ನವರಾತ್ರಿಯ ಆರನೇ ದಿನವನ್ನು ಕಾತ್ಯಾಯಿನಿ ದೇವಿ ಎಂದು ಕರೆಯಲ್ಪಡುವ ದುರ್ಗಾ ದೇವಿಯ ಉಗ್ರ ಯೋಧ ಅವತಾರಕ್ಕೆ ಸಮರ್ಪಿಸಲಾಗಿದೆ. ಸಿಂಹದ ಮೇಲೆ ಸವಾರಿ ಮಾಡುವ ಮತ್ತು ಕಮಲದ ಹೂವು, ಖಡ್ಗ ಮತ್ತು ಶಿವನ ತ್ರಿಶೂಲ ಸೇರಿದಂತೆ ಬಹು ಆಯುಧಗಳನ್ನು ತನ್ನ ಕೈಗಳಲ್ಲಿ ಹಿಡಿದಿರುವ ಮಹಿಷಾಸುರಮರ್ದಿನಿಯನ್ನು ಷಷ್ಠಿಯಂದು ಅಂದರೆ ನವರಾತ್ರಿ ಹಬ್ಬದ 6ನೇ ದಿನದಂದು ಪೂಜಿಸಲಾಗುತ್ತದೆ. ಭಕ್ತರು ದುರ್ಗಾ ದೇವಿಯ ಕೃಪೆಯನ್ನು ಬಯಸಿ ಯೋಧ ಅವತಾರವನ್ನು ಪೂಜಿಸುತ್ತಾರೆ.
ಕತ ಎಂಬ ಋಷಿ ಇದ್ದರು. ಅವರ ಮಗನ ಹೆಸರು ಕಾತ್ಯ. ಇದೇ ಕಾತ್ಯ ಋಷಿಯ ಗೋತ್ರದಲ್ಲಿ ಜನಿಸಿದವರು ಕಾತ್ಯಾಯನ. ಆ ಭಗವತಿಯು ತಮ್ಮ ಮನೆಯಲ್ಲಿ ಮಗಳಾಗಿ ಹುಟ್ಟಬೇಕು ಎಂಬ ಅಭೀಷ್ಟದಿಂದ ಅವರು ಕಠಿಣವಾದ ತಪಸ್ಸು ಮಾಡಿದರು. ಪ್ರಾರ್ಥನೆಯನ್ನು ಆ ದೇವಿಯ ನಡೆಸಿಕೊಟ್ಟಳು. ಕೆಲ ಸಮಯದ ನಂತರ ರಾಕ್ಷಸನಾದ ಮಹಿಷಾಸುರನ ಉಪಟಳವು ವಿಪರೀತ ಹೆಚ್ಚಾಯಿತು. ಆಗ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರು ಹಾಗೂ ಎಲ್ಲ ದೇವತೆಗಳು ಸೇರಿ, ತಂತಮ್ಮ ತೇಜಶ್ಶಕ್ತಿಯ ಅಂಶವನ್ನು ನೀಡಿ, ಒಬ್ಬ ದೇವಿಯನ್ನು ಸೃಷ್ಟಿ ಮಾಡಿದರು. ಆಕೆಯು ಮಹಿಷಾಸುರನ ಸಂಹಾರಕ್ಕಾಗಿಯೇ ಸೃಷ್ಟಿಯಾದವಳು. ಋಷಿಗಳಾದ ಕಾತ್ಯಾಯನರು ಈ ದೇವಿಯ ಪೂಜೆಯನ್ನು ಮೊದಲಿಗೆ ಮಾಡಿದರು. ಆ ಕಾರಣದಿಂದ ಆಕೆಗೆ ಕಾತ್ಯಾಯಿನಿ ಎಂಬ ಹೆಸರು ಬಂತು.
ಕಾತ್ಯಾಯನಿ ಮಾತೆಯನ್ನು ಪೂಜಿಸುವುದರಿಂದ ಕೀರ್ತಿ ಪ್ರಾಪ್ತವಾಗುತ್ತದೆ. ಒಬ್ಬ ವ್ಯಕ್ತಿಯು ತನ್ನ ಕಾರ್ಯಗಳಿಂದಾಗಿ ಜಗತ್ತಿನಲ್ಲಿ ಖ್ಯಾತಿಯನ್ನು ಪಡೆಯುತ್ತಾನೆ. ಶತ್ರುಗಳ ಮೇಲಿನ ವಿಜಯಕ್ಕಾಗಿ ತಾಯಿ ಕಾತ್ಯಾಯನಿಯನ್ನೂ ಪೂಜಿಸಲಾಗುತ್ತದೆ. ಆಕೆಯು ಋಣಾತ್ಮಕ ಶಕ್ತಿಗಳನ್ನು ನಾಶ ಮಾಡುವ ದೇವತೆಯಾಗಿ ಗುರುತಿಸಿಕೊಂಡಿದ್ದಾಳೆ.
(ಸಂಗ್ರಹ : ಸುಶಾಂತ್ ಕೆರೆಮಠ)