Header Ads Widget

ನವರಾತ್ರಿಯ ಎಂಟನೇ ದಿನ 'ಮಹಾಗೌರಿ'ಯ ಆರಾಧನೆ

ಮಹಾದೇವಿಯ ನವದುರ್ಗೆಯ ಅಂಶಗಳಲ್ಲಿ ಮಹಾಗೌರಿ ಎಂಟನೇ ರೂಪವಾಗಿದೆ. ನವರಾತ್ರಿಯ ಎಂಟನೇಯ ದಿನದಂದು ಆಕೆಯನ್ನು ಪೂಜಿಸಲಾಗುತ್ತದೆ. ಹಿಂದೂ ಧರ್ಮದ ಪ್ರಕಾರ, ಮಹಾಗೌರಿ ತನ್ನ ಭಕ್ತರ ಎಲ್ಲಾ ಆಸೆಗಳನ್ನು ಪೂರೈಸುವ ಶಕ್ತಿಯನ್ನು ಹೊಂದಿದ್ದಾಳೆ. ಮಹಾಗೌರಿ ಎಂಬ ಹೆಸರು ಅತ್ಯಂತ ಪ್ರಕಾಶಮಾನವಾದ, ಸ್ವಚ್ಛವಾದ ಮೈಬಣ್ಣ, ಚಂದ್ರನಂತೆ ಹೊಳಪು ಎಂದು ಅನುವಾದಿಸುತ್ತದೆ. 

ಗೌರಿಯು ಗಿರಿಗಳ ಪುತ್ರಿ. ಅವಳು ಎತ್ತಿನ ಮೇಲೆ ಕುಳಿತಿರುತ್ತಾಳೆ. ಆಕೆಗೆ ನಾಲ್ಕು ಕೈಗಳು. ಒಂದು ಕೈಯಲ್ಲಿ ಢಮರು ಹಾಗೂ ಇನ್ನೊಂದು ಕೈಯಲ್ಲಿ ತ್ರಿಶೂಲ ಇರುತ್ತದೆ. ಶ್ವೇತ ವಸ್ತ್ರಧಾರಿಣಿಯಾಗಿರುವ ಗೌರಿ ದೇವಿಯ ಮುಖವು ಶಾಂತ ಸ್ವಭಾವವಾಗಿರುತ್ತದೆ. ಚಂದ್ರನ ತೇಜಸ್ಸು ಆಕೆಯ ಮುಖದಲ್ಲಿ ಲಾಸ್ಯವಾಡುತ್ತಿರುತ್ತದೆ. ಆಕೆ ಮತ್ತೊಂದು ಕೈಯ್ಯಲ್ಲಿ ಭಕ್ತರಿಗೆ ಆಶೀರ್ವಾದ ಮಾಡುತ್ತಿರುತ್ತಾಳೆ.

ಪಾರ್ವತಿ ದೇವಿಯು ಮನುಷ್ಯರ ಅವತಾರ ಎತ್ತಿ ಭೂಮಿಯಲ್ಲಿ ಜನಿಸಿದಳು. ಶಿವನ್ನು ಪಡೆಯುವುದು ಆ ಜನ್ಮದಲ್ಲಿ ಅವಳ ಗುರಿಯಾಗಿರುತ್ತದೆ. ನಾರದ ಮಹರ್ಷಿಗಳ ಸಲಹೆಯ ಮೇರೆಗೆ ಸುದೀರ್ಘ ತಪಸ್ಸಿಗೆ ಕುಳಿತ ಆಕೆಯು ಅನ್ನಾಹಾರ, ನೀರು ತ್ಯಜಿಸಿದಳು. ಸುದೀರ್ಘ ಕಾಲ ಆಕೆ ತಪಸ್ಸಿಗೆ ಕುಳಿತ ಕಾರಣ ಆಕೆಯ ಮೈಗೆ ಧೂಳು ಮತ್ತಿಕೊಂಡಿತು. ಬಳ್ಳಿಗಳು ಬೆಳೆದವು. ಸೂರ್ಯನ ವಿಪರೀತ ಶಾಖದಿಂದ ಆಕೆಯ ದೇಹವು ಬೆಂದುಹೋದಂತಾಯಿತು. ಆದರೂ ಆಕೆ ಸಾವಿರ ವರ್ಷಗಳ ಕಾಲ ಶಿವನಿಗಾಗಿ ಕಾದು ಕುಳಿತಳು.

ಪಾರ್ವತಿಯ ಭಕ್ತಿಗೆ ಮೆಚ್ಚಿ ಪ್ರತ್ಯಕ್ಷನಾದ ಶಿವನು, ಆಕೆಯ ಸ್ಥಿತಿ ಕಂಡು ಗಂಗೆಯ ಪವಿತ್ರ ಜಲವನ್ನು ಆಕೆಯ ಮೇಲೆ ಪ್ರೋಕ್ಷಣೆ ಮಾಡಿದಾಗ ಆಕೆಯ ಮುಖ ಮೊದಲಿಗಿಂತ ತೇಜಸ್ವಿಯಾಯಿತು. ಸ್ಪಟಿಕದ ಕಲ್ಲಿನಂತೆ ಹೊಳೆಯುತ್ತಿದ್ದ ಆಕೆಯ ಮುಖವು ಚಂದ್ರನ ಶಾಂತತೆಯನ್ನು ಹೊಂದಿತು. ಆಕೆಯು ಮಹಾಗೌರಿಯಾಗಿ ಹೊಸ ಜನ್ಮ ಎತ್ತಿದಳು. ಶಿವನು ಆಕೆಯ ಭಕ್ತಿಗೆ ಮೆಚ್ಚಿ ಆಕೆಯನ್ನು ವರಿಸಿದ. 

(ಸಂಗ್ರಹ : ಸುಶಾಂತ್ ಕೆರೆಮಠ)