ಉಡುಪಿ: ೧೮೬೪ ರ ಜಿನೇವಾ ಒಪ್ಪಂದವು ವಿಶ್ವ ಶಾಂತಿಗೆ ನೀಡಿದ ಕೊಡುಗೆ ಮಹತ್ವದ್ದಾಗಿದೆ. ಎಲ್ಲಾ ದೇಶಗಳ ಸೈನಿಕರಿಗೆ ಆರೈಕೆ ಹಾಗೂ ಮೃತ ಸೈನಿಕರಿಗೆ ಗೌರವಯುತವಾದ ಅಂತ್ಯ ಸಂಸ್ಕಾರಕ್ಕೆ ದೇಶಗಳು ಒಡಂಬಡಿಕೆಗೆ ಬಂದ ಮಹತ್ವದ ಒಪ್ಪಂದಗಳು ಜಿನೇವಾ ಒಪ್ಪಂದಗಳಾಗಿವೆ. ಸೆರೆಯಾದ ಸೈನಿಕರನ್ನು ಸಂಬoಧಿಸಿದ ದೇಶಗಳಿಗೆ ಒಪ್ಪಿಸಲು ಈ ಒಪ್ಪಂದವು ಕಾರಣವಾಗಿದೆ. ರೆಡ್ ಕ್ರಾಸ್‌ನ ಉದಯಕ್ಕೆ ಈ ಒಪ್ಪಂದವು ಮೂಲ ಕಾರಣವಾಗಿದೆ ಎಂದು ಚಿಂತಕ ಮತ್ತು ರಂಗತಜ್ಞ ಡಾ. ಪ್ರಸಾದ್ ರಾವ್ ಹೇಳಿದರು.
ಅವರು ವಿಶ್ವಶಾಂತಿಗಾಗಿ ಜಿನೇವಾ ಒಪ್ಪಂದದ ಸ್ಮರಣೆ ಎಂಬ ವಿಷಯದ ಬಗ್ಗೆ ನಡೆದ ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರೆಡ್ ಕ್ರಾಸ್ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿಯವರು ವಿಶ್ವ ಶಾಂತಿಗೆ ರೆಡ್ ಕ್ರಾಸ್ ನೀಡಿದ ಕೊಡುಗೆಯನ್ನು ವಿವರಿಸಿ ಇದರಿಂದಲೇ ಈ ಸಂಸ್ಥೆ ನಾಲ್ಕು ಬಾರಿ ನೊಬೆಲ್ ಬಹುಮಾನ ಪಡೆದಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ, ಮುಖ್ಯ ಅತಿಥಿಗಳಾಗಿದ್ದರು. ರೆಡ್ ಕ್ರಾಸ್ ಸ್ವಯಂಸೇವಕಿಯರು ಪ್ರಾರ್ಥಿಸಿದರು. ಆಡಳಿತ ಮಂಡಳಿಯ ಸದಸ್ಯ ಚಂದ್ರಶೇಖರ್, ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ರೆಡ್ ಕ್ರಾಸ್ ಸಂಯೋಜಕಿ ಡಾ. ದಿವ್ಯಾ ಎಂ.ಎಸ್, ರೆಡ್ ಕ್ರಾಸ್ ಅಧಿಕಾರಿಗಳಾದ ರೇಖಾ ಮತ್ತು ಡಾ. ರಾಘವೇಂದ್ರ ಎಲ್ ಉಪಸ್ಥಿತರಿದ್ದರು. ರೆಡ್ ಕ್ರಾಸ್ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಖಜಾಂಚಿ ರಮಾದೇವಿ ವಂದಿಸಿದರು. ಉಡುಪಿ ಜಿಲ್ಲೆಯ ವಿವಿಧ ಕಾಲೇಜುಗಳ ರೆಡ್ ಕ್ರಾಸ್ ಸ್ವಯಂ ಸೇವಕ- ಸೇವಕಿಯರು ಭಾಗವಹಿಸಿದ್ದರು.