Header Ads Widget

ಹೃದ್ಯವಾದ ಚಿತ್ರ ವೀಣಾ -ಕೊಳಲುವಾದನ ಕಛೇರಿ.

ಉಡುಪಿಯ ರಾಗ ಧನ ಸಂಸ್ಥೆಯು ಹಮ್ಮಿಕೊಂಡಿರುವ ರಾಗರತ್ನ ಮಾಲಿಕೆ -28ನೇ ಕಾರ್ಯಕ್ರಮ 14 .9. 2024 ರಂದು ಮಣಿಪಾಲದ ಮಣಿಪಾಲ್ ಡಾಟ್ ನೆಟ್ ಸಭಾಂಗಣದಲ್ಲಿ ನಡೆಯಿತು. 

ಒಂದು ಹೃದ್ಯವಾದ ಕೊಳಲಿನ ತುತ್ತುಕಾರದೊಂದಿಗೆ ಮೃದುವಾದ ಚಿತ್ರವೀಣೆಯ ಉಲಿತ; ಉಡುಪಿ ಮಣಿಪಾಲದ ಸಂಗೀತಾ ಸಕ್ತರಿಗೆ ತುಂಬು ಸಂತಸವನ್ನು ನೀಡಿದವರು ಚಿತ್ರವೀಣಾ ಗಣೇಶ್ ಚೆನ್ನೈ ಮತ್ತು ಕೊಳಲಿನಲ್ಲಿ ಡಾ. ವಿಜಯ ಗೋಪಾಲ್ ಚೆನ್ನೈ. ಎರಡು ಬೇರೆ ಬೇರೆ ವಾದ್ಯಗಳ ಮಾಧುರ್ಯದ ಅಂಶಗಳನ್ನು ಹದವಾಗಿ ಬೆರೆಸಿ ನೀಡಿದ ಈ ಜೋಡಿ ಸಭಿಕರನ್ನು ಅಕ್ಷರಶಃ ಸಂಮೋಹನಗೊಳಿಸುವಲ್ಲಿ ಯಶಸ್ವಿಯಾಯಿತು.

ನವರಾಗರ ಮಾಲಿಕಾ ವರ್ಣ, ಗಾನಮೂರ್ತಿ (ಗಾನಮೂರ್ತೇ) ಆರಭಿ (ಪಂಚ ರತ್ನ) ಆನಂದ ಭೈರವಿ (ಮರಿವೇರೆ) ಕೃತಿಗಳಲ್ಲದೆ ಪ್ರಧಾನವಾಗಿ ಹಂಸಾನಂದಿಯನ್ನು (ಪಾವನಗುರು ಪವನಪುರ) ಆಯ್ದುಕೊಳ್ಳಲಾಯಿತು.

ಒಮ್ಮೆ ಪಕ್ಕವಾದ್ಯದವರಾಗಿ  ಮತ್ತೊಮ್ಮೆ ಸಹವಾದಕರಾಗಿ ಪರಸ್ಪರ ಅರಿತುಕೊಂಡು ಒಬ್ಬರಿಗೊಬ್ಬರು ಪೂರಕವಾಗಿ, ಈ ಕಲಾವಿದರು ಪರ್ಯಾಯವಾಗಿ ನೀಡಿದ ಆಲಾಪನೆಯ ಶ್ರಾವ್ಯತೆ, ಸ್ವರ ಕಲ್ಪನೆಗಳ ನಡೆ ಬೇಧಗಳು, ಎಲ್ಲೂ ಅಪಸ್ವರವಿಲ್ಲದ ನುಡಿತಗಳು ಶ್ರೋತೃಗಳ ಮುಕ್ತ ಪ್ರಶಂಸೆಗೆ ಪಾತ್ರವಾದವು. 

ಆನಂತರ 'ವರಮು' ರಾಗವನ್ನು 'ರಾಗಂ -ತಾನಂ -ಪಲ್ಲವಿ'ಗೆ ಆಯ್ದುಕೊಂಡ ಕಲಾವಿದರು ರಾಗ ವಿಸ್ತಾರ, ರಾಗ ಮಾಲಿಕೆಯಲ್ಲಿ 'ತಾನಂ' ನಂತರ; 'ಕೃಷ್ಣಾ ..ಮುಕುಂದಾ..ಮುರಾ..ರೇ... ರಾಗಧನ ಸೊಬಗಿನ ಉಡುಪಿ' ಎಂಬ ಸ್ವರಚಿತ ಪಲ್ಲವಿಯನ್ನು ಚತುರಸ್ರ ತ್ರಿಪುಟ ತಾಳದಲ್ಲಿ ನುಡಿಸಿದರು; ಮತ್ತು ಮುಕ್ತಾಯಗಳೊಂದಿಗೆ ಸ್ವರವಿನಿಕೆಗಳನ್ನು ನೀಡಿದರು. 

ಕಚೇರಿಯುದ್ದಕ್ಕೂ ತಮ್ಮ ಚುರುಕಾದ ಬೆರಳುಗಳಿಂದ ಮೃದಂಗ ವಾದನದಲ್ಲಿ ನಿಕ್ಷಿತ್ ಪುತ್ತೂರು ಮತ್ತು ಕಂಜೀರದಲ್ಲಿ  ಕಾರ್ತಿಕ್ ಇನ್ನಂಜೆ, ಮುಂದೆ ತನಿ ಆವರ್ತನದಲ್ಲಿ ಮಿಂಚಿದರು. ಯಮುನಾ ಕಲ್ಯಾಣಿಯ ದೇವರನಾಮ ಹಾಗೂ ದೇಶ ರಾಗದ ತಿಲ್ಲಾನ ದೊಂದಿಗೆ ಕಛೇರಿ ಸಂಪನ್ನಗೊಂಡಿತು.

-ಸರೋಜಾ ಆಚಾರ್ಯ