ಕರ್ನಾಟಕ ರಾಜ್ಯದ ಸರಿ ಸುಮಾರು 6,000 ದಷ್ಟು ಗ್ರಾಮ ಪಂಚಾಯತಿಗಳ ಆಡಳಿತ ವ್ಯವಸ್ಥೆ ಸಿಬ್ಬಂದಿಗಳ ಮುಷ್ಕರದಿಂದಾಗಿ ಸ್ಥಗಿತ ಆಗಿದೆ. ರಾಜ್ಯದಲ್ಲಿರುವ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಲೆಕ್ಕ ಸಹಾಯಕರು, ನೀರು ಸರಬರಾಜು ಸಿಬ್ಬಂದಿಗಳು, ಸ್ವಚ್ಛತಾ ಕಾರ್ಯಕರ್ತರ ಸಹಿತ ಇಡೀ ಪಂಚಾಯತಿಯ ಕಾರ್ಯಾಂಗ ಕೆಲಸವನ್ನು ಸ್ಥಗಿತಗೊಳಿಸಿ, ಬೆಂಗಳೂರಿನ ಫ್ರೀಡಂ ಪಾರ್ಕ್ ಸೇರಿದಂತೆ, ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದಾಗಿ ಪಂಚಾಯತ್ ನ ಸಣ್ಣಪುಟ್ಟ ಕೆಲಸವು ಆಗದಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಸಾಮಾನ್ಯ ಸಭೆಗಳು ನಡೆಯದೆ ಸ್ಥಳೀಯಾಡಳಿತದಿಂದ ಸಿಗಬೇಕಾದ ಪರವಾನಿಗೆಗಳು, ನೀರು ಸರಬರಾಜು, ತೆರಿಗೆ ಸಂಗ್ರಹ ವ್ಯವಸ್ಥೆಗಳಿಂದ ಜನಸಾಮಾನ್ಯರು ವಂಚಿತರಾಗುತ್ತಿದ್ದಾರೆ. ಇಷ್ಟೆಲ್ಲಾ ನಡೆದು ವಾರಗಟ್ಟಲೆ ಪಂಚಾಯತ್ ರಾಜ್ ಆಡಳಿತ ಸ್ಥಗಿತವಾಗಿದ್ದರೂ ಸರ್ಕಾರ ಮೌನ ವಹಿಸುವುದು ಸರಿಯಲ್ಲ. ಈ ಹಿನ್ನಲೆಯಲ್ಲಿ ತಾವು ಮಧ್ಯಪ್ರವೇಶಿಸಿ, ಗ್ರಾಮೀಣಾಭಿವೃದ್ಧಿ ಸಚಿವರು ಮತ್ತು ಸಿಬ್ಬಂದಿಗಳ ಸಂಘಟನೆಯ ಮುಖಂಡರನ್ನು ಕರೆದು ಸಮಸ್ಯೆ ಬಗೆಹರಿಸಬೇಕೆಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
ಪಂಚಾಯತ್ ಸಿಬ್ಬಂದಿಗಳು ಸರಳವಾದ ಬೇಡಿಕೆಯನ್ನು ಮುಂದಿಟ್ಟಿದ್ದು, ಕೆಡಿಪಿ ಸಭೆ ನಡೆಸಲು ತಮಗಿರುವ ಸಮಸ್ಯೆಯನ್ನು ವಿವರಿಸಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಬಿ- ದರ್ಜೆ ನೌಕರರನ್ನಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದ್ದು, ಈಗಾಗಲೇ ಕಡತ ಒಂದು ಹಂತದಲ್ಲಿ ವಿಲೇವಾರಿ ಆಗಬೇಕಾಗಿದೆ. ಆರೇಳು ವರ್ಷಗಳ ಕಾಲ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಜಿಲ್ಲಾಮಟ್ಟದಲ್ಲಿ ಕೌನ್ಸಿಲ್ ಮೂಲಕ ವರ್ಗಾಯಿಸಬೇಕೆಂಬ ಅವರ ಬೇಡಿಕೆ ಅರ್ಥಪೂರ್ಣವಾಗಿದೆ. ಜೇಷ್ಠತೆ ಪಟ್ಟಿಯನ್ನು ವಿಳಂಬವಿಲ್ಲದೆ ಅಂತಿಮಗೊಳಿಸಿ, ಭಡ್ತಿ ಕ್ರಮ ಕೈಗೊಳ್ಳಬೇಕೆಂಬ ಸಿಬ್ಬಂದಿಗಳ ಆಗ್ರಹ ಪರಿಗಣಿಸುವಂತಹ ಸ್ಥಿತಿಯದ್ದಾಗಿರುತ್ತದೆ. ಉದ್ಯೋಗ ಖಾತ್ರಿ ಯೋಜನೆ ಮತ್ತು ವೃಂದ ನೇಮಕಾತಿ ನಿಯಮಗಳನ್ನು ರಚಿಸಲು ಸರ್ಕಾರಕ್ಕೆ ಸಾಧ್ಯವಾಗಲಿದೆ. ಕರ ವಸೂಲಿಗಾರರು, ಡಾಟಾ ಎಂಟ್ರಿ ಆಪರೇಟರ್ ಗಳು, ನೀರುಗಂಟಿ ಜವಾನ ಮತ್ತು ಸ್ವಚ್ಛತೆಗಾರರ ವೇತನ ಪರಿಷ್ಕರಣಿಯನ್ನು ಸರ್ಕಾರ ಮಾನವೀಯ ನೆಲೆಯಲ್ಲಿ ಮಾಡಬಹುದಾಗಿದೆ. ಈ ಸರಳವಾದ ಬೇಡಿಕೆಯನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಂಡರೆ ಪಂಚಾಯತ್ ನೌಕರರ ಸತ್ಯಾಗ್ರಹ ಮುಗಿಯುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ಪಂಚಾಯತ್ ರಾಜ್ ಆಡಳಿತ ಸ್ಥಗಿತಗೊಳ್ಳುವ ಸಂಭವವಿದ್ದು, ಕರ್ನಾಟಕ ಮುಖ್ಯಮಂತ್ರಿಗಳಾದ ನೀವು ಪಂಚಾಯತ್ ರಾಜ್ ಸಚಿವರೊಡನೆ ಮಧ್ಯಪ್ರವೇಶಿಸಿ ವಿಧಾನಸೌಧದಲ್ಲಿ ತುರ್ತು ಸಭೆಯನ್ನು ಕರೆದು ಸಮಸ್ಯೆಯನ್ನು ಬಗೆಹರಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ.