Header Ads Widget

ಟ್ಯಾಂಪಾನಲ್ಲಿ(ಯು.ಎಸ್.ಎ.) ಪ್ರಥಮ ಬಾರಿಗೆ ಯಕ್ಷಗಾನ ಮತ್ತು ತಾಳಮದ್ದಳೆ~ ಅರುಣ್ ರಾವ್ ಆರೂರು


ಯಕ್ಷಧ್ರುವ ಪಟ್ಲ ಫೌಂಡೇಷನ್, ಯು.ಎಸ್.ಎ.' ಇವರಿಂದ "ಶ್ರೀದೇವಿ ಮಹಾತ್ಮ" ಎಂಬ ಪೌರಾಣಿಕ ಯಕ್ಷಗಾನ ಪ್ರಸಂಗವು ಆಗಸ್ಟ್ 17, 2024 ರ ಸಾಯಂಕಾಲ ಟ್ಯಾಂಪಾದ "ಹಿಂದು ಟೆಂಪಲ್ ಆಫ್ ಫ್ಲೋರಿಡಾ" ದೇವಸ್ಥಾನದ ಸಭಾಲಯದಲ್ಲಿ ಅದ್ದೂರಿಯಾಗಿ ಜರಗಿತು. ಅಲ್ಲಿರುವ ಶ್ರೀಗಂಧ ಕನ್ನಡ ಕೂಟವು ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯ ಯಕ್ಷಗಾನ ಕಲಾಭಿಮಾನಿಗಳ ಸಹಯೋಗದೊಂದಿಗೆ ಈ ಅಪೂರ್ವ ಯಕ್ಷಗಾನ ಕಾರ್ಯಕ್ರಮವನ್ನು ಮೊದಲ ಬಾರಿಗೆ ಅಮೇರಿಕಾದ ಟ್ಯಾಂಪಾ ನಗರದಲ್ಲಿ ನಿಯೋಜಿಸಿತ್ತು.

ಆದಿಮಾಯೆ ಮತ್ತು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಈಶ್ವರನ ಒಡೋಲಗದೊಂದಿಗೆ ಈ ಯಕ್ಷಗಾನವು ಆರಂಭ ಗೊಂಡಿತು. ಪತಿಯನ್ನು ಸಂಹರಿಸಿದ ದೇವತೆಗಳ ಮೇಲಿನ ಸೇಡನ್ನು ತೀರಿಸಲು ಮಾಲಿನಿಯು ಮಗನಾದ ಮಹಿಷನನ್ನು ತಪಸ್ಸಿಗೆ ಅಟ್ಟುತ್ತಾಳೆ. ಮಹಿಷನು ಘೋರವಾದ ತಪಗೈದು ಬ್ರಹ್ಮನಿಂದ ವರ ಪಡೆದು ಇಡೀ ಪ್ರಪಂಚವನ್ನೇ ಗೆದ್ದು ಸಾರ್ವ ಭೌಮತ್ವ ಸಾಧಿಸುವ ದುಷ್ಟ ಬಯಕೆಯಿಂದ ಎಲ್ಲೆಡೆ ಯುದ್ಧ ಮತ್ತು ಧ್ವಂಸ ಕಾರ್ಯಗಳಲ್ಲಿ ತೊಡಗುತ್ತಾನೆ. ಅವನ ಉಪಟಳ ತಾಳಲಾರದೆ ದೇವೇಂದ್ರನು ತ್ರಿಮೂರ್ತಿಗಳ ಸಹಾಯ ಕೇಳುತ್ತಾನೆ. ಕೇವಲ ಅಯೋನಿಜರಿಂದ ಮಾತ್ರ ಸಾಯಬಲ್ಲ ವರವನ್ನು ಮಹಿಷಾಸುರನು ಹೊಂದಿದ್ದ ಕಾರಣ ತ್ರಿಮೂರ್ತಿಗಳು ಶಕ್ತಿದೇವತೆಯಾದ ಶ್ರೀದೇವಿಯ ಮೊರೆಹೋಗುತ್ತಾರೆ. ಪ್ರಬಲ ಆಯುಧಗಳನ್ನು ತ್ರಿಮೂರ್ತಿ ಗಳಿಂದ ಪಡೆದ ಶ್ರೀದೇವಿಯು ದುರ್ಗೆಯ ರೂಪ ತಾಳಿ ಮಹಿಷಾಸುರನನ್ನು ಮರ್ದಿಸುತ್ತಾಳೆ.

ಪ್ರವಾಸಿ ಯಕ್ಷಗಾನ ತಂಡದ ಸಂಸ್ಥಾಪಕರಾದ ಪಟ್ಲ ಶ್ರೀ ಸತೀಶ್ ಶೆಟ್ಟಿಯವರು ತಮ್ಮ ಅಮೋಘ ಕಂಠಸಿರಿಯಿಂದ ವಿಭಿನ್ನ ರಾಗಗಳನ್ನು ಅಳವಡಿಸಿಕೊಂಡು ಸುಶ್ರಾವ್ಯವಾಗಿ ಭಾಗವತಿಕೆ ಮಾಡಿ ಕಲಾರಸಿಕರ ಮನವನ್ನು ಗೆದ್ದರು. ಹಿಮ್ಮೇಳದಲ್ಲಿ ಶ್ರೀ ಪದ್ಮನಾಭ ಉಪಾಧ್ಯರು ಮದ್ದಳೆಯ ಶ್ರವಣಾನಂದಕರ ನಿನಾದದ ಮೂಲಕ ಎಲ್ಲರನ್ನು ರಂಜಿಸಿದರು. ಅಬ್ಬರದ ಚಂಡೆವಾದನ ನೀಡಿದ ಶ್ರೀ ಚೈತನ್ಯ ಕೃಷ್ಣ ಪದ್ಯಾಣರು ಪ್ರಸಂಗದುದ್ದಕ್ಕೂ ಅಮೋಘ ಕೈಚಳಕವನ್ನು ಪ್ರದರ್ಶಿಸಿದರು.

ಮಹಾವಿಷ್ಣುವಿನ ವೇಷಧಾರಿಯಾಗಿ ಖ್ಯಾತ ಯಕ್ಷಗಾನ ಕಲೋಪಾಸಕ ಶ್ರೀ ಎಂ. ಎಲ್. ಸಾಮಗರು ಅಪ್ರತಿಮ ಮಾತುಗಾರಿಕೆ ಯಿಂದ ಸಭಿಕರ ಗಮನ ಸೆಳೆದರು. ಸ್ಥಳೀಯ ಕಲಾಭಿಮಾನಿಗಳಾದ ಶ್ರೀ ಗಿರೀಶ ಕೊಂಡಿಯವರು ಬ್ರಹ್ಮನಾಗಿಯೂ, ಶ್ರೀ ನಾಗರಾಜ ಮಂಜರವರು ಈಶ್ವರನಾಗಿಯೂ ಮತ್ತು ಶ್ರೀಮತಿ ರಶ್ಮಿ ಮಯ್ಯರವರು ಆದಿಮಾಯೆಯಾಗಿಯೂ ಸಭಿಕರಿಂದ ಪ್ರಶಂಸೆ ಪಡೆದರು. ಸುಪರ್ಷ್ಟಕ ಮತ್ತು ಶಂಖಾಸುರನ ಪಾತ್ರಧಾರಿ ಶ್ರೀ ಚಂದ್ರಶೇಖರ ಧರ್ಮಸ್ಥಳರವರು ಪ್ರದರ್ಶನಕ್ಕೆ ಜೀವಕಳೆ ತುಂಬಿದರು.

 

ಅದ್ಭುತ ವೇಷಾಲಂಕಾರದ ಮಹಿಷಾಸುರನ ಒಡೋಲಗವು ಸಭೆಯ ಮಧ್ಯದಿಂದ ಮೊದಲ್ಗೊಂಡು ಪ್ರೇಕ್ಷಕರ ಸುತ್ತ ಉದ್ದಗಲಕ್ಕೆ ದೀರ್ಘವಾಗಿ ಸಾಗಿತು. ವೇಷಧಾರಿ ಶ್ರೀ ಹರಿನಾರಾಯಣ ಭಟ್ ಎಡನೀರುರವರು ರಕ್ಕಸನ ವಿಶಿಷ್ಟ ನೃತ್ಯಾಭಿನಯ ಪ್ರದರ್ಶನ ದಿಂದ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿದರು. ದೇವೇಂದ್ರನ ಪಾತ್ರದಲ್ಲಿ ಶ್ರೀ ಮೋಹನ ಬೆಳ್ಳಿಪಾಡಿಯವರು ಆಕರ್ಷಕ ಕುಣಿತವನ್ನು ತೋರಿ ಮಿಂಚಿದರು. ಮಾಲಿನಿಯ ದೂತ ಮತ್ತು ದೇವದೂತನ ಪಾತ್ರಧಾರಿ ಶ್ರೀ ಮಹೇಶ ಮಣಿಯಾಣಿಯವರು ತಮ್ಮ ವಿಶೇಷ ಹಾಸ್ಯಪ್ರತಿಭೆಯಿಂದ ಸಭೆಯಲ್ಲಿ ನಗೆಬುಗ್ಗೆಗಳನ್ನು ಏಳಿಸಿದರು.

ಮಾಲಿನಿಯ ಪಾತ್ರಧಾರಿ ಶ್ರೀ ಪ್ರಶಾಂತ ಶೆಟ್ಟಿ ನೆಲ್ಯಾಡಿಯವರು ಸ್ತ್ರೀಸಹಜ ಹಾವಭಾವಗಳನ್ನು ಅತ್ಯುನ್ನತ ಮಟ್ಟದ ಅಭಿನಯದ ಮೂಲಕ ಪ್ರದರ್ಶಿಸಿ ವೀಕ್ಷಕರಿಂದ ಭರ್ಜರಿ ಕರತಾಡನ ಗಿಟ್ಟಿಸಿಕೊಂಡರು. ಉತ್ತರಾರ್ಧ ಭಾಗದಲ್ಲಿ ಅವರು ಅಷ್ಟಭುಜ ಶ್ರೀದೇವಿಯ ಪಾತ್ರ ಧರಿಸಿ ಸಿಂಹವಾಹನಳಾಗಿ ಕ್ರೋಧದಿಂದ ದುರುಳ ಮಹಿಷಾಸುರನನ್ನು ಸಂಹರಿಸಿದ ಪರಿ ಎಲ್ಲರ ಭಾರೀ ಮೆಚ್ಚುಗೆಗೆ ಪಾತ್ರವಾಯಿತು.

ಈ ಕಾರ್ಯಕ್ರಮದ ಎರಡು ದಿನಗಳ ಹಿಂದೆ ಸಂಜೆ ಇದೇ ತಂಡದ ಕಲಾವಿದರಿಂದ 'ಭೀಷ್ಮ ಪರ್ವ' ಎಂಬ ಪೌರಾಣಿಕ ಪ್ರಸಂಗದ ತಾಳಮದ್ದಳೆ ಕಾರ್ಯಕ್ರಮವು ಸ್ಥಳೀಯ ಸಭಾಲಯವೊಂದರಲ್ಲಿ ಉತ್ತಮವಾಗಿ ನಡೆಯಿತು. ವೃದ್ಧ ಭೀಷ್ಮಾಚಾರ್ಯರಾಗಿ ಶ್ರೀ ಎಂ. ಎಲ್. ಸಾಮಗರು ನಿರರ್ಗಳ ವಾಕ್ಷರಿಯ ಮೂಲಕ ಭೀಷ್ಮನ ಸಂಪೂರ್ಣ ಚರಿತ್ರೆಯನ್ನು ಕಣ್ಣಿಗೆ ಕಟ್ಟುವಂತೆ ಭಾವಗರ್ಭಿತವಾಗಿ ವಿಶ್ಲೇಷಿಸಿ ವಿಜೃಂಭಿಸಿದರು.

 

ಶ್ರೀ ಚಂದ್ರಶೇಖರ ಧರ್ಮಸ್ಥಳರವರು ಶ್ರೀಕೃಷ್ಣನ ಪಾತ್ರ ವಹಿಸಿ ಭೀಷ್ಮನ ಮಾರ್ಮಿಕ ಪ್ರಶ್ನಾಂಬುಗಳಿಗೆ ಸಮುಚಿತ ಪ್ರತ್ಯುತ್ತರ ನೀಡಿ ರಾರಾಜಿಸಿದರು. ಶ್ರೀಕೃಷ್ಣ ಮತ್ತು ಭೀಷ್ಮರ ಭಾವಪೂರ್ಣ ಸಂಭಾಷಣೆ ಸಭಿಕರೆಲ್ಲರ ಶ್ಲಾಘನೆಗೆ ಒಳಗಾಯಿತು. ಅರ್ಜುನ ನಾಗಿ ಶ್ರೀ ಹರಿನಾರಾಯಣ ಭಟ್ ಎಡನೀರುರವರು ಎಲ್ಲರ ಮನ ಸೆಳೆದರು. ಮೇಲಿನ ಯಕ್ಷಗಾನ ಪ್ರದರ್ಶನದ ಪ್ರಧಾನ ಕಲಾವಿದರೇ ಹಿಮ್ಮೇಳವನ್ನು ರಸವತ್ತಾಗಿ ಒದಗಿಸಿಕೊಟ್ಟು ತಾಳಮದ್ದಳೆಗೆ ಮೆರುಗನ್ನು ನೀಡಿದರು.

ಒಟ್ಟಿನಲ್ಲಿ ಪಟ್ಲ ತಂಡದವರು ತಮ್ಮ ಸುಶ್ರಾವ್ಯ ಭಾಗವತಿಕೆ, ಕರ್ಣರಂಜಿತ ಹಿಮ್ಮೇಳ, ಸಂಪ್ರದಾಯಬದ್ಧ ಕುಣಿತ, ಮನೋಜ್ಞ ಅಭಿನಯ, ಪಾತ್ರೋಚಿತ ಸಂಭಾಷಣೆ ಮತ್ತು ನಯನಮನೋಹರ ವೇಷಭೂಷಣಗಳ ಮೂಲಕ ಜಗತ್ಪಸಿದ್ದ ಯಕ್ಷಗಾನ ಕಲೆಯ ಸಂಪೂರ್ಣ ರಸಾನುಭವವನ್ನು ನೀಡಿ ನೆರೆದ ಎಲ್ಲ ಟ್ಯಾಂಪಾ ಕಲಾರಸಿಕರ ಮನವನ್ನು ಗೆದ್ದರು. ಇದು ಖಂಡಿತವಾಗಿಯೂ ಕಲಾಸ್ವಾದಕ ವೀಕ್ಷಕರ ನೆನಪಿನಲ್ಲಿ ಬಹುಕಾಲ ಉಳಿಯಬಹುದಾದ ಯಶಸ್ವಿ ಯಕ್ಷಗಾನ ಹಾಗೂ ತಾಳಮದ್ದಳೆ ಕಾರ್ಯಕ್ರಮ.