ದಾರಿತಪ್ಪಿಸುವಂತ ಜಾಹೀರಾತು ನೀಡಿದ್ದಕ್ಕೆ ಸುಪ್ರೀಂ ಕೋರ್ಟ್‌ನಿಂದ ತೀವ್ರ ಛೀಮಾರಿ ಹಾಕಿಸಿಕೊಂಡಿದ್ದ ಬಾಬಾ ರಾಮ್‌ದೇವ್ ಹಾಗೂ ಪತಂಜಲಿ ಕಂಪನಿ ಇನ್ನೊಂದು ದೊಡ್ಡ ವಿವಾದದಲ್ಲಿ ಸಿಲುಕಿಕೊಂಡಿದೆ. ಪತಂಜಲಿ ಅಯುರ್ವೇದ ಕಂಪನಿಯ ವಿರುದ್ದ ದೆಹಲಿ ಹೈಕೋರ್ಟ್‌ನಲ್ಲಿ ಹೊಸ ಅರ್ಜಿ ದಾಖಲಾಗಿದೆ. ಪತಂಜಲಿ ಕಂಪನಿ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ದಿವ್ಯ ಮಂಜನ್ ಹಲ್ಲಿನ ಪುಡಿಯ ಮೇಲೆ ಸಸ್ಯಹಾರ ಎಂದು ನಮೂದು ಮಾಡಲಾಗಿದೆ. ಸಸ್ಯಹಾರ ಎಂದು ಗುರುತಿಸುವ ಹಸಿರು ಬಣ್ಣದ ಚುಕ್ಕಿ ಇದೆ. ಆದರೆ, ಈ ಉತ್ಪನ್ನದಲ್ಲಿ ಮಾಂಸಾಹಾರವನ್ನು ಬಳಸಲಾಗಿದೆ ಎಂದು ಆರೋಪ ಮಾಡಲಾಗಿದೆ. ದಿಲ್ಲಿ ಹೈಕೋರ್ಟ್‌ಗೆ ಅರ್ಜಿ ದಾಖಲು ಮಾಡಿದ ಬೆನ್ನಲ್ಲಿಯೇ ಪತಂಜಲಿ ಆಯುರ್ವೇದ ಹಾಗೂ ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಸಸ್ಯಾಹಾರಿ ಮತ್ತು ಸಸ್ಯಾಧಾರಿತ ಆಯುರ್ವೇದ ಉತ್ಪನ್ನವಾಗಿ ಪ್ರಚಾರದ ಕಾರಣದಿಂದ 'ದಿವ್ಯ ಮಂಜನ್' ಅನ್ನು ದೀರ್ಘಕಾಲದವರೆಗೆ ಬಳಸಿದ್ದೇನೆ ಎಂದು ಅರ್ಜಿದಾರರು ಹೇಳಿಕೊಂಡಿದ್ದಾರೆ. ಆದಾಗ್ಯೂ, ಉತ್ಪನ್ನವು ಮೀನಿನ ಸಾರದಿಂದ ಪಡೆದ ಸಮುದ್ರಫೆನ್ (ಸೆಪಿಯಾ ಅಫಿಷಿನಾಲಿಸ್) ಅನ್ನು ಹೊಂದಿದೆ ಎಂದು ಇತ್ತೀಚಿನ ಸಂಶೋಧನೆಯು ಬಹಿರಂಗಪಡಿಸಿದೆ.
ವಕೀಲ ಯತಿನ್ ಶರ್ಮಾ ಅವರು ಸಲ್ಲಿಸಿದ ಅರ್ಜಿಯಲ್ಲಿ, ಪತಂಜಲಿಯ ದಿವ್ಯ ಮಂಜನ್ ಪ್ಯಾಕೇಜಿಂಗ್ ಸಸ್ಯಾಹಾರಿ ಉತ್ಪನ್ನಗಳನ್ನು ಸೂಚಿಸುವ ಹಸಿರು ಚುಕ್ಕೆಯನ್ನು ಹೊಂದಿದೆ ಎಂದು ಆರೋಪಿಸಿದೆ, ಆದರೂ ಪದಾರ್ಥಗಳ ಪಟ್ಟಿಯು ಹಲ್ಲಿನ ಪುಡಿಯಲ್ಲಿ ಸೆಪಿಯಾ ಅಫಿಷಿನಾಲಿಸ್ ಇದೆ ಎಂದು ಸ್ಪಷ್ಟವಾಗಿ ತೋರಿಸುತ್ತದೆ.
ಇದು ಮಿಸ್ ಬ್ರ್ಯಾಂಡಿಂಗ್ ಮತ್ತು ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ವಾದ ಮಾಡಿದ್ದಾರೆ. ಅವರ ಧಾರ್ಮಿಕ ನಂಬಿಕೆಗಳು ಮಾಂಸಾಹಾರಿ ಪದಾರ್ಥಗಳ ಸೇವನೆಯನ್ನು ನಿಷೇಧಿಸಿರುವುದರಿಂದ ಈ ಸಂಶೋಧನೆಯು ತನಗೆ ಮತ್ತು ಅವರ ಕುಟುಂಬಕ್ಕೆ ವಿಶೇಷವಾಗಿ ಬೇಸರ ತಂದಿದೆ ಎಂದು ಶರ್ಮಾ ಹೇಳಿದ್ದಾರೆ. 'ದಿವ್ಯ ಮಂಜನ್' ನಲ್ಲಿ ಸಮುದ್ರಫೆನ್ ಎನ್ನುವ ಪ್ರಾಣಿ ಆಧಾರಿತ ಉತ್ಪನ್ನ ಹೊಂದಿದೆ ಎಂದು ರಾಮ್‌ದೇವ್ ಸ್ವತಃ ಯೂಟ್ಯೂಬ್ ವೀಡಿಯೊದಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ದೆಹಲಿ ಪೊಲೀಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ), ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ ಮತ್ತು ಆಯುಷ್ ಸಚಿವಾಲಯ ಸೇರಿದಂತೆ ವಿವಿಧ ಸರ್ಕಾರಿ ಏಜೆನ್ಸಿಗಳಿಗೆ ದೂರು ಸಲ್ಲಿಸಿದ್ದರೂ ಸಹ, ಅರ್ಜಿದಾರರು ಹೀಗೆ ಹೇಳಿದ್ದಾರೆ. ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.