Header Ads Widget

ಉಡುಪಿ : ರಾಜಾಂಗಣದಲ್ಲಿ ಜಾನಪದ ಹಬ್ಬ ಉದ್ಘಾಟನೆ

ಉಡುಪಿ : ಮಾನವನ ಸಹಜ ಭಾವನೆಗಳನ್ನು ವ್ಯಕ್ತ ಪಡಿಸುವ ಉತ್ತಮ ಸಂದೇಶಗಳನ್ನು ನೀಡುವ ನಮ್ಮ ನಾಡಿನ ಜಾನಪದ ಕಲೆಗಳು ಶ್ರೇಷ್ಠ ಕಲೆಗಳಾಗಿವೆ. ಇವುಗಳ ಆಚರಣೆಗೆ ತನ್ನದೇ ಆದ ಮಹತ್ವವಿದೆ. ಈ ಮೂಲಕ ಜಾನಪದ ಕಲೆಗಳು ಜ್ಞಾನಪ್ರದ ಕಲೆಗಳಾಗಿವೆ ಎಂದು ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರು ಹೇಳಿದರು.

ಅವರು ಭಾನುವಾರ ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠ ಹಾಗೂ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಉಡುಪಿ ಜಿಲ್ಲಾ ಘಟಕ, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಉಡುಪಿ ಹಾಗೂ ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ 'ಜಾನಪದ ಹಬ್ಬ-೨೦೨೪' ನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಜಾನಪದ ಕಲೆಗಳಲ್ಲಿ ಪಾಶ್ವಿಮಾತ್ಯ ದೇಶಗಳ ಕಲೆಗಳಂತೆ ಕೃತಿಮತೆ ಇಲ್ಲ. ಪ್ರಾಚೀನ ಜಾನಪದ ಕಲೆಗಳು ಸಹಜೆಯನ್ನು ತಂದು ಕೊಡುತ್ತವೆ ಎಂದ ಅವರು ದೀಪಾವಳಿಯ ಪರ್ವದ ಸಂದರ್ಭದಲ್ಲಿ ಈ ಜಾನಪದ ಹಬ್ಬವನ್ನು ಆಯೋಜಿಸಿರುವ ಡಾ.ತಲ್ಲೂರು ಅಭಿನಂದನಾರ್ಹರು. ಪ್ರಾಚೀನ ಕಲೆಗಳ ಮೂಲಕ ಮತ್ತೆ ಸಹಜತೆಯನ್ನು ತರುವ ಈ ಪ್ರಯತ್ನ ಪ್ರಶಂಸನೀಯ ಎಂದು ಅವರು ತಿಳಿಸಿದರು.

ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಮಾತನಾಡಿ, ಕರ್ನಾಟಕಕ್ಕೆ ಲೋಕಾಯುಕ್ತನಾಗಿ ಬಂದಾಗ ಸಮಾಜದಲ್ಲಿ ಬಹಳಷ್ಟು ಅನ್ಯಾಯಗಳನ್ನು ಕಂಡೆ. ಈ ಬಗ್ಗೆ ಪರಾಮರ್ಶಿಸಿದಾಗ ಇದಕ್ಕೆ ವ್ಯಕ್ತಿಗಳ ತಪ್ಪು ಅಲ್ಲ. ಸಮಾಜದ ತಪ್ಪು ಎಂದು ಅರಿವಾಯಿತು. ಹಿಂದೆ ಸಮಾಜ ಒಳ್ಳೆಯ ಕೆಲಸಗಳನ್ನು ಮಾಡಿದ ವ್ಯಕ್ತಿಗಳನ್ನು ಸನ್ಮಾನಿಸುವ, ತಪ್ಪು ಕೆಲಸ ಮಾಡಿದವರನ್ನು ಬಹಿಷ್ಕರಿಸುವ ಕಾರ್ಯ ಮಾಡುತ್ತಿತ್ತು. ಆದರೆ ಇಂದು ಶ್ರೀಮಂತಿಕೆ ಹಾಗೂ ಅಧಿಕಾರವನ್ನು ಪೂಜಿಸುವ ಕೆಲಸವಾಗುತ್ತಿದೆ. ಶ್ರೀಮಂತಿಗೆ ಇರುವುದು ತಪ್ಪಲ್ಲ ಆದರೆ ಅದು ನೈತಿಕತೆಯಿಂದ ಬರಬೇಕು. ಮಾವೀಯತೆ ಮರೆಯಬಾರದು. ಮಾನವೀಯತೆ ನಮ್ಮ ಹಿರಿಯರು ಕಟ್ಟಿಕೊಟ್ಟ ಜೀವನ ಮೌಲ್ಯವಾಗಿದೆ. ಅದನ್ನು ಅನುಸರಿಸಿದರೆ ನಾವು ಶಾಂತಿ, ಸಾಮರಸ್ಯದಿಂದ ಬದುಕಬಹುದು ಎಂದು ಅವರು ಕಿವಿ ಮಾತು ಹೇಳಿದರು.

ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ನ ಪ್ರವರ್ತಕ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಮಾತನಾಡಿ, ಜಾನಪದ ಪರಿಷತ್ತಿನ ಮೂಲಕ ನಾಡಿನ ಜಾನಪದ ಕಲೆಗಳನ್ನು ಉಳಿಸುವ, ಕಲಾವಿದರಿಗೆ ಪ್ರೋತ್ಸಾಹ ನೀಡುವ ಕಾರ್ಯ ಮಾಡಲಾಗುತ್ತಿದೆ. ಕೈಯಿಂದ ಹಣ ಖರ್ಚಾದರೂ ಪರ್ವಾಗಿಲ್ಲ, ನಮ್ಮ ಜಾನಪದ ಕಲೆಗಳು ಉಳಿಯಬೇಕು ಎನ್ನುವ ಉದ್ದೇಶದಿಂದ ಕುಣಿತ ಭಜನೆ ಸ್ಪರ್ಧೆ, ಜಾನಪದ ವೈಭವ, ಕಲಾತಂಡಗಳಿಗೆ ಪ್ರೋತ್ಸಾಹ ನೀಡುವ ಕಾರ್ಯ ನಿರಂತರ ನಡೆಸಲಾಗುತ್ತಿದೆ ಎಂದರು.

ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಮಾತನಾಡಿ, ಶಾಸ್ತ್ರೀಯ ಚೌಕಟ್ಟಿನೊಳಗೆ ನಮ್ಮ ಜಾನಪದ ಕಲೆಗಳು ಬರುತ್ತಿರುವುದನ್ನು ಕಂಡಿದ್ದೇನೆ. ಅವುಗಳ ಶಾಸ್ತ್ರೀಯ ಅಭ್ಯಾಸದಿಂದ ಇಂತಹ ಬೆಳವಣಿಗೆ ನಡೆದಿದೆ. ಬದಲಾವಣೆ ಜಗದ ನಿಯಮ. ಹಾಗಾಗಿ ಇದರಲ್ಲಿರುವ ಧನಾತ್ಮಕ ಅಂಶಗಳನ್ನು ಪಡೆದುಕೊಂಡು ನಾವು ಮುನ್ನಡೆಯಬೇಕು ಎಂದರು.

ಅದಾನಿ ಸಮೂಹ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಅವರು ಪರಿಷತ್ತಿನಿಂದ ಜಾನಪದ ಕಲೆಗಳ ಪುನರುತ್ಥಾನಕ್ಕಾಗಿ ನಡೆಯುವ ಎಲ್ಲಾ ಕಾರ್ಯಗಳನ್ನು ಬೆಂಬಲಿಸುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಉದ್ಯಮಿ ವರುಣ್ ರಾಮದಾಸ್ ನಾಯಕ್ ಗುಜ್ಜಾಡಿ, ತಲ್ಲೂರು ಫ್ಯಾಮಿಲಿ ಟ್ರಸ್ಟ್ನ ಟ್ರಸ್ಟಿ ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ, ಪರಿಷತ್ತಿನ ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಅರುಣ್ ಕುಮಾರ್ ಹೆಗ್ಡೆ ಉಪಸ್ಥಿತರಿದ್ದರು.

ಜಾನಪದ ಪರಿಷತ್ತಿನ ಕಾರ್ಯದರ್ಶಿ ರವಿರಾಜ್ ನಾಯಕ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಡುಪಿ ತಾಲೂಕು ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಅಮಿತಾಂಜಲಿ ಕಿರಣ್ ನಿರೂಪಿಸಿ, ಖಜಾಂಚಿ ಪ್ರಶಾಂತ್ ಭಂಡಾರಿ ವಂದಿಸಿದರು.

ಸಭಾ ಕಾರ್ಯಕ್ರಮದ ಬಳಿಕ ವಿವಿಧ ಕಲಾತಂಡಗಳಿAದ ಕುಣಿತ ಭಜನೆ. ಹೋಳಿ ಕುಣಿತ, ಗೋಂದೋಳು, ಜಾನಪದ ವಾದ್ಯಗೋಷ್ಠಿ, ಕಲಾಮಯಂ ತಂಡದಿoದ ಜಾನಪದ ವೈಭವ ಮೊದಲಾದ ಕಾರ್ಯಕ್ರಮಗಳು ಪ್ರಸ್ತುತಿಗೊಂಡವು.