ಪ್ರಕೃತಿ ಸಹಜ ನಿರ್ಮಾಣವಾದ, ಮಾನವಶ್ರದ್ಧೆಯಿಂದ ಕಾಪಿಟ್ಟ ಪುರಾತನ ನಾಗ ಬನ ಎಂದರೆ, ಅದೊಂದು ದಟ್ಟವಾದ ಅರಣ್ಯದ ಸಣ್ಣ ಮಾದರಿ. ಇದೊಂದು ಸುರಕ್ಷಿತ ಪರಿಸರ . ಮಾನವ ಅಭಿಯೋಗವಾಗದ ಒಂದು ನಾಗ ಬನದಲ್ಲಿ ಕನಿಷ್ಠ 50-60 ವೃಕ್ಷ - ಗಿಡ - ಬಳ್ಳಿ - ಪೊದೆಗಳ ಪ್ರಭೇದ , 20-30 ಔಷಧೀಯ ಸಸ್ಯಗಳು ಇರುತ್ತವೆ ಎಂಬುದು ಸಂಶೋಧಕರ, ಪರಿಸರ ಆಸಕ್ತರ ಅಭಿಪ್ರಾಯ. ಇಲ್ಲಿ ಬೆಳೆದ ಮರ- ಗಿಡ- ಬಳ್ಳಿಗಳನ್ನು ಆಶ್ರಯಿಸಿ ಪಕ್ಷಿ ಸಂಕುಲ ನಿರ್ಭಯದಿಂದ ಬದುಕುತ್ತವೆ . ಕ್ರಿಮಿಕೀಟಗಳಿಗೂ ಇದು ಆಶ್ರಯಸ್ಥಾನ .ಹೀಗೆ ನಾಗಬನಗಳು ಜೀವ ವೈವಿಧ್ಯಗಳ ತಾಣವೂ ಹೌದು. ಇದು ನಿಜ ಅರ್ಥದ ವನ, ಬನ.
ಮರ ಗಿಡಗಳಿಲ್ಲದ "ನಾಗ ಬನ"ದಲ್ಲಿ ನಾಗವೇದಿಕೆ , ನಾಗಗುಡಿ ,ನಾಗಮಂದಿರಗಳು ನಿರ್ಮಾಣವಾಗುತ್ತಿರುವುದನ್ನು ಇತ್ತೀಚೆಗಿನ ನಾಲ್ಕೈದು ದಶಕಗಳಿಂದ ಕಾಣುತ್ತಿದ್ದೇವೆ .
ತಂಪನ್ನು ಬಯಸಿ ತಂಪನ್ನು ಆಶ್ರಯಿಸುವ ಪ್ರಾಣಿ ನಾಗ ಹುತ್ತದ ಆಳದಲ್ಲಿ , ವಿಶಾಲವಾದ ಮರಗಳ ಬುಡದಲ್ಲಿ , ಒತ್ತೊತ್ತಾಗಿ ಗಿಡ ಮರಗಳು ಬೆಳೆದಿರುವಲ್ಲಿ , ಮನುಷ್ಯ ಸಂಚಾರವಿಲ್ಲದೆ ತರಗೆಲೆಗಳು ಬಿದ್ದು ದಪ್ಪನೆಯ ಹಾಸು ನಿರ್ಮಾಣವಾದಲ್ಲಿ ಅದರಡಿಯಲ್ಲಿ ನಾಗನ ವಾಸಸ್ಥಾನ . ಇಂತಹ ಸಹಜವಾದ ವ್ಯವಸ್ಥೆ ಇದ್ದುದನ್ನು ಹಾಳುಗೆಡಹದೆ ರಕ್ಷಿಸಿದರೆ ಇದೂ ಒಂದು ರೀತಿಯ ನಾಗಾರಾಧನೆ .ಹಿಂದೆ ಆಟಿ( ಕರ್ಕಾಟಕ ಮಾಸ) ತಿಂಗಳ ಅಮಾವಾಸ್ಯೆಯಂದು ಮಾತ್ರ ನಾಗಬನಗಳ ಅನಗತ್ಯ ಬೆಳವಣಿಗೆಗಳನ್ನು ಮಾತ್ರ ಕಡಿದು ಬನ ಪ್ರವೇಶಕ್ಕೆ ಅನುಕೂಲ ಮಾಡಿಕೊಳ್ಳುತ್ತಿದ್ದರು .
ನಾಗಬನಗಳ ನಾಶ ಪ್ರಕ್ರಿಯೆ , ಆಶಯ ಮರೆತ ವೈಭವೀಕರಣ ,ಜೀರ್ಣೋದ್ಧಾರ ಅವ್ಯಾಹತವಾಗಿ ನಡೆದರೆ ಮುಂದೊಂದು ದಿನ ಕಾಂಕ್ರೀಟ್ ಕಟ್ಟೆಯನ್ನೊ , ಗುಡಿಯನ್ನೊ ನಾಗಬನವೆಂದು ನಮ್ಮ ಮಕ್ಕಳಿಗೆ ತೋರಿಸಬೇಕಾಗಬಹುದು. ಆಗ ಮಾತ್ರ ಮಕ್ಕಳು ' ಬನ ಎನ್ನುತ್ತೀರಿ ಎಲ್ಲಿದೆ ವನ ?' ಎಂದು ಪ್ರಶ್ನಿಸಿದರೆ ನಮ್ಮಲ್ಲಿ ಉತ್ತರ ಇದೆಯಾ ?
| ನಾಗ - ವೃಕ್ಷ ಅವಳಿ ಚೇತನ |
ನಾಗ - ವೃಕ್ಷ ಸಂಬಂಧವನ್ನು ನಮ್ಮ ಸಂಸ್ಕೃತಿಯ ಮೂಲದಲ್ಲಿ ಗುರುತಿಸಬಹುದು . ಈ ಕಾರಣದಿಂದಲೇ ಮರಗಳ ಸಮೂಹವೇ ನಾಗಬನವಾಗಿದ್ದಿರ ಬಹುದು .
ಪ್ರತಿ ವರ್ಷ ಕನಿಷ್ಠ ಒಂದೆರಡು ಬಾರಿಯಾದರೂ ನಾಗ ಮೂಲಸ್ಥಾನಕ್ಕೆ "ತನುತಂಬಿಲ" ಸೇವೆಸಲ್ಲಿಸಲು ಹೋಗುವ ನಾವು ನಾಗರಪಂಚಮಿಯ ಪರ್ವದಲ್ಲಿ ಮೂಲಕ್ಕೆ ಹೋಗುವಾಗ ಒಂದು ಗಿಡವನ್ನು ಕೊಂಡೊಯ್ಯುವ ,ಬನದ ಪರಿಸರದಲ್ಲಿ ನೆಟ್ಟು ವನ ಮಹೋತ್ಸವ ಆಚರಿಸೋಣ, ಈ ವೇಳೆಯಲ್ಲಿ ಗಿಡನೆಡುವ ಅಭಿಯಾನ ಎಲ್ಲೆಡೆ ನೆರವೇರುತ್ತಿರುತ್ತವೆ,ನಾಗರಪಂಚಮಿ ದಿನದಂದು ನಾಗಪೂಜೆಯೊಂದಿಗೆ ವನಮಹೋತ್ಸವವೂ ಆಗಬಾರದೆ?
• ಕೆ.ಎಲ್.ಕುಂಡಂತಾಯ