Header Ads Widget

ನವರಾತ್ರಿಯ ಏಳನೇ ದಿನ ಕಾಳರಾತ್ರಿ ದೇವಿಯ ಆರಾಧನೆ

 

ನವರಾತ್ರಿಯ ಏಳನೇ ದಿನ ದುರ್ಗಾಮಾತೆಯ ಭಯಂಕರ ರೂಪವೇ ಕಾಳರಾತ್ರಿ. ಗಾಡಾಂಧಕಾರದಂತೆ ಶರೀರವೆಲ್ಲಾ ಕಪ್ಪಾಗಿ ಕತ್ತೆಯ ಮೇಲೆ ವಿರಾಜಮಾನಳಾಗಿ ಭಕ್ತರ ಅಭೀಷ್ಟವನ್ನು ನೆರವೇರಿಸುವವಳೇ ಕಾಳರಾತ್ರಿ. ಈಕೆಯನ್ನು ಶುಭಂಕರಿಯೆಂದೂ ಕರೆಯುತ್ತಾರೆ. ದೇವಿಯ ಹಲವು ರೂಪಗಳಲ್ಲಿ ಬಹಳ ಭೀಭತ್ಸ್ಯವಾದ ರೂಪವೆಂದರೆ ಕಾಳರಾತ್ರಿ. ಅಸುರರ ಪಾಲಿಗೆ ದುಃಸ್ವಪ್ನ ಈ ಕಾಳರಾತ್ರಿ. ಧರ್ಮದ ರಕ್ಷಣೆಗಾಗಿ, ಅಧರ್ಮರ ಪಾಲಿಗೆ ಭಯ ಹುಟ್ಟಿಸುವವಳು ಈಕೆ. ಆದರೆ ತನ್ನನ್ನು ಪೂಜಿಸುವ ಭಕ್ತರ ಪಾಲಿಗೆ ಮಾತ್ರ ಮಾತೃಸ್ವರೂಪಿಣಿಯಾದ ಪಾರ್ವತಿಯಾಗಿರುವವಳು.

ಹೆಸರೇ ಹೇಳುವಂತೆ ತಾಯಿಯು ಕಾರ್ಗತ್ತಲು ಮತ್ತು ಸಮಯದ ರೂಪವಾಗಿದ್ದಾಳೆ. ಬ್ರಹ್ಮಾಂಡದಂತೆ ದುಂಡಗಿರುವ ತ್ರಿನೇತ್ರೆಯ ಕಣ್ಣುಗಳಿಂದ ಕಾಂತಿಯು ಹೊರಹೊಮ್ಮುತ್ತದೆ. ಶ್ವಾಸೋಶ್ವಾಸ ಮಾಡುವಾಗ ಅಗ್ನಿಯ ಜ್ವಾಲೆಗಳು ಹೊರಹೊಮ್ಮುತ್ತವೆ. ಬಲಗಡೆಯ ಕೈಗಳಲ್ಲಿ ವರಮುದ್ರೆ ಹಾಗೂ ಅಭಯಮುದ್ರೆ ಇದ್ದರೆ ಎಡಗೈಗಳಲ್ಲಿ ಕಬ್ಬಿಣದ ಮುಳ್ಳು ಹಾಗೂ ಖಡ್ಗವಿದೆ.

ರಕ್ತಬೀಜಾಸುರನನ್ನು ವಧಿಸುವ ಸಲುವಾಗಿ ದುರ್ಗೆಯು ಕಾಲರಾತ್ರಿಯ ರೂಪದಲ್ಲಿ ಅವತರಿಸುತ್ತಾಳೆ. ರಕ್ತಬೀಜಾಸುರನನ್ನು ಕೊಂದು ರಕ್ತಬೀಜಾಸುರನ ರಕ್ತದ ಒಂದು ಹನಿಯೂ ಕೆಳಗೆ ಬೀಳದಂತೆ ಕುಡಿದು ಮದದಿಂದ ನರ್ತಿಸುತ್ತಾಳೆ. ಶಿವನ ಎದೆಯ ಮೇಲೆ ಕಾಲಿಟ್ಟ ನಂತರ ಆಕೆಯು ಸಹಜ ಸ್ಥಿತಿಗೆ ಬರುತ್ತಾಳೆ. ಈಕೆಯನ್ನು ಆರಾಧಿಸುವವರ ಮನಸ್ಸು ಸಹಸಾರ ಚಕ್ರದಲ್ಲಿ ಸ್ಥಿತಗೊಂಡು ಪಾಪ ಹಾಗೂ ವಿಘ್ನಗಳು ನಾಶವಾಗಿ ಪುಣ್ಯಲೋಕ ಪ್ರಾಪ್ತಿಯಾಗುವುದು.

(ಸಂಗ್ರಹ : ಸುಶಾಂತ್ ಕೆರೆಮಠ)