ನೆಲಮಂಗಲ: ದ್ವಿಚಕ್ರವಾಹನಕ್ಕೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಕೆಳಗೆ ಬಿದ್ದ 8 ತಿಂಗಳ ಗರ್ಭಿಣಿ ಮೇಲೆ ಟಿಪ್ಪರ್ ಲಾರಿ ಹರಿದು ಗರ್ಭಿಣಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ದಾರುಣ ಘಟನೆ ತುಮಕೂರು ಬೆಂಗಳೂರು ಹೆದ್ದಾರಿ ರಸ್ತೆಯ ನೆಲಮಂಗಲ ತಾಲ್ಲೂಕಿನ ಎಡೇಹಳ್ಳಿ ಬಳಿ ನೆಡೆದಿದೆ.
ನೆಲಮಂಗಲ ತಾಲ್ಲೂಕು ತೋಟನಹಳ್ಳಿ ಗ್ರಾಮದ ಸಿಂಚನ (30) 8 ತಿಂಗಳ ತುಂಬು ಗರ್ಭಿಣಿ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಪತಿ ಮಂಜುನಾಥ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆ ಬಳಿಕ ಟಿಪ್ಪರ್ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ವಿಷಯ ತಿಳಿದ ಸಂಚಾರಿ ಪೊಲೀಸರು ಮೃತ ತಾಯಿ, ಮಗು ಮೃತದೇಹವನ್ನ ನೆಲಮಂಗಲ ಸಾರ್ವಜನಿಕ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿ ಟಿಪ್ಪರ್ ಲಾರಿಯನ್ನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇಂದು ಮುಂಜಾನೆಯೇ ಮಂಜುನಾಥ್ ಮತ್ತು ಸಿಂಚನ ದಂಪತಿ ತೋಟಹಳ್ಳಿ ಗ್ರಾಮದ ತಮ್ಮ ನಿವಾಸದಿಂದ ಶಿವಗಂಗೆಯ ದೇವಾಸ್ಥಾನಕ್ಕೆ ತೆರಳಿ ಪೂಜೆ ಮುಗಿಸ್ಕೊಂಡು ವಾಪಸ್ ಮನೆಗೆ ಬರುತ್ತಿದ್ದರು. ಈ ವೇಳೆ ಎಡೇಹಳ್ಳಿ ಬಳಿ ಹಿಂಬದಿಯಿಂದ ಬಂದ ಜಲ್ಲಿಕಲ್ಲು ತುಂಬಿದ್ದ ಟಿಪ್ಪರ್ ಲಾರಿ ತಮ್ಮ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿದೆ. ರಭಸಕ್ಕೆ ಕೆಳಗೆ ಬಿದ್ದ ಸಿಂಚನ ಎದೆ ಮತ್ತು ಹೊಟ್ಟೆ ಭಾಗದ ಮೇಲೆ ಲಾರಿ ಚಕ್ರ ಹರಿಯುತ್ತಿದ್ದಂತೆ ಇನ್ನೂ ಕಣ್ಣು ಬಿಡದ ಹೊಟ್ಟೆಯಲ್ಲಿದ್ದ ಹೆಣ್ಣು ಹಸುಗೂಸು ಹೊರ ಬಂದು ಪ್ರಾಣ ಬಿಟ್ಟಿದೆ. ಇದೇ ತಿಂಗಳ 21 ರಂದು ಸೀಮಂತ ಮಾಡಿಸಿಕೊಳ್ಳಬೇಕಿದ್ದ ಸಿಂಚನ, ತನ್ನ ಮಗುವಿನೊಂದಿಗೆ ಮಸಣ ಸೇರುತ್ತಿರೋದು ಮಾತ್ರ ಶೋಚನೀಯ ಸಂಗತಿ.