ಉಡುಪಿ ಶೈಲಿಯ ಹುಲಿವೇಷ ಕುಣಿತಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಗುತ್ತಿರುವ ಅಪಪ್ರಚಾರವನ್ನು ಖಂಡಿಸಿ ಹಾಗೂ ಸಾಂಪ್ರದಾಯಿಕ ಉಡುಪಿ ಶೈಲಿಯ ಹುಲಿ ಕುಣಿತವನ್ನು ಉಳಿಸುವ ನಿಟ್ಟಿನಲ್ಲಿ ಉಡುಪಿಯ ಸಮಾನಮನಸ್ಕ 76 ತಂಡಗಳ ಸಂಯೋಜನೆಯಲ್ಲಿ ಬೃಹತ್ ಪ್ರತಿಭಟನಾ ಪಾದಯಾತ್ರೆಯನ್ನು ಭಾನುವಾರ ಹಮ್ಮಿಕೊಳ್ಳಲಾಯಿತು.
ಜೋಡುಕಟ್ಟೆಯಿಂದ ಕೃಷ್ಣಮಠದವರೆಗೆ ನಡೆದ ಬಹೃತ್ ಪಾದಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹುಲಿವೇಷಧಾರಿಗಳು, ಹುಲಿವೇಷ ತಂಡಗಳ ಸದಸ್ಯರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ಜೋಡುಕಟ್ಟೆಯಲ್ಲಿ ತಾಸೆ, ಚಂಡೆ ಹಾಗೂ ಬ್ಯಾಂಡ್ ನ ಸದ್ದು ಮೊಳಗಿಸುವ ಮೂಲಕ ಬೃಹತ್ ಪಾದಯಾತ್ರೆಗೆ ಚಾಲನೆ ನೀಡಲಾಯಿತು.
ಜೋಡುಕಟ್ಟೆಯಿಂದ ಹೊರಟ ಪಾದಯಾತ್ರೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿಬಂತು. ಪಾದಯಾತ್ರೆಯುದ್ಧಕ್ಕೂ ತಾಸೆ, ಚಂಡೆ, ಬ್ಯಾಂಡ್ ನ ಸದ್ದು ಮೊಳಗಿತು. ಹುಲಿವೇಷಧಾರಿಗಳು, ಕಲಾವಿದರು ಭರ್ಜರಿ ಸ್ಟೆಪ್ ಹಾಕುವ ಮೂಲಕ ಕಾಲ್ನಾಡಿಗೆಯಲ್ಲಿ ಬರುತ್ತಿದ್ದವರಿಗೆ ಜೋಶ್ ತುಂಬಿದರು. ವಿವಿಧ ಟ್ಯಾಬ್ಲೊ, ನಾಸಿಕ್ ಬ್ಯಾಂಡ್, ಯುವತಿಯರ ಜಬರ್ದಸ್ತ್ ಹುಲಿ ಕುಣಿತ ಪಾದಯಾತ್ರೆಯ ಮೆರುಗನ್ನು ಹೆಚ್ಚಿಸಿತು.
ಸಂಸ್ಕೃತ ಕಾಲೇಜು ರಸ್ತೆಯ ಮೂಲಕ ರಥಬೀದಿಗೆ ಪಾದಯಾತ್ರೆ ಸಾಗಿಬಂತು. ರಥಬೀದಿಗೆ ಒಂದು ಸುತ್ತು ಬಂದು ಕನಕಗೋಪುರದ ಮುಂಭಾಗದಲ್ಲಿ ಹುಲಿ ಕುಣಿಯುವುದರ ಮೂಲಕ ಸಾಂಪ್ರದಾಯಿಕ ಶೈಲಿಯ ಹುಲಿ ಕುಣಿತಕ್ಕೆ ಆಗುತ್ತಿರುವ ಅಪಪ್ರಚಾರವನ್ನು ಖಂಡಿಸಿದರು. ಆ ಬಳಿಕ ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ ಅವರಿಗೆ ಮನವಿ ಸಲ್ಲಿಸಿ, ಅಪಪ್ರಚಾರಕ್ಕೆ ಕಿವಿಗೊಡಬೇಡಿ, ಸಾಂಪ್ರದಾಯಿಕ ಶೈಲಿಯ ಹುಲಿ ಕುಣಿತವನ್ನು ಉಳಿಸಿ ಎಂದು ಕರೆ ನೀಡಲಾಯಿತು.