ಹದಿನಾಲ್ಕು ಲೋಕಗಳೆಂದು ಒಂದು ತಿಳಿವಳಿಕೆ. ಅದರಂತೆ ಏಳು + ಏಳು ಲೋಕಗಳು.ಲೋಕಗಳ ಎಣಿಕೆ.ಭುವನ ,ಅತಳ ,ವಿತಳ ..ಇತ್ಯಾದಿ. ಚತುರ್ದಶ ವಿದ್ಯೆ : ನಾಲ್ಕು ವೇದ , ಆರು ವೇದಾಂಗ ,ಧರ್ಮ ಶಾಸ್ತ್ರ ,ಪುರಾಣ ನ್ಯಾಯ, ಮೀಮಾಂಸೆ. ಚತುರ್ದಶ ರತ್ನ : ಲಕ್ಷ್ಮೀ ,ಕೌಸ್ತುಭ, ಪಾರಿಜಾತ, ಸುರಾ, ಧನ್ವಂತರಿ, ಚಂದ್ರಮ , ಐರಾವತ, ಉಚ್ಚೈಃಶ್ರವ, ಶಂಖ ,ಹರಿ ಧನುಸ್ಸು,ಅಪ್ಸರೆ, ವಿಷ,ಅಮೃತ,ಕಾಮಧೇನು.ಹೀಗೆ ಹದಿನಾಲ್ಕರ ನಿರೂಪಣೆಗಳಿವೆ.
|ಪೂಜಾ ಕಲ್ಪನೆ|: ಕ್ಷೀರಸಾಗರದಲ್ಲಿ ಮಹಾಶೇಷನ ಮೇಲೆ ಮಲಗಿರುವ ಶ್ರೀಮನ್ನಾರಾಯಣ' ಈ ನೋಟ ಅಥವಾ ದೃಶ್ಯದ ಯಥಾವತ್ತಾದ ಪರಿಕಲ್ಪನೆ - ಅನುಸಂಧಾನದೊಂದಿಗೆ ನೆರವೇರುವ ಉಪಾಸನೆಯೇ 'ಶ್ರೀಮದನಂತವ್ರತ' , 'ಅನಂತವ್ರತ, ಅಥವಾ 'ನೋಂಪು'. ಭಾದ್ರಪದ ಶುದ್ಧ ಚತುರ್ದಶಿ ತಿಥಿಯಲ್ಲಿ 'ಅನಂತ ಚತುರ್ದಶಿ' ಆಚರಣೆ .ಇದು ವ್ರತವಾಗಿ ನೆರವೇರುತ್ತದೆ .
ಕ್ಷೀರ ಸಾಗರವನ್ನು ಸಾಂಕೇತಿಸುವ ಜಲ ಪೂರಿತ ಕಲಶ . ಅದರ ಮೇಲೆ ದರ್ಭೆಯಿಂದ ನಿರ್ಮಿಸಿರುವ ಏಳು ಹೆಡೆಯುಳ್ಳ ಶೇಷಾ ಕೃತಿ . ಈ ಶೇಷಾಕೃತಿಯ ಮೇಲೆ ಶಾಲಗ್ರಾಮ .
ಈ ಕಲ್ಪನೆಯಲ್ಲಿ ಅನಂತನಾಮಕನಾದ ಶೇಷನ ಮೇಲೆ ಶಯನ ಮಾಡಿದ ಅನಂತಪದ್ಮನಾಭನ ಚಿಂತನೆಯೊಂದಿಗೆ ಆರಾಧನೆ ನೆರವೇರುವುದು .ವೈಕುಂಠವನ್ನೆ ಸಾಕಾರ ಗೊಳಿಸುವ , ವಾಸ್ತವದ ಸ್ಥಾಪನೆಯಾಗಿ ವ್ರತ ನಡೆಯುವುದು . ಲೌಕಿಕದಲ್ಲಿ ಅಲೌಕಿಕವನ್ನು ನಿರ್ಮಿಸುವ ವೈದಿಕದ ಉಪಾಸನಾ ವಿಧಾನ ಅದ್ಭುತ .
ಹದಿನಾಲ್ಕು ಗಂಟುಗಳುಳ್ಳ ಕೆಂಪು ಬಣ್ಣದ "ದಾರ ಅಥವಾ ದೋರ"ವನ್ನು ಪ್ರತಿಷ್ಠಾಪಿತ ಕಲಶದಲ್ಲಿ ಪ್ರಧಾನ ಪೂಜಾಕಾಲದಲ್ಲಿ ಇರಿಸಿ ಪೂಜಾನಂತರದಲ್ಲಿ ಧರಿಸಿಕೊಳ್ಳುವುದು ಅನಂತವ್ರತದ ಮುಖ್ಯ ಅಂಗ .ಪುರುಷರಾದರೆ ಬಲಕೈಯ ತೋಳಿನಲ್ಲಿ , ಸ್ತ್ರೀಯರಾದರೆ ಎಡಕೈಯ ತೋಳಿನಲ್ಲಿ ಕಟ್ಟಿಕೊಳ್ಳುವುದು ಸಂಪ್ರದಾಯ .
ಪೂಜೆ - ದೋರ ಬಂಧನ: ಶ್ರೀಮದನಂತವ್ರತ ಕಲ್ಪೋಕ್ತ ಪೂಜಾವಿಧಿಯು ಹಂತಹಂತವಾಗಿ ಸಂಪನ್ನಗೊಳ್ಳುತ್ತದೆ. ಯಮುನಾ ಪೂಜೆ , ಅಂಗಪೂಜೆ , ಪತ್ರಪೂಜೆ , ಪುಷ್ಪಪೂಜೆ , ನಾಮಪೂಜೆ , ಧೂಪದೀಪಾದಿ ಸಮರ್ಪಣೆ .ಕಲಶಸ್ಥಾಪನೆ , ಶೇಷ ಪೂಜೆ , ಧ್ಯಾನಾವಾಹನಾದಿ , ಅಭಿಷೇಕ , ವಸ್ತ್ರಯುಗ್ಮ ಸಮರ್ಪಣೆ , ಅಂಗಪೂಜೆ ಅನಂತಪೂಜೆ , ಧ್ಯಾನಮ್ , ಮಂಟಪ ಧ್ಯಾನಮ್ ,ಪೀಠಪೂಜೆ , ನವಶಕ್ತಿಪೂಜೆ , ಆವಾಹನಮ್ , ನವದೋರ ಸ್ಥಾಪನೆ ,ಷೋಡಶೋಪಚಾರ ಪೂಜೆ , ಅಂಗಪೂಜೆ , ಡಶಾವರಣ ಪೂಜೆ ,ಶಕ್ತಿಪೂಜೆ ,ದೋರಪೂಜೆ, ಪತ್ರಪೂಜೆ, ಪುಷ್ಪಪೂಜೆ ,ಅಷ್ಟೋತ್ತರನಪೂಜೆ , ಧೂಪದೀಪ ನೈವೇದ್ಯ, ಫಲನಿವೇದನೆ , ನೀರಾಜನ , ಪ್ರಸನ್ನಾರ್ಘ್ಯ, ಪ್ರದಕ್ಷಿಣ ನಮಸ್ಕಾರ, ಪ್ರಾರ್ಥನೆ, ದೋರಪ್ರಾರ್ಥನೆ , ದೋರನಮಸ್ಕಾರ - ಬಂಧನ , ಜೀರ್ಣದೋರ ವಿಸರ್ಜನೆ ,
ಉಪಾಯನದಾನಮ್ ,...........ಉದ್ವಾಸನ , ಕ್ಷಮಾಪಣ , ಸಮಾಪನ . ಹೀಗೆ ವಿವಿಧ ಹಂತಗಳಲ್ಲಿ ಪೂಜೆ ನೆರವೇರಿ ಒಂದು ಭಕ್ತಿ ಭಾವದ ವ್ರತಾಚಾರಣೆಯ ಸಾರ್ಥಕತೆ ಸನ್ನಿಹಿತವಾಗುತ್ತದೆ. ಜಲಸಂಗ್ರಹ - ಯಮುನಾಪೂಜೆಯಿಂದ ಕಲಶ ಪ್ರತಿಷ್ಠೆ , ಶೇಷ ಕಲ್ಪನೆ , ಮತ್ತೆ ಶಾಲಗ್ರಾಮ ಸ್ಥಾಪನೆಯ ಚಿಂತನೆ ಬಳಿಕ ದೋರದ ಮಹತ್ವ - ಧಾರಣೆ . ಇವು ಅನಂತವ್ರತದಲ್ಲಿ ವ್ಯಕ್ತವಾಗುವ ಮುಖ್ಯ ಅಂಶಗಳು. (ಸಂಗ್ರಹ) ~ಕೆ.ಎಲ್.ಕುಂಡಂತಾಯ.