Header Ads Widget

ತಾಯಿ ಮೇಲೆಯೇ ಅತ್ಯಾಚಾರವೆಸಗಿದ ಆರೋಪಿ ಅಬಿದ್‌ಗೆ ಜೀವಾವಧಿ ಶಿಕ್ಷೆ

 


ತಾಯಿ ಮೇಲೆಯೇ ಅತ್ಯಾಚಾರವೆಸಗಿದ ವ್ಯಕ್ತಿಗೆ ಉತ್ತರಪ್ರದೇಶದ  ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು 51,000 ರೂ. ದಂಡವನ್ನು ವಿಧಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ವರುಣ್ ಮೋಹಿತ್ ನಿಗಮ್ ಅವರು ಈ ಆದೇಶ ಹೊರಡಿಸಿದ್ದಾರೆ.


ಉತ್ತರ ಪ್ರದೇಶದ ಬುಲಂದ್‌ಶಹರ್‌ನ ನಿವಾಸಿ ಅಬಿದ್ (36) ಶಿಕ್ಷೆಗೊಳಗಾಗಿರುವ ವ್ಯಕ್ತಿ. ಈತ ತನ್ನ 60 ವರ್ಷದ ವಿಧವೆ ತಾಯಿಯ ಮೇಲೆಯೇ ಅತ್ಯಾಚಾರ ಎಸಗಿದ್ದ. ಈ ಕುರಿತು ಸೋಮವಾರ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ವರುಣ್ ಮೋಹಿತ್ ನಿಗಮ್ ಅವರು ಸಂಪೂರ್ಣ ತನಿಖೆ ಬಳಿಕ ಅಬಿದ್ ನನ್ನು ತಪ್ಪಿತಸ್ಥನೆಂದು ಘೋಷಿಸಿದರು.


ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸರ್ಕಾರಿ ವಕೀಲ ವಿಜಯ್ ಶರ್ಮಾ ಅವರು, ʼʼಗೌರವಾನ್ವಿತ ನ್ಯಾಯಾಲಯ ಇಂದು ಐತಿಹಾಸಿಕ ತೀರ್ಪು ನೀಡಿದೆ. ನನ್ನ ಅನೇಕ ವರ್ಷಗಳ ನ್ಯಾಯಾಂಗ ಸೇವೆಯಲ್ಲಿ, ಸೆಕ್ಷನ್ 376 ರಂತಹ ಗಂಭೀರ ಅಪರಾಧ ಪ್ರಕರಣದಲ್ಲಿ ಮಗ ತನ್ನನ್ನು ಅತ್ಯಾಚಾರ ಮಾಡಿದ ರಾಕ್ಷಸ ಎಂದು ಅಳುತ್ತಾ ಹೇಳಿದ ತಾಯಿಯನ್ನು ನೋಡಿದ್ದು, ಕೇಳಿದ್ದು ಇದೇ ಮೊದಲು. ಈ ಪ್ರಕರಣದ ಬಗ್ಗೆ ನ್ಯಾಯಾಲಯವು 20 ತಿಂಗಳೊಳಗೆ ವಿಚಾರಣೆ ಪೂರ್ಣಗೊಳಿಸಿ ಪ್ರಕರಣವನ್ನು ವಿಲೇವಾರಿ ದಾಖಲೆ ಮಾಡಿದೆʼʼ ಎಂದು ತಿಳಿಸಿದರು.


ಬುಲಂದ್‌ಶಹರ್‌ನ ಹಳ್ಳಿಯೊಂದರಲ್ಲಿ 2023ರ ಜನವರಿ 16ರಂದು ಈ ಘಟನೆ ನಡೆದಿತ್ತು. ಎಫ್‌ಐಆರ್‌ ಪ್ರಕಾರ ಕೃಷಿ ಜಮೀನಿಗೆ ಅಬಿದ್‌ ಜೊತೆ ಜತೆ ಜಾನುವಾರುಗಳಿಗೆ ಮೇವು ತರಲು ಹೋಗಿದ್ದ ತಾಯಿ ಮೇಲೆ ಅಬಿದ್ ಅತ್ಯಾಚಾರ ನಡೆಸಿದ್ದ. ಗಂಡ ಮರಣ ಹೊಂದಿದ್ದ. ಆ ಬಳಿಕ ಮಗ ತನ್ನ ಜತೆ ಹೆಂಡತಿಯಂತೆ ಇರಬೇಕೆಂದು ಒತ್ತಾಯಿಸಿ ಅತ್ಯಾಚಾರ ಎಸಗಿದ ಎಂದು ಸಂತ್ರಸ್ತ ಮಹಿಳೆ ಹೇಳಿದ್ದಳು.


ಅಬಿದ್‌ನ ಕಿರಿಯ ಸಹೋದರರಾದ ಯೂಸುಫ್ ಮತ್ತು ಜಾವೇದ್ ಬಳಿ ಸಂತ್ರಸ್ತ ತಾಯಿ ತನ್ನ ಸಂಕಟವನ್ನು ಹಂಚಿಕೊಂಡ ಅನಂತರ ಅವರು ಆಕೆಯನ್ನು ಕರೆದುಕೊಂಡು ಹೋಗಿ ಪೊಲೀಸರಿಗೆ ದೂರು ನೀಡಿದ್ದರು. ಅಬಿದ್ ಅತ್ಯಾಚಾರ ನಡೆಸಿದ ಬಗ್ಗೆ ತಾಯಿ ನಮಗೆ ಮಾಹಿತಿಯನ್ನು ನೀಡಿದರು. 


ನಾವು ಕುಟುಂಬದೊಳಗಿನ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಿದೆವು. ಆದರೆ ಅಬಿದ್ ತಾಯಿಗೆ ತನ್ನ ಹೆಂಡತಿಯಾಗಿ ಬದುಕುವಂತೆ ಬೆದರಿಕೆ ಹಾಕುತ್ತಲೇ ಇದ್ದ. ಹೀಗಾಗಿ ಎಫ್‌ಐಆರ್ ದಾಖಲಿಸಬೇಕಾಯಿತು ಎಂದು ಅಬಿದ್ ಸಹೋದರರು ಸುದ್ದಿಗಾರರಿಗೆ ತಿಳಿಸಿದ್ದರು.


2023ರ ಜನವರಿ 21ರಂದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 ಮತ್ತು 506 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದು, ಜನವರಿ 22 ರಂದು ಅಬಿದ್‌ನನ್ನು ಬಂಧಿಸಲಾಗಿತ್ತು.