ಉಡುಪಿ: ಪ್ರತಿಯೊಂದು ದೇವಾಲಯಗಳಿಗೂ ಮಾರ್ಗದರ್ಶಕ ಮಂಡಳಿ ರಚಿಸಬೇಕು. ಮಠ, ಮಂದಿರಗಳನ್ನು ರಾಜಕೀಯ ಹಸ್ತಕ್ಷೇಪದಿಂದ ಮುಕ್ತಗೊಳಿಸಬೇಕು. ಧರ್ಮ ಪರಿಪಾಲನೆಯ ವಿಷಯದಲ್ಲಿ ಹಿಂದೂಗಳೆಲ್ಲಾ ಒಗ್ಗಟ್ಟಾಗಬೇಕು ಎಂದು ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ಆಶಿಸಿದರು.
ವಿಶ್ವ ಹಿಂದೂ ಪರಿಷತ್ ಉಡುಪಿ ವತಿಯಿಂದ ನಗರದ ಬನ್ನಂಜೆ ನಾರಾಯಣಗುರು ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಷಷ್ಠಿಪೂರ್ತಿ ಸಮ್ಮೇಳನದಲ್ಲಿ ಮಾತನಾಡಿದರು.
ತಿರುಪತಿಯ ಲಡ್ಡು ಪ್ರಸಾದದಲ್ಲಿ ಪ್ರಾಣಿಜನ್ಯ ಕೊಬ್ಬಿನ ಅಂಶ ಸೇರಿದೆ ಎಂಬ ವಿಚಾರ ಆಘಾತಕಾರಿ. ಮಠ, ಮಂದಿರಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದರಿಂದ ಇಂಥ ಅನಾಹುತವಾಗಿದೆ ಎಂದವರು ಉದಾಹರಿಸಿದರು.
ನಾವು ಎಲ್ಲರನ್ನೂ ಸಹೋದರ ಭಾವನೆಯಿಂದ ನೋಡಬೇಕು. ನಮ್ಮ ಆಚರಣೆ ಇನ್ನೊಬ್ಬರಿಗೆ ಹಿಂಸೆಯಾಗಬಾರದು. ಪ್ರತಿಯೊಬ್ಬರೂ ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎಂದು ಭಂಡಾರಕೇರಿ ಶ್ರೀಗಳು ಪ್ರತಿಪಾದಿಸಿದರು.
ವಿಶ್ವವನ್ನು ಒಂದುಗೂಡಿಸುವ ಶಕ್ತಿ ಹಿಂದೂ ಧರ್ಮಕ್ಕಿದೆ. ಹಿಂದುತ್ವ ಕೇವಲ ದೇಶದ ಧರ್ಮವಲ್ಲ. ವಿಶ್ವದ ಮನೋಧರ್ಮವಾಗಬೇಕು. ಅದಕ್ಕಾಗಿ ನಾವೆಲ್ಲರೂ ಶ್ರಮಿಸಬೇಕು ಎಂದರು.
ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಮಾತನಾಡಿ, ಇಂದಿನ ಪರಿಸ್ಥಿತಿಯಲ್ಲಿ ಹಿಂದೂ ಸಮಾಜದವರೆಲ್ಲರೂ ಒಗ್ಗೂಡಬೇಕಾದ ಅನಿವಾರ್ಯತೆ ಇದೆ ಎಂದರು.
ಭಾವಿ ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.
ವಿ.ಹಿಂ.ಪ ಕರ್ನಾಟಕ ಮಂದಿದ ಅರ್ಚಕ ಮತ್ತು ಪುರೋಹಿತ್ ಪ್ರಮುಖ್ ಬಸವರಾಜ್ ದಿಕ್ಸೂಚಿ ಭಾಷಣ ಮಾಡಿದರು. ಕೊಡವೂರು ಶ್ರೀ ಶಂಕರನಾರಾಯಣ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್, ಕೊಳಲು ವಾದಕ ಪಾಂಡು ಪಾಣಾರ, ವಿ.ಹಿಂ.ಪ ವಿಭಾಗ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಕಾರ್ಕಳ, ನಗರ ಅಧ್ಯಕ್ಷ ರಾಕೇಶ್ ಮಲ್ಪೆ, ನಗರ ಕಾರ್ಯದರ್ಶಿ ಲೋಕೇಶ್ ಶೆಟ್ಟಿಗಾರ್ ಉಪಸ್ಥಿತರಿದ್ದರು.
ವಿಹಿಂಪ ಜಿಲ್ಲಾ ಘಟಕ ಅಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ ಸ್ವಾಗತಿಸಿ, ಬಜರಂಗದಳದ ಪ್ರಾಣೇಶ ಪರ್ಕಳ ವಂದಿಸಿದರು. ಮಾತೃಶಕ್ತಿ ಪ್ರಮುಖ್ ಪೂರ್ಣಿಮಾ ಸುರೇಶ್ ನಿರೂಪಿಸಿದರು. ಶ್ರೀಹರಿ ಉಡುಪಿ ಪ್ರಾರ್ಥಿಸಿದರು