Header Ads Widget

ಪ್ರೀತಿಯ ಹೆಸರಲ್ಲಿ ಮತಾಂತರ ಯತ್ನ ಖಂಡನೀಯ ~ಗೀತಾಂಜಲಿ ಎಂ. ಸುವರ್ಣ


ಉಡುಪಿ: ಪ್ರೀತಿಯ ಹೆಸರಿನಲ್ಲಿ ಹಿಂದೂ ಯುವತಿಯರನ್ನು ಇಸ್ಲಾಂ ಧರ್ಮಕ್ಕೆ ಬಲವಂತದ ಮತಾಂತರ ಯತ್ನ ಖಂಡನೀಯ ಎಂದು ಜಿ. ಪಂ. ಮಾಜಿ ಸದಸ್ಯೆ ಹಾಗೂ ಬಿಜೆಪಿ ಜಿಲ್ಲಾ ವಕ್ತಾರೆ ಗೀತಾಂಜಲಿ ಎಂ. ಸುವರ್ಣ ತಿಳಿಸಿದ್ದಾರೆ.

ಮಾದ್ಯಮ ಹೇಳಿಕೆ ನೀಡಿರುವ ಅವರು, ಜಿಲ್ಲೆಯ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನ ವೈದ್ಯ ವಿದ್ಯಾರ್ಥಿನಿ ಇಸ್ಲಾಮಿಗೆ ಮತಾಂತರವಾಗುವಂತೆ ಸಹಪಾಠಿ ವೈದ್ಯ ಕಿರುಕುಳ ನೀಡಿರುವ ಪ್ರಕರಣವನ್ನು ಎನ್.ಐ.ಎಗೆ ವಹಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಎಂಬಿಬಿಎಸ್ ಶಿಕ್ಷಣ ಪಡೆಯುತ್ತಿರುವ ಹೊರ ರಾಜ್ಯದ ಹಿಂದೂ ವಿದ್ಯಾರ್ಥಿನಿಗೆ, ಅದೇ ಕಾಲೇಜಿನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ವೈದ್ಯ ಮಹಮ್ಮದ್ ಡ್ಯಾನಿಶ್ ಖಾನ್, ಇಸ್ಲಾಂಗೆ ಮತಾಂತರವಾಗುವಂತೆ ಕಿರುಕುಳ ನೀಡಿದ್ದಾನೆ ಎಂದು ಯುವತಿ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಯನ್ನು ಬಂಧಿಸಿರುವ ಪೊಲೀಸರ ಕೃತ್ಯ ಶ್ಲಾಘನೀಯ.

ಹಿಂದೂ ಹೆಣ್ಣುಮಕ್ಕಳನ್ನು ಗುರಿಯಾಗಿಸಿಕೊಂಡು ಪ್ರೀತಿಯ ಹೆಸರಿನಲ್ಲಿ ಮತಾಂತರ ಮಾಡುವ ವ್ಯವಸ್ಥಿತ ಸಂಚು ನಡೆಯುತ್ತಿದೆ. ಈ ರೀತಿ ಮತಾಂತರಕ್ಕೆ ಒಳಗಾದ ಹೆಣ್ಣು ಮಕ್ಕಳನ್ನು ರಾಷ್ಟ್ರ ವಿರೋಧಿ ಚಟುವಟಿಕೆಗೆ ಬಳಸಿರುವುದು ಅನೇಕ ಪ್ರಕರಣಗಳಲ್ಲಿ ಬೆಳಕಿಗೆ ಬಂದಿದೆ. ಹೀಗಾಗಿ ಈ ಪ್ರಕರಣದಲ್ಲಿಯೂ ಇದೇ ರೀತಿಯ ಸಂಚು, ರಾಷ್ಟ್ರ ವಿರೋಧಿ ಸಂಘಟನೆಯ ಕೈವಾಡ ಇರುವ ಬಗ್ಗೆ ಅನುಮಾನವಿದೆ. ಆದ್ದರಿಂದ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ)ಕ್ಕೆ ವಹಿಸಬೇಕೆಂದು ಗೀತಾಂಜಲಿ ಸುವರ್ಣ ಆಗ್ರಹಿಸಿದ್ದಾರೆ.