ಇತ್ತೀಚಿಗೆ ಕರಾವಳಿಯಲ್ಲಿ ಸಮೂಹ ಸನ್ನಿಯೋ ಎನ್ನುವ ರೀತಿ ವಿವಿಧ ಸಂಘ- ಸಂಸ್ಥೆಗಳು 'ಆಟಿಡೊಂಜಿ ದಿನ' ಹೆಸರಲ್ಲಿ ತುಳುವರ ಆಟಿ(ಆಷಾಢ) ತಿಂಗಳನ್ನು ನೆನಪಿಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ. ಭರ್ಜರಿ ಊಟದ ಜೊತೆಗೆ, ಮನರಂಜನಾ ಕಾರ್ಯಕ್ರಮಗಳನ್ನೂ ನಡೆಸುತ್ತಿದ್ದು ಜನಸಾಮಾನ್ಯರೆಲ್ಲ ಪಾಲ್ಗೊಳ್ಳುತ್ತಿದ್ದಾರೆ. ಮಂಗಳೂರಿನ ಯೆಯ್ಯಾಡಿಯಲ್ಲಿ ಆಯೋಜಿಸಿದ್ದ 'ಆಟಿದ ನೆಂಪು' ಎನ್ನುವ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರು ದೈವದ ಪಾತ್ರಧಾರಿಯ ರೀತಿ ಕುಣಿದಿದ್ದು ಅದರ ವಿಡಿಯೋ ವೈರಲ್ ಆಗಿದ್ದಲ್ಲದೆ, ಈ ರೀತಿಯ ವರ್ತನೆ ಕೆಲವರ ಆಕ್ರೋಶಕ್ಕೂ ಕಾರಣವಾಗಿದೆ.
ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬರು 'ವಾ ಪೊರ್ಲುಯಾ' ಹಾಡನ್ನು ಹಾಡಿದ್ದು, ಈ ಸಂದರ್ಭದಲ್ಲಿ ಮಹಿಳೆ ತಾಳಕ್ಕೆ ತಕ್ಕಂತೆ ದೈವದ ಕುಣಿತದ ಮಾದರಿಯನ್ನು ಪ್ರದರ್ಶನ ಮಾಡಿದ್ದಾರೆ. ಮಹಿಳೆ ದೈವ ಪಾತ್ರಧಾರಿಯ ರೀತಿ ಕುಣಿದಿರುವ ವೀಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು ಪರ- ವಿರೋಧ ಅಭಿಪ್ರಾಯ ಕೇಳಿಬಂದಿದೆ. ತುಳುನಾಡು ಪರ ಹೋರಾಟಗಾರರು ಈ ರೀತಿ ಕುಣಿದಿರುವುದು ದೈವ ನರ್ತನಕ್ಕೆ ಅಪಮಾನ ಮಾಡಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುಳುನಾಡು ಹೋರಾಟಗಾರಲ್ಲಿ ಒಬ್ಬರಾದ ರೋಶನ್ ಎಂಬವರು, ಕಾರ್ಯಕ್ರಮ ಆಯೋಜಕರಿಗೆ ಮತ್ತು ಆ ಮಹಿಳೆಗೆ ಕರೆ ಮಾಡಿ, ತರಾಟೆಗೆ ತೆಗೆದುಕೊಂಡಿದ್ದಾರೆ. ಮಹಿಳೆ ದೈವಸ್ಥಾನದ ಎದುರು ನಿಂತು ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದ್ದಾರೆ. ನಾವೇ ಸಾರ್ವಜನಿಕ ಕಾರ್ಯಕ್ರಮದಲ್ಲಿ ಈ ರೀತಿ ವರ್ತಿಸಿದರೆ ಹೊರಭಾಗದವರು, ಬೆಂಗಳೂರಿನವರು ದೈವಾರಾಧನೆ ಬಗ್ಗೆ ಅಣಕಿಸಿದರೆ, ದೈವ ಪಾತ್ರಧಾರಿ ರೀತಿ ಕುಣಿದು ವಿಚಿತ್ರವಾಗಿ ವರ್ತಿಸಿದರೆ ಅದನ್ನು ಪ್ರಶ್ನೆ ಮಾಡುವುದು ಹೇಗೆ ಎಂದು ಅಸಮಾಧಾನ ಹೇಳಿಕೊಂಡಿದ್ದಾರೆ.
ಮೊನ್ನೆ ಭಾನುವಾರ ಕಾರ್ಯಕ್ರಮ ನಡೆದಿದ್ದು 4ಬೀಟ್ಸ್ ಹೆಸರಿನ ತಂಡ ಆಯೋಜನೆ ಮಾಡಿತ್ತು. ವಿಡಿಯೋ ವೈರಲ್ ಆಗಿ ಆಕ್ರೋಶ ಕೇಳಿಬರುತ್ತಿದ್ದಂತೆ, ಮಹಿಳೆ ದೈವ ನರ್ತನದ ಅನುಕರಣೆ ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ. ಭಕ್ತಿಯಿಂದ ನರ್ತಿಸಿದ್ದೇ ಹೊರತು, ಅವರೇನೂ ದೈವಕ್ಕೆ ಅವಮಾನ ಮಾಡಿಲ್ಲ ಎಂದು ಆಯೋಜಕರು ಸಮರ್ಥಿಸಿಕೊಂಡಿದ್ದಾರೆ. ಆದರೆ ದೈವಾರಾಧನೆ ಬಗ್ಗೆ ಕರಾವಳಿಯ ತುಳುವರಿಗೆ ವಿಶೇಷ ಭಕ್ತಿ, ನಂಬಿಕೆಯಿದೆ. ಮನರಂಜನೆಗಾಗಿ ದೈವದ ಕುಣಿತವನ್ನು ಅನುಕರಣೆ ಮಾಡುವುದು ದೈವಾರಾಧನೆಯನ್ನು ಅಣಕಿಸಿದಂತೆ ಎನ್ನುವ ಅಭಿಪ್ರಾಯಗಳನ್ನು ಹಲವರು ವ್ಯಕ್ತಪಡಿಸಿದ್ದಾರೆ.