Header Ads Widget

ಮಹಾಕಾಳಿ -ಮಹಾಲಕ್ಷ್ಮೀ -ಮಾಹಾಸರಸ್ವತಿ ~ ಸ್ವರೂಪದಲ್ಲಿ ಜಗಜ್ಜನನಿಯ ಆರಾಧನಾ ಪರ್ವ

ಪಿತೃಪಕ್ಷ ಮುಗಿದೊಡನೆ ಬರುವುದು ಮಾತೃಪಕ್ಷ . ಪಿತೃ ಪ್ರೀತ್ಯರ್ಥವಾಗಿ ವಿಸ್ತೃತ ಶ್ರಾದ್ಧ ವಿಧಾನವಾದ "ಮಹಾಲಯ ಶ್ರಾದ್ಧ" ನಿರ್ವಹಿಸಿ ಅಥವಾ  ಗತಿಸಿದ ಪಿತೃ - ಮಾತೃಶಾಖೆಗೆ ತಿಲ ತರ್ಪಣ , ವಾಯಸ ಬಲಿ ಸಮರ್ಪಿಸಿ ಧನ್ಯರಾದವರಿಗೆ ಒಡನೆ ಮಾತೃಪಕ್ಷ ( ಹತ್ತು ದಿನವಲ್ಲ ಒಂದು ಪಕ್ಷವೆಂದು ಸ್ವೀಕಾರವಿದೆ). ಒದಗಿ ಬರುತ್ತದೆ . ಇದು ನವರಾತ್ರಿ ಎಂದು ಪ್ರಸಿದ್ದ. ಶರದೃತು ಆರಂಭವು ಮಳೆಗಾಲದ ಅಂತ್ಯ. ಪೈರು ಬೆಳೆದು ತೆನೆಗಳು ತೊನೆದಾಡುವ ಸಂಭ್ರಮ.

ರೈತನ ದುಡಿಮೆಗೆ ಭೂಮಿ ತಾಯಿ ನೀಡಿದ ಸತ್ಫಲ ; ಜೀವನಾಧಾರವಾದ "ಅನ್ನಬ್ರಹ್ಮ" ಮನೆಯಂಗಳಕ್ಕೆ ಬರುವ ಸಮೃದ್ಧಿಯ ಸಂದರ್ಭ. ಪ್ರಕೃತಿ ಹಚ್ಚಹಸುರಾಗಿ ತನ್ನ ನೈಜ‌ ಸೌಂದರ್ಯದೊಂದಿಗೆ ಶೋಭಿಸುವ ಕಾಲ.

ಹವಾಮಾನದಲ್ಲಿ ಬದಲಾವಣೆಯಾಗುವ ಈ ವೇಳೆ ಪ್ರಕೃತಿಮಾತೆಯ ಮೂಲಕ ಲೋಕಮಾತೆಯ ಆರಾಧನೆ.ಮಾನವ ನಿಸರ್ಗದೊಂದಿಗೆ ಕೂಡಿ ಬಾಳನ್ನು ರೂಪಿಸಿಕೊಂಡ .ಈ ಮೂಲ‌ "ಮಾನವ - ಪ್ರಕೃತಿ"ಸಂಬಂಧವೇ ಈ ವರೆಗೂ ಸಾಗಿ ಬಂತು .

ನಮ್ಮ ಆಚರಣೆಗಳೆಲ್ಲ ಇದಕ್ಕೆ ಹೊಂದಿಕೊಂಡು‌ವು.

 "ಶರನ್ನವರಾತ್ರಿ"  "ರಮೋತ್ಸವ"ವೂ ಹೌದು. "ರಮಾ"  ಎಂದರೆ ಲಕ್ಷ್ಮೀ, ಶೋಭೆ, ಸಮೃದ್ಧಿ ಎಂಬುದು ಅರ್ಥ.ಪ್ರಕೃತಿ ಕೃಷಿಯಿಂದ ತುಂಬಿ‌ ಅತಿಶಯತೆಯನ್ನು ಸಾಂಕೇತಿಸುವ ಪರ್ವಕಾಲ. ಇದು ಲಕ್ಷ್ಮೀ ,ಸಂಪತ್ತಿಗೆ ಹೇತುವಾದ ಪರಿಸರವಲ್ಲವೇ ? ಈ ಒಂಬತ್ತು ದಿನಗಳ ಉತ್ಸವ , ಹತ್ತನೇ ದಿನದ ಸಮಾರೋಪ ಅವಭೃತ . ಈ ಕಾಲ ಶಕ್ತಿಪೂಜೆಗೆ ಸಕಾಲ.

ವೈದಿಕ ಮಂತ್ರಗಳು ,ಪುರಾಣಗಳು ಬಹುವಾಗಿ ಮಾತೃ ಆರಾಧನಾ ವೈವಿಧ್ಯತೆಯನ್ನು ಮತ್ತು ಶಕ್ತಿ ಉಪಾಸನಾ ಮಹತ್ವವನ್ನು ನಿರೂಪಿಸುತ್ತವೆ . ಅದರೆ ಸರಳ , ಮುಗ್ದ ,  ವಿಮರ್ಶೆಗಳಿಲ್ಲದ ಮನಃಸ್ಥಿತಿಯೊಂದಿಗೆ ಈ ಚೈತನ್ಯವನ್ನು ಅಥವಾ ವಿಶ್ವವ್ಯಾಪಿ ಯಾಗಿರುವ ವಾತ್ಸಲ್ಯ - ಪ್ರೇಮಮಯಿಯಾದ ಒಂದು ಸಂಬಂಧವನ್ನು " ಅಮ್ಮ" ಎನ್ನಬಹುದು .

ಪರಬ್ರಹ್ಮನ ಚೈತನ್ಯ ಸ್ವರೂಪಿಣಿಯಾದ, ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣಳಾದ ಶಕ್ತಿಯನ್ನು ಮಹಾದೇವನ ಮಡದಿ ಯಾಗಿ ಶಿವಶಕ್ತಿ ಎಂದು ಶೈವರು, ಶ್ರೀ ಲಕ್ಷ್ಮೀ ಎಂದು ವೈಷ್ಣವರು, ಮಹಾಮಾತೆ ಎಂದು ಶಾಕ್ತರು ಪೂಜಿಸಿಸರು. ವೇದದಲ್ಲಿ ಬರುವ ರಾತ್ರೀ ಸೂಕ್ತ, ವಾಗಂಭೃಣಿಸೂಕ್ತ, ಶ್ರೀ ಸೂಕ್ತಗಳು ಮಹಾಕಾಳಿ, ಮಹಾಲಕ್ಷ್ಮೀ , ಮಹಾಸರಸ್ವತೀಯರ  ಅವಿರ್ಭಾವದ ಸ್ಪಷ್ಟ ಕಲ್ಪನೆ ನೀಡುತ್ತದೆ. ವೈದಿಕಗೊಂಡ ಶಕ್ತಿ ಆರಾಧನೆ ಮಹತ್ತ್ವವನ್ನು ಪಡೆಯಿತು.

 ಸೃಷ್ಟಿ,ಸ್ಥಿತಿ, ಲಯಗಳನ್ನು ತಾಮಸ - ರಾಜಸ - ಸಾತ್ವಿಕ ಎಂದು ಗುಣಗಳಾಗಿ ವಿಂಗಡಿಸಿ  ಆಲೋಚಿಸಲಾಯಿತು.ತಮಸ್ಸು ,ಸಮೃದ್ಧಿ ಬಳಿಕ ಪರಿಪೂರ್ಣವಾದ ಜ್ಞಾನ ( ವಿದ್ಯೆ) ಎಂದು ಪರಿಗಣಿಸಲಾಯಿತು.ಈ ಮನನ ಮಾಡುವಿಕೆಗೆ 

ಮಾರ್ಕಂಡೇಯ ಪುರಾಣದ ಸಪ್ತಶತಿಯು  ಪೂರ್ಣ ಪ್ರಮಾಣದ ವೈದಿಕ ಸಾಕ್ಷಿಯಾಗಿದೆ. ನವರಾತ್ರಿ ಪರ್ವಕಾಲದಲ್ಲಿ  ಪೂಜೆ, ಯಾಗ, ಯಜ್ಞ ,ಕನ್ನಿಕಾಪೂಜೆ,ಸುಮಂಗಲಿಯರಿಗೆ ಬಾಗಿನ ಅರ್ಪಣೆ, ಅನ್ನಸಂತರ್ಪಣೆಗಳು ವಿಶೇಷವಾಗಿ ನೆರವೇರಿಸಲಾ ಗುವುದು. 

ನವರಾತ್ರಿಯ ಅಂತ್ಯದಲ್ಲಿ ನೆರವೇರಿಸುವ ಶಾರದಾ ಮಹೋತ್ಸವವು ಮಹಾಸರಸ್ವತಿಯ ಆರಾಧನೆ.ಎಂದರೆ ತಮಸ್ಸು ಹಾಗೂ ರಜೋಗುಣಗಳ್ನು ದಾಟಿ  ಸಾತ್ವಿಕ ಭಾವದ  ಪರಿಪೂರ್ಣ ಜ್ಞಾನದ ವಿಜೃಂಭಣೆಯೇ ಆಗಿದೆ. ಸರಸ್ವತಿ ಎಂದರೆ ಶಾರದೆ ಆಕೆ ಜ್ಞಾನ ಸ್ವರೂಪಳಾದ ಒಬ್ಬಳು ತಾಯಿಯೇ ತಾನೆ.ಆದುದರಿಂದ ನವರಾತ್ರಿ ಅಕ್ಷರಾಭ್ಯಾಸ ಪ್ರಾರಂಭಕ್ಕೆ ಸೂಕ್ತ ಕಾಲ.

‌‌‌‌‌‌‌ ವಾಹನ ಪೂಜೆ,ಆಯುಧ ಪೂಜೆಗಳು ನವರಾತ್ರಿ ಸಂದರ್ಭದಲ್ಲಿ ನೆರವೇರುವುದು ಸಾಮಾನ್ಯ.  ನವರಾತ್ರಿ ಪುಣ್ಯಕಾಲದ ಜಗನ್ಮಾತೆಯ ಆರಾಧನೆಯಲ್ಲಿ ಅವರ್ಣನೀಯ ಆನಂದವಿದೆ.ಎಲ್ಲಿ ಆನಂದವಿರುತ್ತದೋ ಅಲ್ಲಿ ಸಹಜವಾದ ಸಂಭ್ರಮ ,ವೈಭವಗಳಿರುತ್ತವೆ.ಇದೇ ಉತ್ಸವ.

ಉತ್ಸಾಹ ಕಾರಣವಾಗಿ ಮನಸ್ಸು ಭಾವಗಳು ಅರಳುವ ಅನುಭವಿಸುವ ಕ್ಷಣಗಳು.ಈ ಸಂದರ್ಭದ ಪರಮಾನಂದದ ಅಭಿವ್ಯಕ್ತಿಯಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಲ ಆರಾಧನಾ ಶ್ರದ್ಧೆಗೆ ಜೋಡಿಸಲ್ಪಟ್ಟುವು.ಇಲ್ಲಿ ಎಲ್ಲ ಗೌಜಿ ಗದ್ದಲಗಳಲ್ಲಿ‌ ಒಂದು ಸಲುಗೆ ಇದೆ. ಅಮ್ಮನ  ಸನ್ನಿಧಿ ಎಂಬ ಭಾವವಿದೆ.ಆದುದರಿಂದ ಕುಣಿಯಲು ,ಕುಣಿದು ಪಾಡಲು ನವರಾತ್ರಿ ಕಾಲದಲ್ಲಿ ವಿಫುಲ ಅವಕಾಶವಿದೆ.ವಿವಿಧ ಜಾನಪದ - ಶಿಷ್ಟ ಕಲೆಗಳ ಪ್ರದರ್ಶನ ಎಲ್ಲೆಡೆ ನವರಾತ್ರಿ ಕಾಲದ ವಿಜೃಂಭಣೆಗೆ ಪೂರಕವಾಗಿ ಸಂಯೋಜಿಸಲ್ಪಡುತ್ತವೆ. ~  ಕೆ.ಎಲ್.ಕುಂಡಂತಾಯ