ಪಣಂಬೂರು ಠಾಣೆ ವ್ಯಾಪ್ತಿಯ ಜೋಕಟ್ಟೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ 13 ವರ್ಷದ ಬಾಲಕಿಯನ್ನು ಯಾರೋ ದುರುಳರು ಬಟ್ಟೆಯಲ್ಲಿ ಕುತ್ತಿಗೆ ಬಿಗಿದು ಕೊಲೆಗೈದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಬೆಳಗಾವಿ ಮೂಲದ ಹನುಮಂತು ಎಂಬವರು ಜೋಕಟ್ಟೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು. ಕೋಣಾಜೆಯ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಕಲಿಯುತ್ತಿದ್ದ ಇವರ ತಮ್ಮನ ಮಗಳು 13 ವರ್ಷದ ಬಾಲಕಿ ಊರಿಗೆ ಹೋಗಿ ಹಿಂತಿರುಗಿದ್ದು, ಕೈ ನೋವೆಂದು ಶಾಲೆಗೆ ಹೋಗದೆ ಇವರದೇ ಮನೆಯಲ್ಲಿ ಉಳಿದುಕೊಂಡಿದ್ದಳು. ನಾಲ್ಕು ದಿನಗಳಿಂದ ಇದೇ ಮನೆಯಲ್ಲಿ ಬಾಲಕಿ ನೆಲೆಸಿದ್ದು ಮಂಗಳವಾರ ಬೆಳಗ್ಗೆ ಹನುಮಂತು ಮತ್ತು ಇತರರು ತಮ್ಮ ಕೆಲಸಕ್ಕೆ ತೆರಳಿದ್ದರು.
ಬೆಳಗ್ಗೆ ಹತ್ತು ಗಂಟೆ ವೇಳೆಗೆ ಬಾಲಕಿಯ ತಾಯಿ ಪಕ್ಕದ ಮನೆಯವರಿಗೆ ಫೋನ್ ಮಾಡಿದ್ದು, ತನ್ನ ಮಗಳಿಗೆ ಫೋನ್ ಕೊಡುವಂತೆ ಹೇಳಿದ್ದರು. ಅದರಂತೆ, ಪಕ್ಕದ ಮನೆಯವರು ಅಲ್ಲಿಗೆ ತೆರಳಿ ನೋಡಿದಾಗ, ಬಾಲಕಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕೂಡಲೇ ಹನುಮಂತು ಅವರನ್ನು ಸ್ಥಳಕ್ಕೆ ಕರೆಸಿದ್ದು, ಪರಿಶೀಲನೆ ವೇಳೆ ಕುತ್ತಿಗೆಯನ್ನು ಬಟ್ಟೆಯಿಂದ ಬಿಗಿದು ಸಾಯಿಸಿದ ರೀತಿ ಕಂಡುಬಂದಿದೆ. ಬಳಿಕ ಪಣಂಬೂರು ಪೊಲೀಸರು ಸ್ಥಳಕ್ಕೆ ತೆರಳಿದ್ದು, ಪರಿಶೀಲನೆ ನಡೆಸಿದ್ದಾರೆ.
ಯಾರೋ ಹೊರಗಿನವರು ಮನೆಯ ಒಳಗೆ ಬಂದು ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ. ಆಕೆಯ ಮೇಲೆ ಅತ್ಯಾಚಾರ ಯತ್ನ ಆಗಿದೆಯೇ ಎನ್ನುವ ಬಗ್ಗೆ ಪೋಸ್ಟ್ ಮಾರ್ಟಂ ಪರೀಕ್ಷೆಯಲ್ಲಿ ತಿಳಿದುಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಂಕೆಯ ಮೇರೆಗೆ ಹಲವರನ್ನು ವಿಚಾರಣೆ ನಡೆಸಲಾಗಿದ್ದು ಸುಳಿವು ಸಿಕ್ಕಿದೆ ಎಂದು ತಿಳಿಸಿದ್ದಾರೆ.