ಬ್ರಹ್ಮಚಾರಿಣಿ ದುರ್ಗಾ (ಪಾರ್ವತಿ) ದೇವತೆಯ ಎರಡನೇ ಅಂಶದ ಹೆಸರಾಗಿದೆ. ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿಯ ಆರಾಧನೆ ಮಾಡಲಾಗುತ್ತದೆ. ಬ್ರಹ್ಮಚಾರಿಣಿ ಎಂದರೆ ಇತರ ವಿದ್ಯಾರ್ಥಿಗಳೊಂದಿಗೆ ತನ್ನ ಗುರುಗಳೊಂದಿಗೆ ಆಶ್ರಮದಲ್ಲಿ ವಾಸಿಸುವ ಶ್ರದ್ಧಾಭರಿತ ಮಹಿಳಾ ವಿದ್ಯಾರ್ಥಿನಿ. ಬ್ರಹ್ಮಚಾರಿಣಿ ದೇವಿಯು ಬಿಳಿ ಬಟ್ಟೆಗಳನ್ನು ಧರಿಸಿ, ಬಲಗೈಯಲ್ಲಿ ರುದ್ರಾಕ್ಷಿ ಮಾಲಾ (ಜಪಮಾಲೆ) ಮತ್ತು ಎಡಗೈಯಲ್ಲಿ ನೀರಿನ ಪಾತ್ರೆ ಕಮಂಡಲವನ್ನು ಹಿಡಿದಿದ್ದಾಳೆ.
ವೈದಿಕ ಗ್ರಂಥಗಳಲ್ಲಿ ಬ್ರಹ್ಮಚಾರಿಣಿ ಎಂಬ ಪದವು ಪವಿತ್ರ ಧಾರ್ಮಿಕ ಜ್ಞಾನವನ್ನು ಅನುಸರಿಸುವ ಹೆಣ್ಣು ಎಂದರ್ಥ.
ಪಾರ್ವತಿಯು ಯೌವನಾವಸ್ಥೆಗೆ ಬಂದಾಗ ನಾರದ ಮುನಿಯು ಭೇಟಿಯಾಗುತ್ತಾನೆ. ತಪಸ್ಸಿನ ಹಾದಿಯನ್ನು ಅನುಸರಿಸಿದರೆ ಹಿಂದಿನ ಜನ್ಮದಲ್ಲಿ ಪತಿಯಾಗಿದ್ದ ಈಶ್ವರನನ್ನು ಮದುವೆ ಯಾಗಬಹುದು ಎಂದು ಹೇಳುತ್ತಾನೆ. ಈ ಜನ್ಮದಲ್ಲೂ ಶಿವನನ್ನೇ ಮದುವೆಯಾಗಲು ಬಯಸಿದ ಪಾರ್ವತಿಯು ಭಕ್ತಿಯಿಂದ ಅತ್ಯಂತ ಕಠಿಣ ತಪಸ್ಸನ್ನು ಮಾಡಲಾರಂಭಿಸುತ್ತಾಳೆ. ಸಾವಿರಾರು ವರ್ಷಗಳ ತಪಸ್ಸಿನಿಂದಾಗಿ ಅವಳ ದೇಹವು ದುರ್ಬಲವಾಯಿತು.
ಪಾರ್ವತಿಯ ದೀರ್ಘ ಮತ್ತು ಕಠಿಣ ತಪಸ್ಸಿನ ಸುದ್ದಿ ಎಲ್ಲೆಡೆಯೂ ತಲುಪಿತು. ಕೊನೆಯಲ್ಲಿ ಬ್ರಹ್ಮನು ಪ್ರತ್ಯಕ್ಷನಾಗಿ' ಇದುವರೆಗೂ ಯಾರೂ ಮಾಡದಂತಹ ಕಠಿಣ ತಪಸ್ಸನ್ನು ನೀನು ಮಾಡಿದ್ದೀಯಾ, ಶಿವನ ಮೇಲಿರುವ ನಿನ್ನ ಪ್ರೀತಿ ನಿಜವಾದುದು ಮತ್ತು ಪರಿಶುದ್ಧವಾದುದು, ಹೀಗಾಗಿಯೇ ಕಷ್ಟಗಳನ್ನು ಸಮರ್ಥವಾಗಿ ಎದುರಿಸಿದ್ದೀಯ, ಈ ಜನ್ಮದಲ್ಲಿ ಶಿವನನ್ನೇ ಪತಿಯಾಗಿ ಪಡೆಯುವೆ' ಎಂದು ಆಶೀರ್ವ ದಿಸಿದನು.
ಹೀಗೆ ಕಠೋರ ತಪಸ್ಸು ಮಾಡಿದ ಪಾರ್ವತಿಯು ಬ್ರಹ್ಮಚಾರಿಣಿಯೆಂಬ ಹೆಸರನ್ನು ಪಡೆಯುತ್ತಾಳೆ. ಮುಂದೆ ಈಶ್ವರನೂ ಪಾರ್ವತಿಯನ್ನು ಪತ್ನಿ ಯಾಗಿ ಸ್ವೀಕರಿಸುತ್ತಾನೆ.
ಬ್ರಹ್ಮಚಾರಿಣಿ ದೇವಿ ಕೂಡ ಸತಿ ದೇವಿಯ ಪುನರ್ಜನ್ಮ ಎಂದು ಪರಿಗಣಿಸಲಾಗಿದೆ. ತಾಯಿಯ ಈ ರೂಪವನ್ನು ಪೂಜಿಸುವುದರಿಂದ ದೃಢತೆ, ತ್ಯಾಗ, ಸಂಯಮ, ಸದ್ಗುಣ ಇತ್ಯಾದಿಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ. ಜೀವನದ ಅತ್ಯಂತ ಕಷ್ಟಕರ ಸಮಯಗಳಲ್ಲಿಯೂ ಸಹ, ಒಬ್ಬ ವ್ಯಕ್ತಿಯು ತನ್ನ ಮಾರ್ಗದಿಂದ ವಿಚಲನಗೊಳ್ಳುವುದಿಲ್ಲ ಎಂಬ ನಂಬಿಕೆ ಇದೆ.
🍁ಸಂಗ್ರಹ: ಸುಶಾಂತ್ ಕೆರೆಮಠ