹ್ನ 3 ಗಂಟೆಗೆ ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಕಾರ್ಯಕ್ರಮಕ್ಕೆ ಚಾಲನೆ ನೀಡುವರು.
 
ಶೀರೂರು ಮಠದ ದೈವ ಪಿಲಿಚಾಮುಂಡಿ ಪ್ರೀತ್ಯರ್ಥವಾಗಿ ಲಾಗಾಯ್ತಿನಿಂದಲೂ ಹುಲಿವೇಷ ಆಯೋಜಿಸಲಾಗುತ್ತಿದೆ ಎಂದರು. ಶೀರೂರು ಮೂಲ ಮಠದ ಶ್ರೀ ಮುಖ್ಯಪ್ರಾಣ ಸನ್ನಿಧಿಯಲ್ಲಿ ಸೋಣ (ಶ್ರಾವಣ) ಶನಿವಾರದಂದು ನೆಲದಲ್ಲಿ ಊಟ ಆರಂಭಿಸಲಾಗಿದೆ ಎಂದರು.