ನಾಪತ್ತೆಯಾಗಿದ್ದ ಮಲ್ಪೆ ಬಾಪು ತೋಟದ ನಿವಾಸಿ ಜಲೀಲ್ (49) ಎಂಬವರ ಮೃತದೇಹವು ಪಡುಕೆರೆ ಮಟ್ಟು ಸಮೀಪ ಪಾಪನಾಶಿನಿ ನದಿಯಲ್ಲಿ ಅ.13ರ ಭಾನುವಾರ ಬೆಳಗ್ಗೆ ಪತ್ತೆಯಾಗಿದೆ.
ಜಲೀಲ್ ಅ.12ರ ಶನಿವಾರ ಬೆಳಿಗ್ಗೆ 5 ಗಂಟೆಗೆ ಮನೆಯಿಂದ ನಾಪತ್ತೆಯಾಗಿದ್ದು, ಅವರ ಬೈಕ್, ಮೊಬೈಲ್ ಹಾಗೂ ಚಪ್ಪಲಿ ಮಲ್ಪೆ ಪಡುಕರೆ ಸೇತುವೆ ಬಳಿ ಪತ್ತೆಯಾಗಿತ್ತು.
ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡವು ಜಲೀಲ್ ನಾಪತ್ತೆಯಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶವನ್ನು ಬಿತ್ತರಿಸಿತ್ತು. ಬೆಳಿಗ್ಗೆ ಸುಮಾರು 7 ಗಂಟೆಗೆ ಪಡುಕರೆ ಬಾಪುತೋಟ ಸಮೀಪದ ಪಾಪನಾಶಿನಿ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಸ್ಥಳೀಯ ಮೀನುಗಾರರು ಮೃತದೇಹದ ಹುಡುಕಾಟಕ್ಕೆ ಈಶ್ವರ್ ಮಲ್ಪೆ ಮತ್ತು ತಂಡದ ಜೊತೆಗೆ ಸಹಕಾರ ನೀಡಿದ್ದರು. ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡ ತಮ್ಮ ಆಂಬುಲೆನ್ಸ್ ಮೂಲಕ ಮೃತದೇಹವನ್ನು ಉಡುಪಿ ಜಿಲ್ಲಾಸ್ಪತ್ರೆಗೆ ಸಾಗಿಸಿದರು.