ಕಳೆದ 3 ವರ್ಷಗಳಿಂದ ನಿರಂತರವಾಗಿ ಉಚ್ಚಿಲ ದಸರಾ ಮಹೋತ್ಸವ ಅಂಗವಾಗಿ ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ಚಿತ್ರಕಲೆ ಸ್ಪರ್ಧೆಯನ್ನು ಯಶಸ್ವಿಯಾಗಿ ಆಯೋಜಿಸುತ್ತಿದ್ದು, ಚಿತ್ರಕಲೆಯ ಮೂಲಕ ಬಾಲ್ಯದಿಂದಲೇ ಸನಾತನ ಧರ್ಮದ ಧಾರ್ಮಿಕ ಪ್ರಜ್ಞೆ, ಸೃಜನಶೀಲತೆ ಬೆಳೆಸಲು ಈ ಸ್ಪರ್ಧೆ ಸಹಕಾರಿಯಾಗಲಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಹೇಳಿದರು.
ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ಉಚ್ಚಿಲ ದಸರಾ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಚಿತ್ರ ಬಿಡಿಸುವ ಸ್ಪರ್ಧೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾರಂಭದ ಉದ್ಘಾಟನೆ ನೆರವೇರಿಸಿದ ನಾಡೋಜ ಡಾ. ಜಿ. ಶಂಕರ್ ಮಾತನಾಡಿ ಮಹಾಲಕ್ಷ್ಮೀ ಬ್ಯಾಂಕ್ ಉಚ್ಚಿಲ ದಸರಾ ಮಹೋತ್ಸವದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ನೀಡುತ್ತಿದ್ದು ಪ್ರತಿವರ್ಷ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಸ್ಪರ್ಧಿಗಳು ಭಾಗವಹಿಸುತ್ತಿರುವುದು ಅಭಿನಂದನಾರ್ಹ ಎಂದರು.
ಕಾರ್ಯಕ್ರಮದಲ್ಲಿ ಬ್ಯಾಂಕಿನ ವತಿಯಿಂದ ಕೇಕ್ ಕತ್ತರಿಸುವ ಮೂಲಕ ನಾಡೋಜ ಡಾ ಜಿ. ಶಂಕರ್ ರವರ ಹುಟ್ಟು ಹಬ್ಬವನ್ನು ಆಚರಿಸಿ, ಪುಟಾಣಿ ಮಕ್ಕಳು ಗುಲಾಬಿ ಹೂ ನೀಡಿ ಶುಭಾಶಯ ಕೋರಿದರು.
ಚಿತ್ರಕಲಾ ಸ್ಪರ್ಧೆಯಲ್ಲಿ 575 ಮಂದಿ ಭಾಗವಹಿಸಿದ್ದು, ತೀರ್ಪುಗಾರರಾಗಿ ಹಿರಿಯ ಕಲಾವಿದರಾದ ಶ್ರೀ ರಮೇಶ್ ಕಿದಿಯೂರು, ಶ್ರೀ ಶೇಖರ್ ಕಲಾಪ್ರತಿಭಾ, ಶ್ರೀಧರ್ ತೊಟ್ಟಂ ಸಹಕರಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಶ್ರೀ ಜಯ ಸಿ. ಕೋಟ್ಯಾನ್, ಶಿರ್ವ ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ಬಬಿತಾ ಅರಸ್, ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ವಾಸುದೇವ ಸಾಲ್ಯಾನ್, ವ್ಯವಸ್ಥಾಪನಾ ನಿರ್ದೇಶಕರಾದ ಶ್ರೀ ಶರತ್ ಕುಮಾರ್ ಶೆಟ್ಟಿ, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಶ್ರೀಮತಿ ಶಾರಿಕ ಕಿರಣ್ ಉಪಸ್ಥಿತರಿದ್ದರು. ಬ್ಯಾಂಕಿನ ಸಿಬ್ಬಂದಿ ಶ್ರೀಮತಿ ವಿಜೇತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.