Header Ads Widget

ತಾಯಿ ಶಾರದೆ ಲೋಕ ಪೂಜಿತೆ~ಪೂರ್ಣಿಮಾ ಜನಾರ್ದನ್ ಕೊಡವೂರು

 

ನವರಾತ್ರಿಯ ಪರ್ವ ಕಾಲದಲ್ಲಿ ಆರಾಧಿಸುವ ಜಗನ್ಮಾತೆಯ ನವರೂಪಗಳಲ್ಲಿ ಒಂದಾದ ಶಾರದಾ ಮಾತೆಯು ಜ್ಞಾನ ಹಾಗು ಲಲಿತ ಕಲೆಗಳ ಆರಾಧ್ಯ ದೇವತೆಯಾಗಿ, ಸತ್ವ ಗುಣದ ಸೃಜನಾತ್ಮಕ ಶಕ್ತಿಯಾಗಿ, ಶಿಕ್ಷಣ ಹಾಗು ಸಂಸ್ಕ್ರತಿಯ ದೇವತೆಯಾಗಿ, ವೇದಗಳ ಮಾತೆ ಯಾಗಿ ಆರಾಧಿಸಲ್ಪಡುತ್ತಾಳೆ.

ತ್ರಿದೇವಿಯರಲ್ಲಿ ಓರ್ವ ಶಕ್ತಿಯಾಗಿ ಪೂಜಿಸ ಲ್ಪ ಡುವ ಶಾರದಾ ದೇವಿಯು ಸರಸ್ವತಿ, ವಾಗ್ದೇವಿ, ಸಾವಿತ್ರಿ, ಬ್ರಾಹ್ಮಿ, ಭಾರತಿ, ವಾಣಿ ಮುಂತಾದ ಹೆಸರುಗಳಿಂದಲೂ ಪ್ರಖ್ಯಾತಿ ಹೊಂದಿದ್ದು ವೀಣೆ,ಪುಸ್ತಕ, ಜಪಮಾಲೆ,ಬಿಳಿ ಕಮಲಗಳನ್ನು ಕರಗಳಲ್ಲಿ ಪಿಡಿದು ಶ್ವೇತ ವಸ್ತ್ರಗಳಿಂದ ಅಲಂಕೃತಗೊಂಡು ಬಿಳಿ ಹಂಸದ ಮೇಲೆ ಆಸೀನಳಾಗಿ ಮಂದಹಾಸ ಬೀರುತ್ತಾ ಭಕ್ತ ಜನತೆಯನ್ನು ಅನುಗ್ರಹಿಸುತ್ತಾಳೆ. 

ಆಕೆಯ ಮಂದಸ್ಮಿತ ಮೊಗ, ಹೊಳೆಯುವ ಕಾಂತಿಯುಕ್ತ ಕಂಗಳು, ಶಿರದ ತುಂಬ ಪುಷ್ಪ ರಾಶಿ, ಕಣ್ಮನ ಸೆಳೆಯುವ ಸಾಂಪ್ರದಾಯಿಕ ಆಭರಣಗಳಿಂದbಅಲಂಕೃತಗೊಂಡಿರುವ  ಪೂಜ್ಯಭಾವ ಅಧಿಕಗೊಳಿಸುವ ಆ‌ ಮೊಗವನ್ನು ಎಷ್ಟು ಕಣ್ತುಂಬಿಕೊಂಡರೂ ಸಾಲದು. 

ಇನ್ನಷ್ಟು ಮತ್ತಷ್ಟು ಆ ಮೊಗವನ್ನು ನೋಡುತ್ತಾ, ನಿರ್ಮಲ ಮನದಿಂದ ಪ್ರಾರ್ಥಿಸುತ್ತಾ, ಆಕೆಯ ಕರುಣೆಗೆ ಪಾತ್ರರಾಗುವ ಆ ಕ್ಷಣವೇ ಪರಮ ಪವಿತ್ರ.


ಇತ್ತೀಚೆಗೆ ಪುಟ್ಟ ಮಕ್ಕಳನ್ನು ದೇವಿ ಶಾರದೆ ಯಂತೆ ಅಲಂಕರಿಸಿ ಸಂಭ್ರಮಿಸುವುದು ತಂದೆ ತಾಯಿಗೆ ಬಲು ಇಷ್ಟ. ತಮ್ಮ ಪುಟ್ಟ ಪುಟ್ಟ ಮುದ್ದು ಮಕ್ಕಳಿಗೆ ತಾಯಿ ಶಾರದೆಯಂತೆ ರೇಷ್ಮೆ ಸೀರೆ ಉಡಿಸಿ,ತಲೆ ತುಂಬ ಮಲ್ಲಿಗೆ ಹೂವು ಮುಡಿಸಿ,ಮೈ ತುಂಬಾ‌ ಸಾಂಪ್ರದಾಯಿಕ  ಆಭರಣ ತೊಡಿಸಿ,‌ ಕೈಯಲ್ಲಿ ವೀಣೆಯನ್ನಿಟ್ಟು , ಆ ಮುಗ್ಧ ಕಂಗಳದ ಆನಂದದ ಹೊಳಪಿನಲ್ಲಿ, ಎಲ್ಲರನ್ನೂ ಆಕರ್ಷಿಸುವ ಮಂದಹಾಸದ ಮೊಗದಲ್ಲಿ ತಾಯಿ ಶಾರದೆಯನ್ನು ಕಂಡು ಪುನೀತರಾಗುವ ಆ ಸಂತಸ ಸಡಗರವನ್ನು ವರ್ಣಿಸಲು ಪದಗಳು ಸಾಲದು. 

ಶಾರದಾ ಮಾತೆಯ ರೂಪ ಹೊತ್ತ ಪುಟ್ಟ ಮಕ್ಕಳಿಗೂ,ಎಲ್ಲರ ಮನ ಸೂರೆ ಗೊಳ್ಳುವಂತೆ ಅವರನ್ನು ಅಲಂಕರಿಸುವ ಮಾತಾಪಿತರಿಗೂ,‌ ಪ್ರೋತ್ಸಾಹ ಸಹಕಾರ ನೀಡುವ ಮನೆ ಮಂದಿ ಗೂ, ಮಕ್ಕಳಲ್ಲಿ ದೈವತ್ವವನ್ನು ಕಾಣುವ ಭಕ್ತ ಜನತೆಗೂ  ಶಾರದಾ ಮಾತೆ ಅನುಗ್ರಹಿಸಲಿ ಎಂದು ಆಶಿಸುತ್ತಾ ಅಕ್ಷರ ಮಾಲೆ ಧರಿಸಿದ ಅಕ್ಷರ ಮಾತೆ ಶಾರದೆ ,ಎಲ್ಲರಿಗೂ ಅಕ್ಷರ ಧಾರೆಯನ್ನಿತ್ತು ಸಲಹಲಿ,ಎಲ್ಲರ ಮನೆ ಮನ ಅಕ್ಷರ ಧಾಮವಾಗಲಿ ಎಂಬ ಸತ್ ಪ್ರಾರ್ಥನೆ ಯೊಂದಿಗೆ  ಸರ್ವರಿಗೂ ನವರಾತ್ರಿಯ ಶುಭಾಶ ಯಗಳು ‌

✍️ಪೂರ್ಣಿಮಾ ಜನಾರ್ದನ್ ಕೊಡವೂರು 

ಪುಟ್ಟ ಶಾರದೆಯ ರೂಪದರ್ಶಿ: ಆರಾಧ್ಯ ಎಸ್ ಪಿ