Header Ads Widget

ಸಿದ್ಧಾಪುರದಲ್ಲಿ ಎನ್.ಎಸ್.ಎಸ್. ಶಿಬಿರ ಕೆ.ಎಂ.ಸಿ. ಮಣಿಪಾಲದ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಂದ ಎನ್.ಎಸ್.ಎಸ್. ಶಿಬಿರ

ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ತಂಡ, ಕಸ್ತೂರ್ಬಾ ಮೆಡಿಕಲ್ ಕಾಲೇಜ್, ಸಮುದಾಯ ವೈದ್ಯಕೀಯ ವಿಭಾಗ, ಕೆ.ಎಂ.ಸಿ. ಮಣಿಪಾಲ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ, ಸಿದ್ಧಾಪುರ ಮತ್ತು ರೋಟರಿ ಕ್ಲಬ್ ಸಿದ್ಧಾಪುರ-ಹೊಸಂಗಡಿ ಇವರ ಸಹಯೋಗದೊಂದಿಗೆ ಸಿದ್ಧಾಪುರದಲ್ಲಿ ಎರಡು ದಿನಗಳ ಕಾಲ ಎನ್.ಎಸ್.ಎಸ್. ಶಿಬಿರವನ್ನು ಏರ್ಪಡಿಸಲಾಯಿತು. ಶಿಬಿರದಲ್ಲಿ ಮೊದಲ ದಿನ ಸರ್ಕಾರಿ ಪ್ರೌಢಶಾಲೆ, ಸಿದ್ಧಾಪುರ ಹಾಗೂ ಇಂದಿರಾ ಗಾಂಧಿ ವಸತಿ ಶಾಲೆ ಸಿದ್ಧಾಪುರ ಇಲ್ಲಿನ ವಿದ್ಯಾರ್ಥಿಗಳಿಗೆ ಯೋಗ ಮತ್ತು ಪ್ರಾಣಾಯಾಮ ತರಬೇತಿ ಹಾಗೂ ಕಲೆ-ಕರಕುಶಲ ತರಬೇತಿ ನೀಡಲಾಯಿತು. ತರುವಾಯ ಸಿದ್ಧಾಪುರ ಬಸ್ ನಿಲ್ದಾಣದಲ್ಲಿ ಕಾಲೆರಾ ಹಾಗೂ ಇತರ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸುವ ಕುರಿತು ಜನರಿಗೆ ಅರಿವು ಮೂಡಿಸಲು ಬೀದಿ ನಾಟಕವನ್ನು ನಡೆಸಲಾಯಿತು. ಎರಡನೇ ದಿನದ ಶಿಬಿರದಲ್ಲಿ ಶಂಕರನಾರಾಯಣ ಹಾಗೂ ಅಮಾಸೆಬೈಲು ಪೊಲೀಸ್ ಸಿಬ್ಬಂದಿಗಳಿಗೆ ಮತ್ತು ಆ ಭಾಗದ ಆಶಾ ಕಾರ್ಯಕರ್ತೆಯರಿಗೆ ಬಿ.ಎಲ್.ಎಸ್. (ಬೇಸಿಕ್ ಲೈಫ್ ಸಪೋರ್ಟ್) ಕುರಿತು ಕಾರ್ಯಗಾರ ನಡೆಸಲಾಯಿತು. ಆಟೋ ಚಾಲಕರಿಗೆ ಪ್ರಥಮ ಚಿಕಿತ್ಸೆಯ ಕುರಿತು ಮತ್ತು ಮಕ್ಕಳಿಗೆ ಡಿಜಿಟಲ್ ಜಾಗೃತಿ ಕುರಿತು ಕಾರ್ಯಗಾರ ನಡೆಸಲಾಯಿತು. ಶಿಬಿರದಲ್ಲಿ ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ. ಅಶ್ವಿನಿ ಕುಮಾರ್, ಎನ್.ಎಸ್.ಎಸ್. ಸಂಯೋಜಕರಾದ ಡಾ. ಚಾಂದಿನಿ, ನಿಕಟಪೂರ್ವ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಯಾದ ಡಾ. ನಾಗಭೂಷಣ ಉಡುಪ ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು. ಶಿಬಿರದಲ್ಲಿ ೪೦೦ ಶಾಲಾ ವಿದ್ಯಾರ್ಥಿಗಳು, ೨೪ ಪೊಲೀಸ್ ಇಲಾಖೆ ಸಿಬ್ಬಂದಿಗಳು, ೪೪ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಸ್ಥಳೀಯ ರಿಕ್ಷಾ ಚಾಲಕರು ಭಾಗವಹಿಸಿದ್ದರು. ಶಿಬಿರದಲ್ಲಿ ೫೦ ವೈದ್ಯಕೀಯ ವಿದ್ಯಾರ್ಥಿಗಳು ಎನ್.ಎಸ್.ಎಸ್. ಶಿಬಿರಾರ್ಥಿಗಳಾಗಿ ಭಾಗವಹಿಸಿದ್ದರು. ಇವರೊಂದಿಗೆ ಸಮುದಾಯ ವೈದ್ಯಕೀಯ ವಿಭಾಗದ ಏಳು ವೈದ್ಯರು ಮತ್ತು ಸಮಾಜ ಸೇವಕರು ಹಾಗೂ ಎಮರ್ಜೆನ್ಸಿ ಮೆಡಿಸಿನ್ ವಿಭಾಗದ ತಂತ್ರಜ್ಞರು ಸಹಕಾರ ನೀಡಿದರು.