ಮಲಬಾರ್ ವಿಶ್ವ ಸಾಹಿತ್ಯ ಪುರಸ್ಕಾರ 2024
ಪುರಸ್ಕೃತರು
ಡಾ. ಉಮೇಶ್ ಪುತ್ರನ್
ಮಲಬಾರ್ ವಿಶ್ವ ಸಾಹಿತ್ಯ ಪುರಸ್ಕಾರಕ್ಕೆ ಭಾಜನರಾದ ಡಾ. ಉಮೇಶ್ ಪುತ್ರನ್* ಅವರು ಚರ್ಮರೋಗ ಹಾಗೂ ಸೌಂದರ್ಯವರ್ಧಕ ಚಿಕಿತ್ಸಾ ವಿಭಾಗದಲ್ಲಿ ಎಂಡಿ ಪದವಿಯನ್ನು ಪಡೆದು ಕುಂದಾಪುರದಲ್ಲಿ ಪ್ರತಿಷ್ಠಿತ ಮಲ್ಟಿ ಸ್ಪೆಷಾಲಿಟಿ ಚಿನ್ಮಯಿ ಆಸ್ಪತ್ರೆಯನ್ನು ಕುಟುಂಬದವರೊಡನೆ ಸ್ಥಾಪಿಸಿ ಇದರ ವೈದ್ಯಕೀಯ ನಿರ್ದೇಶಕರಾಗಿರುವರು.
ಇವರು ಅನೇಕ ಸಂಘಟನೆಗಳಲ್ಲಿ ಸಕ್ರಿಯ ಸದಸ್ಯರಾಗಿಯೂ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುತ್ತಾರೆ.
ವಿಶೇಷವಾಗಿ ಹೇಳಬೇಕೆಂದರೆ ಭಾರತೀಯ ವೈದ್ಯಕೀಯ ಸಂಘ ಕುಂದಾಪುರ ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಇದರ ಮಾಜಿ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರು ಆಗಿರುತ್ತಾರೆ. ರೋಟರಿ ಜಿಲ್ಲಾ ಮಟ್ಟದಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿರುವ ಇವರು ರೋಟರಿ ಫೌಂಡೇಶನ್ ಇದರ ಮೇಜರ್ ಡೋನರ್ ಕೂಡ ಆಗಿರುತ್ತಾರೆ.
ಪ್ರಸ್ತುತ ಕಳೆದ ಮೂರು ವರ್ಷಗಳಿಂದ ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದು ಒಂದು ಬಾರಿ ಜಿಲ್ಲಾ ಹಾಗೂ ಎರಡು ಬಾರಿ ತಾಲೂಕು ಸಾಹಿತ್ಯ ಸಮ್ಮೇಳನಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ.
ಮೂಡಬಿದರೆಯ ಮೋಹನ್ ಆಳ್ವರ ನೇತೃತ್ವದಲ್ಲಿ ವಿವಿಧ ಜಿಲ್ಲೆಗಳಲ್ಲಿ ಆಳ್ವಾಸ್ ನುಡಿಸಿರಿ ಘಟಕವು ಸ್ಥಾಪನೆಯಾಗಿದ್ದು ಇದರ ಕುಂದಾಪುರ ಘಟಕದ ಅಧ್ಯಕ್ಷರಾಗಿ ಅನೇಕ ಸಾಂಸ್ಕೃತಿಕ ಉತ್ಸವಗಳನ್ನು ನಡೆಸಿದ ಹೆಗ್ಗಳಿಕೆ ಇವರದು.
ಇವರು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಘಟಕದ ವೈಯ್ಸ್ ಚೇರ್ಮನ್ ಆಗಿದ್ದು.. ಕುಂದಾಪುರ ಘಟಕವು ಸತತ 7ನೇ ಬಾರಿಗೆ ರಾಜ್ಯದಲ್ಲಿ ಅತ್ಯುತ್ತಮ ತಾಲೂಕು ರೆಡ್ ಕ್ರಾಸ್ ಘಟಕವಾಗಿ ಮೂಡಿಬಂದು ಕರ್ನಾಟಕ ಸರಕಾರದ ಮಾನ್ಯ ರಾಜ್ಯಪಾಲರಿಂದ ಪ್ರಶಸ್ತಿಯನ್ನು ಪಡೆದಿರುವುದು ಅತ್ಯಂತ ಸಂತೋಷದ ವಿಷಯ.
ಇವರು ವಿದ್ಯಾರ್ಥಿಗಳಿಗಾಗಿ ವೃತ್ತಿ ಮಾರ್ಗದರ್ಶನ, ಮಹಾಮಾರಿ ಏಡ್ಸ್, ರಸ್ತೆ ಸುರಕ್ಷತೆ, ಆರೋಗ್ಯ ಮತ್ತು ಕಾಯಿಲೆಗಳ ಬಗ್ಗೆ ಇರುವ ಮೂಡನಂಬಿಕೆಗಳು ಹೀಗೆ ಅನೇಕ ಪುಸ್ತಕಗಳನ್ನು ಬರೆದು ಪ್ರಕಟಿಸಿ ವಿದ್ಯಾರ್ಥಿಗಳಿಗೆ ಮತ್ತು ರೋಟರಿ ಸಂಸ್ಥೆಗಳಿಗೆ ಸಾವಿರಾರು ಪುಸ್ತಕಗಳನ್ನು ಉಚಿತವಾಗಿ ವಿತರಿಸಿದ್ದಾರೆ. ಸ್ವಾತಂತ್ರ್ಯದ ಆ ಕ್ಷಣಗಳು ಹಾಗೂ those moments of freedom ಇವರ ಇತ್ತೀಚಿನ ಕೃತಿಗಳು.
ಇವರು ಬರೆದಂತಹ ವೈದ್ಯಕೀಯ ಹಾಗೂ ಇತರ ಅನೇಕ ಲೇಖನಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವಿದ್ಯಾರ್ಥಿಗಳಿಗಾಗಿ ನೂರಾರು ವಿಕಸನ ಶಿಬಿರಗಳನ್ನು ನಡೆಸಿಕೊಟ್ಟು,ಇವರ ಟ್ರಸ್ಟಿನಿಂದ ಅನೇಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಗಳನ್ನು ಸಲ್ಲಿಸುತ್ತಾ ಎಲೆ ಮರೆಯ ಕಾಯಿಯಂತೆ ತಮ್ಮ ಕಾರ್ಯಗಳನ್ನು ಸದ್ದಿಲ್ಲದೆ ಮಾಡುತ್ತಾ ಬಂದಿದ್ದಾರೆ.
ಬೆಂಗಳೂರಿನ ಆರ್ಯಭಟ ಪ್ರತಿಷ್ಠಾನ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ 2019ಕ್ಕೆ ಪಾತ್ರರಾಗಿರುವ ಹೆಗ್ಗಳಿಕೆ ಇವರದು. ಇದರ ಜೊತೆ ಅನೇಕ ಸಂಘಟನೆಗಳು ಇವರ ಕಾರ್ಯ ವ್ಯೆಖರಿಯನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿವೆ.
ಇವರ ಧರ್ಮಪತ್ನಿ ಶ್ರೀಮತಿ ಸುಮಾ ಪುತ್ರನ್ ಹಾಗೂ ಚಿನ್ಮಯಿ ಮತ್ತು ಚಿರಾಗ್ ಎನ್ನುವ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ. ಇವರ ಇಬ್ಬರೂ ಮಕ್ಕಳು ವೈದ್ಯರಾಗಿರುವುದು ಇನ್ನೊಂದು ಹೆಮ್ಮೆಯ ವಿಚಾರ.
ಇಂತಹ ಅದ್ಭುತ ಸಂಘಟಕ, ಸಾಹಿತಿ ನಮ್ಮೆಲ್ಲರ ಅಭಿಮಾನದ,ಪ್ರೀತಿಯ ಡಾ. ಉಮೇಶ್ ಪುತ್ರನ್ ಇವರಿಗೆ ವೈದ್ಯ ಸಾಹಿತ್ಯಕ್ಕಾಗಿ ಮಲಬಾರ್ ವಿಶ್ವ ಸಾಹಿತ್ಯ ಪುರಸ್ಕಾರ-2024ನ್ನು ನೀಡುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಹಾಗೂ ಗೌರವದ ವಿಚಾರವಾಗಿದೆ.
✍️ ಶ್ರೀಮತಿ ಸಂಧ್ಯಾ ಶೆಣೈ ಉಡುಪಿ
ಸಂಚಾಲಕರು, ಮಲಬಾರ್ ವಿಶ್ವ ಸಾಹಿತ್ಯ ಪುರಸ್ಕಾರ ಸಮಿತಿ