Header Ads Widget

ಉಡುಪಿ ಮಠದಲ್ಲೂ ವಸ್ತ್ರ ಸಂಹಿತೆಗೆ ಒತ್ತಡ~ ಪುತ್ತಿಗೆಶ್ರೀ

 

ಇಂದಿನ ಆಧುನಿಕ ಮತ್ತು ಕೃತಕ ಬಟ್ಟೆಗಳು ನೋಡಲು ಬಲು ಸುಂದರವಾಗಿರುತ್ತವೆ. ಆದರೆ, ಕೈಮಗ್ಗದಿಂದ ನೇಯ್ದ ಸೀರೆಗಳು ದೇಹಕ್ಕೆ ಹಿತವಾಗಿರುತ್ತವೆ. ಈ ಸೀರೆಗಳು ಸಾಂಸ್ಕೃತಿಕ ಮೌಲ್ಯಗಳ ಪ್ರತಿಕವಾಗಿದೆ. ಇಂತಹ ಸೀರೆ ಧರಿಸುವುದರಿಂದಲೇ ಮಹಿಳೆಯರ ಮೇಲೆ ಪೂಜ್ಯತಾ ಭಾವ ಬರುತ್ತದೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು
 
ಉಡುಪಿಯ ರಾಜಾಂಗಣದಲ್ಲಿ ಪದ್ಮಶಾಲಿ ನೇಕಾರ ಪ್ರತಿಷ್ಠಾನ (ರಿ.) ಉಡುಪಿ, ಪ್ರಾಥಮಿಕ ನೇಕಾರ ಸೇವಾ ಸಹಕಾರಿ ಸಂಘ ಉಡುಪಿ ಆಯೋಜನೆಯಲ್ಲಿ, ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ 11 ದಿನಗಳ ಕೈಮಗ್ಗ ಸೀರೆಗಳ ಉತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದರು.
 
ಹಬ್ಬ ಎಂದರೆ ಎಲ್ಲರೂ ಹೊಸ ಬಟ್ಟೆ ಖರೀದಿಸುತ್ತಾರೆ. ಅದರಲ್ಲೂ ಮಹಿಳೆಯರು ಸೀರೆ ಖರೀದಿಸಲು ಹೆಚ್ಚು ಉತ್ಸುಕರಾಗಿರುತ್ತಾರೆ. ಇದೀಗ ಶ್ರೀಕೃಷ್ಣನ ಜನ್ಮಾಷ್ಟಮಿ ಹಬ್ಬದ ಸಡಗರ ಬರಲಿದ್ದು, ಮಠದ ವತಿಯಿಂದ ಮಾಸೋತ್ಸವ ಆಯೋಜಿಸಿದ್ದೇವೆ.
 

ಈ ಸಂದರ್ಭದಲ್ಲಿ ಉಡುಪಿಯಲ್ಲಿ ಕೈಮಗ್ಗ ಸೀರೆಗಳ ಉತ್ಸವ ನಡೆಸಿರುವುದು ಸೂಕ್ತ ಹಾಗೂ ಸಮಯೋಚಿತವಾಗಿದೆ. ಕಣ್ಮರೆಯಾಗುತ್ತಿರುವ ದೇಸೀಯ ಕೌಶಲ, ಪ್ರಾಚಿನ ಮೌಲ್ಯ, ಸಂಸ್ಕೃತಿ ಹಾಗೂ ಪದ್ಧತಿ ಉಳಿಸಲು ಈ ಉತ್ಸವ ಪೂರಕ ಎಂದರು.

ದೇಶ ಹಾಗೂ ರಾಜ್ಯದ ವಿವಿಧ ದೇಗುಲಗಳಲ್ಲಿ ವಸ್ತ್ರ ಸಂಹಿತೆ ಜಾರಿಯಲ್ಲಿದೆ. ಉಡುಪಿ ಮಠದಲ್ಲೂ ಸಹ ವಸ್ತ್ರ ಸಂಹಿತೆ ಜಾರಿಗೊಳಿಸಬೇಕು ಎಂಬ ಬಹಳ ಒತ್ತಡ ಬರುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಚಿಂತನೆಯೂ ಇದೆ. ಎಲ್ಲ ದೇಗುಲಗಳಲ್ಲಿ ವಸ್ತ್ರ ಸಂಹಿತೆ ಜಾರಿಯಾದರೆ ಮಹಿಳೆಯರೆಲ್ಲ ಸೀರೆ ತೊಡುವಂತಾಗುತ್ತದೆ. ಇದರಿಂದ ಕೈಮಗ್ಗ ಸೀರೆ ಹಾಗೂ ಇನ್ನಿತರ ಸೀರೆ ಉದ್ಯಮಗಳು ಬೆಳೆಯಲು ಸಹಕಾರಿಯಾಗುತ್ತದೆ ಎಂದು ಸುಗುಣೇಂದ್ರ ತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು.
 
ಕಾರ್ಯಕ್ರಮದಲ್ಲಿ ನಗರಸಭೆ ಆಯುಕ್ತ ರಾಯಪ್ಪ, ನಗರಸಭಾ ಸದಸ್ಯರಾದ ರಜಿನಿ ಹೆಬ್ಬಾರ್​, ಟಿ.ಜಿ. ಹೆಗ್ಡೆ, ಮಂಜುನಾಥ ಮಣಿಪಾಲ, ಉದ್ಯಮಿಗಳಾದ ಹರಿಯಪ್ಪ ಕೋಟ್ಯಾನ್​, ಅಜಯ್​ ಶೆಟ್ಟಿ, ಡೆಂಟಾ ಕೇರ್​ನ ಡಾ. ವಿಜಯೇಂದ್ರ ವಸಂತ್​, ಛೇಂಬರ್​ ಆ್​ ಕಾಮರ್ಸ್​ನ ಅಧ್ಯಕ್ಷ ಅಮ್ಮುಂಜೆ ಪ್ರಭಾಕರ ನಾಯಕ್​, ಗಣೇಶ್​ ಪಾಟೀಲ್​ ಪರ್ಕಳ, ದಿನೇಶ್​ಕುಮಾರ್​, ವಿಶ್ವನಾಥ ಶೆಣೈ, ಶ್ರೀಮಠದ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ್​ ಭಟ್​ ಇತರರು ಉಪಸ್ಥಿತರಿದ್ದರು.
 
ಶಾರದಾ ದಾಮೋದರ್​ ಹಾಗೂ ಶೋಭಾ ಶ್ರೀಕಾಂತ್​ ಪ್ರಾರ್ಥಿಸಿದರು. ಚಂದನ್​ ಶೆಟ್ಟಿಗಾರ್​ ಸ್ವಾಗತಿಸಿದರು. ಸಂಟನೆಯ ಅಧ್ಯಕ್ಷ ರತ್ನಾಕರ್​ ಇಂದ್ರಾಳಿ ಪ್ರಸ್ತಾವಿಕವಾಗಿ ಮಾತನಾಡಿದರು. ಸದಾಶಿವ ಶೆಟ್ಟಿಗಾರ್​ ಗೋಳಿಜೋರ ಕಾರ್ಯಕ್ರಮ ನಿರೂಪಿಸಿದರು.