ದಿನಾಂಕ 25-09-2024 ರಂದು ಮಲ್ಪೆ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಉಡುಪಿ ನಗರ ವ್ಯಾಪ್ತಿಯಲ್ಲಿ ಸಂಚರಿಸುವ ಖಾಸಗಿ ಬಸ್ ಮಾಲಕರ ಸಭೆಯನ್ನು ನಡೆಸಲಾಗಿದೆ. ಸಭೆಯಲ್ಲಿ ಉಡುಪಿ ನಗರ ವ್ಯಾಪ್ತಿಯಲ್ಲಿ ಸಂಚರಿಸುವ ವಿವಿಧ ಖಾಸಗಿ ಬಸ್ ಗಳ ಮಾಲಕರು ಮತ್ತು ಮ್ಯಾನೇಜರ್ ಗಳು ಹಾಜರಿದ್ದು, ದಿನಾಂಕ 31-10-2024ರ ಒಳಗಾಗಿ ಎಲ್ಲಾ ಖಾಸಗಿ ಬಸ್ ಗಳಿಗೆ ಕಡ್ಡಾಯವಾಗಿ ಬಾಗಿಲು ಅಳವಡಿಸುವಂತೆ, ಯಾವುದೇ ಕಾರಣಕ್ಕೂ ಪ್ರಯಾಣಿಕರು ಪುಟ್ ಬೋರ್ಡ್‌ನಲ್ಲಿ ಪ್ರಯಾಣಕ್ಕೆ ಅವಕಾಶ ನೀಡದಂತೆ, ಬಸ್ಸುಗಳಲ್ಲಿ ಕರ್ಕಶ ಹಾರ್ನ್ ಗಳನ್ನು ತೆರವುಗೊಳಿಸುವಂತೆ ಮತ್ತು ಚಾಲಕರು ಚಾಲನೆಯ ವೇಳೆ ಮೊಬೈಲ್ ಫೋನ್ ಬಳಸದಂತೆ ಸೂಚನೆ ನೀಡಲಾಯಿತು. ಅಲ್ಲದೇ ಬಸ್ ಗಲ್ಲಿ ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ಸಿ.ಸಿ ಕ್ಯಾಮೆರಾ ಅಳವಡಿಸುವಂತೆ, ಮಹಿಳೆಯರು ಮತ್ತು ಮಕ್ಕಳೊಂದಿಗೆ ಬಸ್ಸಿನ ಚಾಲಕ ಮತ್ತು ಕಂಡೆಕ್ಟರ್ ಗೌರವಯುತವಾಗಿ ನಡೆದುಕೊಳ್ಳುವಂತೆ ಹಾಗೂ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆಗಳನ್ನು ನೀಡಲಾಯಿತು.
ಸಭೆಯಲ್ಲಿ ಉಡುಪಿ ಡಿವೈಎಸ್‌ಪಿ ಡಿ.ಟಿ ಪ್ರಭು , ಪ್ರೊಬೇಶನರಿ ಡಿವೈಎಸ್‌ಪಿ ಕುಮಾರಿ ಗೀತಾ ಪಾಟೀಲ್, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಯವರಾದ ಎಲ್.ಪಿ ನಾಯ್ಕ್, ಮೋಟಾರು ವಾಹನ ನಿರೀಕ್ಷಕರಾದ ಮಾರುತಿ ನಾಯ್ಕ್, ಮಲ್ಪೆ ವೃತ್ತ ನಿರೀಕ್ಷಕರಾದ ಮಂಜುನಾಥ್ ಎಮ್ ಮತ್ತು ಉಡುಪಿ ಸಂಚಾರ ಪೊಲೀಸ್ ಠಾಣಾ ಪಿಎಸ್‌ಐ ಸುದರ್ಶನ್ ದೊಡ್ಡಮನಿಯವರು ಹಾಜರಿದ್ದರು.