Header Ads Widget

ನವರಾತ್ರಿಯ ಮೂರನೇ ದಿನ 'ಚಂದ್ರಘಂಟಾ' ದೇವಿಯ ಆರಾಧನೆ


ಚಂದ್ರಘಂಟಾ ದೇವಿ ಮಹಾದೇವಿಯ ಮೂರನೇ ನವದುರ್ಗಾ ಅಂಶವಾಗಿದೆ. ನವರಾತ್ರಿಯ ಮೂರನೇ ದಿನದಂದು ಚಂದ್ರಘಂಟಾ ದೇವಿಯನ್ನು ಪೂಜಿಸಲಾಗುತ್ತದೆ. ದೇವಿಯ ಹೆಸರು ಚಂದ್ರ - ಘಂಟಾ, ಅಂದರೆ "ಗಂಟೆಯ ಆಕಾರದ ಅರ್ಧ ಚಂದ್ರನನ್ನು ಹೊಂದಿರುವವಳು" ಎಂದರ್ಥ. ಅವಳ ಮೂರನೇ ಕಣ್ಣು ಯಾವಾಗಲೂ ತೆರೆದಿರುತ್ತದೆ. ಇದು ದುಷ್ಟರ ವಿರುದ್ಧದ ಯುದ್ಧಕ್ಕೆ ಅವಳ ಶಾಶ್ವತ ಸಿದ್ಧತೆಯನ್ನು ಸೂಚಿಸುತ್ತದೆ. ಆಕೆಯನ್ನು ಚಂದ್ರಖಂಡ, ವೃಕಾಹ್ವಾಹಿನಿ ಅಥವಾ ಚಂದ್ರಿಕಾ ಎಂದೂ ಕರೆಯುತ್ತಾರೆ. ಅವಳು ತನ್ನ ಅನುಗ್ರಹ, ಶೌರ್ಯ ಮತ್ತು ಧೈರ್ಯದಿಂದ ಜನರಿಗೆ ಪ್ರತಿಫಲ ನೀಡುತ್ತಾಳೆ ಎಂದು ನಂಬಲಾಗಿದೆ. ಆಕೆಯ ಕೃಪೆಯಿಂದ ಭಕ್ತರ ಎಲ್ಲಾ ಪಾಪಗಳು, ಸಂಕಟಗಳು, ಶಾರೀರಿಕ ಸಂಕಟಗಳು, ಮಾನಸಿಕ ಕ್ಲೇಶಗಳು ಮತ್ತು ಪ್ರೇತ ಬಾಧೆಗಳು ನಿವಾರಣೆಯಾಗುತ್ತವೆ.

ಹೊಸದಾಗಿ ವಿವಾಹವಾದ ಸ್ವರೂಪವನ್ನು ದುರ್ಗಾಮಾತೆಯು ಚಂದ್ರಘಂಟ ರೂಪದಲ್ಲಿ ತೋರಿಸಿದ್ದಾರೆ. ಹಿಮವಂತ ಹಾಗೂ ಮೈನಾ ದೇವಿಯ ಪುತ್ರಿಯಾಗಿ ಜನಿಸಿದ ಪಾರ್ವತಿಯು ಶಿವನನ್ನು ಪಡೆಯಲು ಕಠಿಣ ತಪಸ್ಸನ್ನು ಕೈಗೊಳ್ಳುತ್ತಾಳೆ. ಪಾರ್ವತಿಯ ಕಠೋರ ತಪಸ್ಸನ್ನು ಮೆಚ್ಚಿದ ಶಿವನು ಮದುವೆಯಾಗಲು ಒಪ್ಪಿಕೊಳ್ಳುತ್ತಾನೆ. ಇದರಂತೆ ಹಿಮವಾನನ ಅರಮನೆಯಲ್ಲಿ ಮದುವೆಯ ಏರ್ಪಾಡುಗಳು ನಡೆಯುತ್ತದೆ.

ಸ್ಮಶಾನವಾಸಿಯಾದ ಶಿವನು ತನ್ನ ಭಯಾನಕ ರೂಪದಲ್ಲೇ, ತನ್ನ ಗಣಗಳೊಂದಿಗೆ ಮೆರವಣಿಗೆಯಲ್ಲಿ ಅರಮನೆಯನ್ನು ತಲುಪುತ್ತಾನೆ. ಬೂದಿಯಿಂದ ಮುಚ್ಚಲ್ಪಟ್ಟ ಶರೀರ, ಕೊರಳಿನಲ್ಲಿ ಸುತ್ತಿದ ಹಾವುಗಳು, ಗಂಟಿನಂತಿರುವ ಜಟೆಧಾರಿಯಾದ ಶಿವ, ಅವನೊಂದಿಗೆ ದೆವ್ವಗಳು, ಪಿಶಾಚ, ಗಣಗಳು, ಋಷಿಮುನಿಗಳು, ಅಘೋರಿಗಳನ್ನು ಒಳಗೊಂಡ ವಿಚಿತ್ರ ಮೆರವಣಿಗೆಯನ್ನು ನೋಡಿ, ಪಾರ್ವತಿಯ ತಾಯಿ ಮೂರ್ಛೆ ಹೋಗುತ್ತಾಳೆ. ವಿವಾಹಕ್ಕೆಂದು ಸೇರಿದ್ದವರು ಶಿವನ ರೂಪ, ಅವನ ಗಣಗಳನ್ನು ನೋಡಿ ಆಘಾತವನ್ನು ಅನುಭವಿಸುತ್ತಾರೆ. ಇದನ್ನು ಕಂಡ ಪಾರ್ವತಿಯು ಶಿವನಿಗೆ ಮುಜುಗರವಾಗದಿರಲೆಂದು ಭಯಾನಕ ರೂಪವಾಗಿ ಚಂದ್ರಘಂಟೆಯಾಗಿ ಪರಿವರ್ತನೆಯಾಗುತ್ತಾಳೆ.

ಚಿನ್ನದ ಮೈಬಣ್ಣವನ್ನು ಹೊಂದಿದ ಚಂದ್ರ ಘಂಟೆಯು ಹತ್ತು ತೋಳುಗಳನ್ನು ಹೊಂದಿದ್ದಳು. ಒಂಭತ್ತು ತೋಳುಗಳಲ್ಲಿ ತ್ರಿಶೂಲ, ಗದೆ, ಬಿಲ್ಲು-ಬಾಣ, ಖಡ್ಗ, ಕಮಲ, ಘಂಟೆ, ಕಮಂಡಲ ಹಾಗೂ ಒಂದು ತೋಳಿನಲ್ಲಿ ಅಭಯ ಮುದ್ರೆಯಿಂದ, ಸಿಂಹವಾಹಿನಿಯಾಗಿ ರೂಪ ತಾಳುತ್ತಾಳೆ. ತನ್ನ ಭಕ್ತರಿಗೆ ತಾಯಿಯಂತೆ ಆದಿಶಕ್ತಿಯು ಸಹಾನುಭೂತಿಯನ್ನು ತೋರುತ್ತಾಳೆ. ಹಾಗೂ ಕೆಟ್ಟವರಿಗೆ ಭಯಾನಕ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ.

(ಸಂಗ್ರಹ ~ಸುಶಾಂತ್ ಕೆರೆಮಠ)