ಮಾಧ್ಯಮದವರ ಮೇಲೆ ಪೊಲೀಸ್ ದೌರ್ಜನ್ಯವಾಗದಂತೆ ಸೂಕ್ತ ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ಕೂಡಲೇ ನಿರ್ದೇಶನ ನೀಡಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ ಅವರು ಭರವಸೆ ನೀಡಿದ್ದಾರೆ.
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಶುಕ್ರವಾರ ವಿಧಾನಸೌಧದಲ್ಲಿ ಗೃಹ ಸಚಿವರನ್ನು ಭೇಟಿ ಮಾಡಿ, ಮೈಸೂರಿನಲ್ಲಿ ದಸರಾ ಸಂದರ್ಭದಲ್ಲಿ ಕರ್ತವ್ಯನಿರತ ಪೋಟೋಗ್ರಾರ್ಸ್‌ಗಳ ಮೇಲೆ ಪೊಲೀಸರು ಮಾಡಿರುವ ದೌರ್ಜನ್ಯ ಮತ್ತು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ಪತ್ರಕರ್ತರ ಮೇಲೆ ನಡೆದ ದೌರ್ಜನ್ಯದ ಘಟನೆಗಳನ್ನು ಗೃಹ ಸಚಿವರ ಗಮನಕ್ಕೆ ತಂದರು.
ಕರ್ತವ್ಯ ನಿರತ ಪತ್ರಕರ್ತರು, ಪೋಟೋಗ್ರಾರ್ಸ್, ವಿಡಿಯೋ ಜರ್ನಲಿಸ್ಟ್‌ಗಳ ಮೇಲೆ, ಆಗಿಂದಾಗ್ಗೆ ದೌರ್ಜನ್ಯ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಕೆಯುಡಬ್ಲೂಜೆ ಒತ್ತಾಯಿಸಿತು.
ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಸಚಿವರು, ಮಾಧ್ಯಮದವರು ಮೇಲೆ ಈ ರೀತಿಯ ಘಟನೆಗಳು ಆಗಬಾರದು. ಹಿರಿಯ ಅಧಿಕಾರಿಗಳ ಹಂತದಲ್ಲಿ ಈ ರೀತಿಯ ಘಟನೆಗಳು ಆಗುವುದಿಲ್ಲ. ಆದರೆ, ತಳ ಹಂತದಲ್ಲಿ ಒಮ್ಮೊಮ್ಮೆ ಘಟನೆಗಳು ನಡೆದಿರುವುದು ನನ್ನ ಗಮನಕ್ಕೆ ಬಂದಿದೆ ಎಂದರು.
ಮೈಸೂರಿನಲ್ಲಿ ಪೋಟೋಗ್ರಾರ್ಸ್ ಮೇಲೆ ನಡೆದಿರುವ ಘಟನೆಯ ಬಗ್ಗೆ ಮೈಸೂರು ಪೊಲೀಸ್ ಆಯುಕ್ತರ ಜೊತೆ ಮಾತನಾಡುತ್ತೇನೆ. ತೀರ್ಥಹಳ್ಳಿ ಘಟನೆ ಬಗ್ಗೆಯೂ ಪರಿಶೀಲಿಸುತ್ತೇನೆ. ಎರಡೂ ಘಟನೆಗಳ ಬಗ್ಗೆ ಸೂಕ್ತ ಕ್ರಮಕ್ಕೆ ಸೂಚಿಸುವುದಾಗಿ ತಿಳಿಸಿದರು